ದಾವಣಗೆರೆ; ನಗರದ ನಮನ ಅಕಾಡೆಮಿಯ ೪೦ ಕ್ಕೂ ಹೆಚ್ಚು ಮಕ್ಕಳು ಪ್ರಸ್ತುತ ಪಡಿಸಿದ ಕರ್ನಾಟಕ ಏಕೀಕರಣ ಕುರಿತಾದ “ಕರ್ನಾಟಕ ನಮನ” ನೃತ್ಯ ರೂಪಕವು ಅದ್ಭುತವಾಗಿ ಮೂಡಿ ಬಂದಿತು. ನಮನ ಅಕಾಡೆಮಿಯ ಗುರುಗಳಾದ ವಿದುಷಿ ಶ್ರೀಮತಿ ಮಾಧವಿ.ಡಿ.ಕೆ. ಅವರ ಶ್ರಮ ಶ್ಲಾಘನೀಯ. ನಮ್ಮ ದಾವಣಗೆರೆಯ ಕಲಾವಿದರು ಯಾವುದೇ ಮೆಟ್ರೋ ಪಾಲಿಟಿನ್ ಸಿಟಿಗೂ ಕಡಿಮೆ ಇಲ್ಲ ಎಂಬುದನ್ನು ನಮನ ಅಕಾಡೆಮಿಯ ಕಲಾವಿದರು ತೋರ್ಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಗಾಜಿನ ಮನೆಯ ಆವರಣದಲ್ಲಿ ನ. ೩೦ರ ಗುರುವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಸ್ಮಾರ್ಟ್ಸಿಟಿ ಸಹಯೋಗದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವ ಆಚರಣೆಯ ಕೊನೆಯ ದಿನವಾದ ಇಂದು ನಡೆದ ನೃತ್ಯ ಕಾರ್ಯಕ್ರಮ ನಿಜಕ್ಕೂ ಮನಸ್ಸಿಗೆ ಹಿತವನ್ನು ನೀಡಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ತೋಟಗಾರಿಗೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್, ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಧುಗೌಡ, ನಮನ ಅಕಾಡೆಮಿಯ ನೃತ್ಯ ಗುರು ವಿದುಷಿ ಡಿ.ಕೆ.ಮಾಧವಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮಾನಸ ಹಾಗೂ ಶ್ರೀಧರ್ ಹಾಡುಗಾರಿಕೆ ಹಾಗೂ ನಮನ ಅಕಾಡೆಮಿಯ ಮಕ್ಕಳಿಂದ ಭರತನಾಟ್ಯ, ಕರ್ನಾಟಕ ಏಕೀಕರಣದ ಬಗ್ಗೆ “ಕರ್ನಾಟಕ ನಮನ” ನೃತ್ಯ ರೂಪಕವು ನೆರೆದಿದ್ದ ಪ್ರೇಕ್ಷಕರಿಗೆ ಮುದ ನೀಡಿದವು. ಎಚ್.ಎಂ.ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.