ನಂದೀಶ್ ಭದ್ರಾವತಿ ದಾವಣಗೆರೆ

ಸದನದಲ್ಲಿ ಬಾರ್‌ಲೈಸೆನ್ಸ್ ನೀಡಿಕೆ ಸಂಬಂಧಿಸಿದಂತೆ ಕಾವೇರಿದ ಚರ್ಚೆ ನಡೆದಿದ್ದು ಎಲ್ಲರಿಗೆ ಗೊತ್ತಿರುವ ವಿಷಯ.
ಅಲ್ಲದೇ ಸಿಎಲ್-7 ಸನ್ನದುಗಳ ನೀಡಿಕೆಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ, ಮನಸ್ಸಿಗೆ ಬಂದಂತೆ ನೀಡಲಾಗುತ್ತಿದೆ ಎಂಬ ಸದಸ್ಯರ ಆರೋಪ ಸರಿ ಇದೆ ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ.

ಹೌದು…ದಾವಣಗೆರೆ ಅಬಕಾರಿ ಡಿಸಿ ಸ್ವಪ್ನ ಮೇಲೆ ಲೋಕಾಯುಕ್ತ ಅಧಿಕಾರಿಗಳು ಈ ಹಿಂದೆ ಲಂಚದ ಆರೋಪದಡಿ ಬಂಧಿಸಿದ್ದರು. ಬಳಿಕ ಜೈಲಿಗೆ ಹೋಗಿ ಬಂದು ಜಾಮೀನು ಪಡೆದು ಮತ್ತೆ ಅದೇ ಅಬಕಾರಿ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ದೂರುದಾರ ರಘುನಾಥ್

ದೂರುದಾರ ರಘುನಾಥ್ ಹೇಳುವ ಪ್ರಕಾರ, ಯಾವುದೇ ಸರಕಾರಿ ಅಧಿಕಾರಿ 48 ಗಂಟೆ ಜೈಲಿಗೆ ಹೋದರೆ ಅವರನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳು ಅಮಾನತು ಮಾಡಬೇಕು. ಆದರೆ ಆ ಕೆಲಸವನ್ನು ಸರಕಾರ ಮಾಡಿಲ್ಲ. ಇನ್ನು ಲೋಕಾಯುಕ್ತ ದಾಳಿಗೊಳಗಾದ ಭ್ರಷ್ಟ ಅಧಿಕಾರಿಯನ್ನು ಮತ್ತದೇ ಸ್ಥಾನಕ್ಕೆ ನೇಮಿಸುವಂತಿಲ್ಲ. ಆದರೂ ಅವರನ್ನು ಅಬಕಾರಿ ಉಪಯುಕ್ತರನ್ನಾಗಿ ನೇಮಿಸಲಾಗಿದೆ. ಇದರಿಂದ ಇನ್ನಷ್ಟು ಭ್ರಷ್ಟಾಚಾರಕ್ಕೆ ಸಹಕಾರ ನೀಡಿದಂತಾಗಿದೆ ಎಂಬುದು ಅವರ ಮಾತು.

ಅವರೆಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳು ಆದರೆ ಲಂಚ ಸ್ವೀಕರಿಸಿ ಜೈಲಿಗೆ ಹೋದವರು ಇದೀಗ‌ ಮತ್ತೊಮ್ಮೆ ತಮ್ಮ ಸ್ಥಾನದಲ್ಲೇ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.ಸರ್ಕಾರದ ಸುತ್ತೊಲೆಯನ್ನು ಈ ಅಧಿಕಾರಿಗಳು ಗಾಳಿಗೆ ತೂರಿದಂತಿದೆ  ಕಳೆದ ಸೆಪ್ಟೆಂಬರ್‌ 13ರಂದು ದಾವಣಗೆರೆ ಲೋಕಾಯುಕ್ತ ಪೋಲೀಸರಿಂದ ದಾಳಿಗೆ ಒಳಗಾಗಿ ಬಂಧಿತರಾಗಿ, ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತದೇ ಸ್ಥಾನಕ್ಕೆ ಬಂದು ಐವರು ಅಬಕಾರಿ ಇಲಾಖೆಯ ಅಧಿಕಾರಿಗಳು ಅಧಿಕಾರ ಮಾಡುತ್ತಿದ್ದಾರೆ ಎಂದು ರಘುನಾಥ್ ಹೇಳಿದ್ದಾರೆ.

ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ

ಅಬಕಾರಿ ಡಿಸಿ ಹಾಗೂ ಉಳಿದ ನಾಲ್ಕು ಜನರನ್ನು ಇನ್ನು 10 ದಿನದೊಳಗೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡದಿದ್ದರೆ ದಾವಣಗೆರೆಯ ಉಪ ಅಬಕಾರಿ ಇಲಾಖೆಯ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡುವುದಲ್ಲದೇ ನ್ಯಾಯಕ್ಕಾಗಿ ಹೈಕೋರ್ಟಿನ ಮೊರೆ ಹೋಗಲಾಗುವುದು ಎಂದು ಸನ್ನದುದಾರ ಹಾಗೂ  ಡಿಜಿ ಆರ್ ಅಮ್ಯೂಸೆಮೆಂಟ್ ನ ಮಾಲೀಕರಾದ ಹರಿಹರದ ಡಿ.ಜಿ.ರಘುನಾಥ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಏನಿದು ಘಟನೆ

ನನಗೆ ಮದ್ಯದ ಅಂಗಡಿಗೆ ಪರವಾನಗಿ ನೀಡಲು ದಾವಣಗೆರೆ ಅಬಕಾರಿ ಉಪ ಆಯುಕ್ತರು ಮತ್ತು ಅವರ ಅಧೀನದಲ್ಲಿ ಬರುವ ಇತರೆ ಅಧಿಕಾರಿಗಳು 60 ಲಕ್ಷ ಕೇಳಿದ್ದರು. ಈ ವೇಳೆ ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತರ ನಿರ್ದೇಶನದಂತೆ‌ ಮುಂಗಡ ಹಣ 3ಲಕ್ಷ ರೂ.,ಗಳನ್ನು ನೀಡುವ ವೇಳೆ ಅಶೋಕ್, ಸ್ವಪ್ನ, ಜೆ.ಕೆ.ಶೀಲಾ, ಶೈಲಶ್ರೀ ಇವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆದರೆ, ಇದೀಗ ಅವರು ಜಾಮೀನು ಪಡೆದು ಮತ್ತೆ ಅದೇ ಹುದ್ದೆಗೆ ಬಂದು ಅಧಿಕಾರ ಚಲಾವಣೆ ಮಾಡುತ್ತಿದ್ದು, ಪ್ರಕರಣದ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುತ್ತದೆ. ಕಾರಣ ಅವರನ್ನು ಬೇರೆಡೆಗೆ ನಾನ್ ಎಕ್ಸಿಕ್ಯುಟಿವ್ ಹುದ್ದೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಅಬಕಾರಿ ಡಿಸಿ ಹುದ್ದೆಗೆ ಯಾರನ್ನು ನೇಮಕ ಮಾಡಿರಲಿಲ್ಲ

ಈ ಅಬಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿ ಅಧಿಕಾರಿಗಳು ಅಮಾನತು ಆದ ದಿನವಾದ 15-10-2023 ರಿಂದ 7-11-2023 ರವರೆಗೆ ದಾವಣಗೆರೆ ಅಬಕಾರಿ ಉಪ ಆಯುಕ್ತರ ಹುದ್ದೆಗೆ ಯಾರನ್ನೂ ನೇಮಕ ಮಾಡಿರಲಿಲ್ಲ. ಇದು ಹಲವಾರು ಅನುಮಾನಗಳು ಎದ್ದು ಕಾಣುತ್ತವೆ ಎಂದು ರಘುನಾಥ್ ಹೇಳುತ್ತಾರೆ

