ದಾವಣಗೆರೆ.ಮೇ.೨೦: ಸಾಮಾಜಿಕ ನ್ಯಾಯದಡಿ ನೀಡುವ ಗೃಹಲಕ್ಷ್ಮಿ, ಅಂಗವಿಕಲರ ವೇತನ, ವಿಧವಾ, ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಯಾವುದೇ ಸಬ್ಸಿಡಿ ಹಣ ಸಾಲಕ್ಕೆ ಜಮಾ ಮಾಡದಂತೆ ಸರ್ಕಾರ ಸೂಚಿಸಿದ್ದರೂ ತಾಲೂಕಿನ ಆನಗೋಡು ಗ್ರಾಮದ ವಿಜಯಾ ಬ್ಯಾಂಕ್‌ನಲ್ಲಿ ಸಾಮಾಜಿಕ ಭದ್ರತೆ, ಸಬ್ಸಿಡಿ ಹಣ ಸಾಲಕ್ಕೆ ಹಣ‍ ಮಾಡಲಾಗಿದ್ದು, ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬ್ಯಾಂಕ್ ಗಳಿಂದ ಬಾದಿತರಾದ ಜನರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ದಾವಣಗೆರೆ ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ,ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದ ನಾಗಮ್ಮ ರಮೇಶ ಎಂಬ ಮಹಿಳೆಗೆ ಅಂಗವಿಕಲರ ಕಲ್ಯಾಣ ಇಲಾಖೆಯಿಂದ 35 ಸಾವಿರ ಸಹಾಯಧನ, 65 ಸಾವಿರ ಸಾಲ ಸೇರಿದಂತೆ 1 ಲಕ್ಷ ರೂ. ಪಡೆದಿದ್ದರು. ಈಗಾಗಲೇ 50 ಸಾವಿರ ಸಾಲ ಮರು ಪಾವತಿಸಿದ್ದಾರೆ. ಉಳಿದ 15 ಸಾವಿರ ಹಣ ಕಾರಣಾಂತರದಿಂದ ಕಟ್ಟಲು ಆಗಿರಲಿಲ್ಲ. ಈಗ 15 ಸಾವಿರ ಹಣಕ್ಕೆ ಗೃಹಲಕ್ಷ್ಮಿ,, ಉದ್ಯೋಗ ಖಾತರಿ, ಅಂಗವಿಕಲರ ವೇತನ ಇತರೆ ಎಲ್ಲಾ ಬಗೆಯ ಸಬ್ಸಿಡಿ ಹಣವನ್ನು ಆನಗೋಡು ವಿಜಯಾ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಆನಗೋಡು ಗ್ರಾಮದ ವಿಜಯ ಬ್ಯಾಂಕ್ ವ್ಯವಸ್ಥಾಪಕ ಕಳೆದ 6 ತಿಂಗಳಿನಿಂದಲೂ ಗ್ರಾಹಕರು, ಸಾರ್ವಜನಿಕರೊಂದಿಗೆ ಉದ್ಧಟತನದ ವರ್ತನೆ ತೋರುತ್ತಿದ್ದಾರೆ. ಸಾಕಷ್ಟು ಸಲ ರೈತರು, ಗ್ರಾಮೀಣರು, ಬ್ಯಾಂಕ್‌ನ ಗ್ರಾಹಕರು ತಿಳಿ ಹೇಳಿದರೂ ಸಹ ಬ್ಯಾಂಕ್ ವ್ಯವಸ್ಥಾಪಕ ತಮ್ಮ ವರ್ತನೆ ತಿದ್ದಿಕೊಳ್ಳುತ್ತಿಲ್ಲ. ಮತ್ತಷ್ಟು ಉದ್ಧಟತನದ ವರ್ತನೆ ಮುಂದುವರಿಸಿದ್ದಲ್ಲದೇ, ಇದೀಗ ಬಡ ಮಹಿಳೆಯರಿಗೆ ಬಂದ ಹಣ, ಸಬ್ಸಿಡಿ ಹಣವನ್ನೂ ಸಾಲಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ದುಂಡಾವರ್ತನೆ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.