ಆದೇಶ ಏನು ಹೇಳುತ್ತೇ

ಸರ್ಕಾರದ ಅಧಿಸೂಚನೆಯಂತೆ ಯಾವುದೇ ಅಧಿಕಾರಿಗಳು, ಸಿಬ್ಬಂದಿ ಲೋಕಾಯುಕ್ತರ ದಾಳಿಗೆ ಒಳಾಗಾಗಿ ಪ್ರಾಥಮಿಕ ತನಿಖೆಯ ನಂತರ ಅರೋಪಗಳು ಮೇಲ್ನೋಟಕ್ಕೆ ಸಾಬೀತಾಗಿ ಆರೋಪಿತರಾಗಿ ಅಮಾನತಿನಲ್ಲಿ ಇಟ್ಟ ನಂತರ ಅವರನ್ನು ಪುನರ್ ಸ್ಥಾಪಿಸಿವ ಮುನ್ನ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಬೇಕೆಂದು ಆದೇಶವಿದೆ. ಅಂತಹ ಅಧಿಕಾರಿಗಳು, ನೌಕರರನ್ನು ಈ ಹಿಂದೆ ಸೇವೆ ಸಲ್ಲಿಸಿದ ಹುದ್ದೆಗೆ ನೇಮಿಸತಕ್ಕದ್ದಲ್ಲ. ಅವರನ್ನು ಬೇರೆ ಯಾವುದಾದರೂ ನಾನ್ ಎಕ್ಸಿಕ್ಯುಟಿವ್ ಹುದ್ದೆಗೆ ನೇಮಿಸಬೇಕೆಂದು ಹೇಳಿದೆ. ಅದರಂತೆ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ‌.

ಸನ್ನದುದಾರರಿಗೆ ತೊಂದರೆ , ಸ್ವಚ್ಛ ಅಧಿಕಾರಿಗಳನ್ನು ನೇಮಿಸಿ

ಎಲ್ಲಾ ಸನ್ನದುದಾರರು ಇವರ ಕಿರುಕುಳಕ್ಕೆ ಬೇಸತ್ತಿದ್ದಾರೆ.ಹರಿಹರದಲ್ಲಿ ಎಷ್ಟೋ ಸನ್ನದುದಾರರು ಇವರಿಂದ ಸಾಲ ಮಾಡಿಕೊಂಡು ಊರು ಬಿಟ್ಟುಹೊಗಿದ್ದಾರೆ. ಈ ಕೂಡಲೇ ಹರಿಹರದ ಅಬಕಾರಿ ಇಲಾಖೆಗೆ ಸರ್ಕಾರ ಸ್ವಚ್ಚ ಅಧಿಕಾರಿಗಳನ್ನು ಹಾಕಬೇಕು.

ಭ್ರಷ್ಟಾಚಾರ ನಡೆಸುವ ಅಧಿಕಾರಿಗಳನ್ನು ತೆಗೆಯಬೇಕು.ಭ್ರಷ್ಟಾಚಾರ ನಡೆಸಿದವರನ್ನು ಹಾಕಿದರೆ ಸರ್ಕಾರ ಸರಿಯಿಲ್ಲ ಎಂದು ಸಾಬೀತಾಗುತ್ತದೆ.
ಈ ಅಧಿಕಾರಿಗಳೇ ನಾವು ದುಡ್ಡು ಖರ್ಚು ಮಾಡಿಕೊಂಡೇ ಇಲ್ಲಿಗೆ ಬಂದಿದ್ದೇವೆ ಎಂದು ಯಾವುದೇ ಭಯವಿಲ್ಲದೇ ಹೇಳುತ್ತಾರೆ. ನಮ್ಮ ಪರಿಸ್ಥಿತಿ ಹೇಗಿದೆ ಎಂದರೆ ಜೈಲಿಗೆ ಹೋಗಿಬಂದವರಿಗೆ ಕೈ ಮುಗಿದು ನಮ್ಮ ಕೆಲಸ ಮಾಡಿಕೊಡಿ ಎನ್ನುವ ಸ್ಥಿತಿ ಬಂದಿದೆ.