ಹೊನ್ನೂರಿನ ನಾಗಮ್ಮ,15 ಸಾವಿರ ರು. ಸಾಲದ ಬಾಕಿಗೆ ಸಾಮಾಜಿಕ ಭದ್ರತೆ ಹಣವಾದ ಅಂಗವಿಕಲರ ಮಾಸಾಶನ, ಉದ್ಯೋಗ ಖಾತರಿ, ಗೃಹಲಕ್ಷ್ಮಿ ಯೋಜನೆ ಹಣವನ್ನಾಗಲೀ, ಸಬ್ಸಿಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳದಂತೆ ಮನವಿ ಮಾಡಿದ್ದರೂ, ವಿಜಯ ಬ್ಯಾಂಕ್‌ ಆನಗೋಡು ಶಾಖೆ ವ್ಯವಸ್ಥಾಪಕ ಕಿವಿಗೊಟ್ಟಿಲ್ಲ. ದಾವಣಗೆರೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಕರು ಸೌಜನ್ಯಕ್ಕೂ ಸ್ಪಂದಿಸಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ದಾವಣಗೆರೆ ಜಿಲ್ಲೆಯ ಅನೇಕ ಬ್ಯಾಂಕ್‌ಗಳಲ್ಲಿ ಹೀಗೆಯೇ ಆಗುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ಯಾವುದೇ ಕಾರಣಕ್ಕೂ ಸಾಮಾಜಿಕ ಭದ್ರತಾ ಯೋಜನೆ ಹಣ, ಗೃಹಲಕ್ಷ್ಮಿ ಯೋಜನೆ, ಉದ್ಯೋಗ ಖಾತರಿ ಯೋಜನೆ ಕೂಲಿ ಹಣ, ಅಂಗವಿಕಲರ ಮಾಸಾಶನ, ವೃದ್ಧಪ್ಯಾ ವೇತನ, ವಿಧವಾ ವೇತನ ಹೀಗೆ ಯಾವುದನ್ನೂ ಬ್ಯಾಂಕ್‌ಗಳು ಸಾಲಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಾರದು. ಈ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿನಿಂದಲೇ ರೈತ ಸಂಘ ಮತ್ತು ಹಸಿರು ಸೇನೆ ಹೋರಾಟ ಆರಂಭಿಸುತ್ತಿದೆ ಎಂದು  ಹೇಳಿದರು.ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸಹ ಸಾಲದ ಖಾತೆಗೆ ಯಾವುದೇ ಯೋಜನೆ ಹಣವನ್ನು ಜಮಾ ಮಾಡಿಕೊಳ್ಳದಂತೆ ಹೇಳಿದ್ದರೂ ಸಹ ರಾಜ್ಯದ ಬಹುತೇಕ ಬ್ಯಾಂಕ್‌ಗಳು ಅದಕ್ಕೆಲ್ಲಾ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ನಿಂದ ಬಾದಿತರಾದವರ ಪರವಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೋರಾಟಕ್ಕೆ ಸಜ್ಜಾಗಿದೆ. ಬಡ ಜನರಿಗೆ ಬ್ಯಾಂಕ್‌ಗಳಿಂದ ಇಂತಹ ಅನ್ಯಾಯವಾಗದಂತೆ ನೋಡಿಕೊಳ್ಳುವ ಕೆಲಸವನ್ನು ಸಂಘ ಮಾಡಲಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಕುರ್ಕಿ ಹನುಮಂತ, ಪೂಜಾರ್ ಅಂಜಿನಪ್ಪ ನಿಟುವಳ್ಳಿ, ಆಲೂರು ಪುಟ್ಟನಾಯ್ಕ, ಪರಶುರಾಮ, ಇತರರು ಇದ್ದರು

Share.
Leave A Reply

Exit mobile version