ಸರ್ಕಾರ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಇದೆ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋದ ಅಧಿಕಾರಿಗಳು ಮರಳಿ ತಮ್ಮ ಸ್ಥಾನದಲ್ಲಿ ಮುಂದುವರೆಯುವಂತಿಲ್ಲ ಎಂದು. ಇದು ಸರ್ಕಾರದ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಭ್ರಷ್ಟಾಚಾರ ಮುಕ್ತ ಸರಕಾರ ಎಂದು ಹೇಳುವ ರಾಜಕಾರಣಿಗಳು ಇಲ್ಲಿ ಎಡವಿದ್ದೇಕೇ ಎಂಬ ಪ್ರಶ್ನೆ ಎದ್ದಿದೆ.

ಅಮಾನತು ಮಾಡದಂತೆ ಕೆಎಟಿಗೆ ಹೋಗಿದ್ದ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಅಬಕಾರಿ ಡಿಸಿ
….

ದಾವಣಗೆರೆ : ಲೋಕಾಯುಕ್ತ ದಾಳಿಗೆ ಒಳಗಾದ ಅಬಕಾರಿ ಡಿಸಿ 48 ಗಂಟೆಯೊಳಗೆ ಜೈಲಿನಲ್ಲಿದ್ದರೇ ಅವರನ್ನು ಸರಕಾರ ಅಮಾನತು ಮಾಡಬೇಕು. ಆದರೆ ಅವರನ್ನು ಸರಕಾರ ಅಮಾನತು ಮಾಡಿಲ್ಲ, ಪರಿಣಾಮ ಅಮಾನತು ಮಾಡದಂತೆ ಕೆಎಟಿಗೆ ಹೋಗಿ ಅಬಕಾರಿ ಸ್ವಪ್ನ ಸ್ಟೇ ತಂದು ಅಬಕಾರಿ ಅಧಿಕಾರಿ ಮತ್ತೆ ದಾವಣಗೆರೆಗೆ ಬಂದಿದ್ದಾರೆ.

ಅಬಕಾರಿ ಕಮಿಷನರ್ ಮೇಲೆ ಅ‌ನುಮಾನ 

ಅಬಕಾರಿ ಡಿಸಿಯನ್ನು ಅಮಾನತು ಮಾಡುವಂತೆ ಲೋಕಾಯುಕ್ತ ಅಧಿಕಾರಿಗಳು ವರದಿ ನೀಡಿದ್ದರು. ಆದರೂ ಅಬಕಾರಿ ಕಮಿಷನರ್ , ಅವರನ್ನು ಅಮಾನತು ಮಾಡದಂತೆ ತಡೆದಿದ್ದು ಏಕೆ ಎಂಬ ಅನುಮಾನವಿದೆ.
.ಭ್ರಷ್ಟರಿಗೇಕೇ ಮತ್ತೆ ಅಧಿಕಾರ

ಭ್ರಷ್ಟ ಅಧಿಕಾರಿಗಳಿಗೆ ದಾವಣಗೆರೆಗೆ ಮತ್ತೇ ಅಧಿಕಾರ‌ ಕೊಟ್ಟಿರುವ ಕಾರಣದ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಅಲ್ಲದೇ ಅದಕ್ಕೆ ರಾಜಕಾರಣಿಗಳ ಒತ್ತಡವಿತ್ತಾ ಎಂಬ ಪ್ರಶ್ನೆ ಎದ್ದಿದೆ.

 

Share.
Leave A Reply

Exit mobile version