ಮೂರೂ ವಿಧಾನಸಭೆ ಉಪಚುನಾವಣೆ ಕಾವು ರಂಗೇರಿದ್ದು ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಇದರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಒಬ್ಬರಿಗೊಬ್ಬರು ವೈಯಕ್ತಿಕವಾಗಿ ಬೈದಾಡಿಕೊಂಡಿದ್ದಾರೆ. ಇದರ ನಡುವೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು ಫಿಲ್ಡ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ನಿಖಿಲ್ ಕುಮಾರ ಸ್ವಾಮಿ ಪರ ಅನುಕಂಪದ ಅಲೆ ಸೃಷ್ಟಿಸುತ್ತಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಶಾಕ್ ಕಾಯ್ದಿದೆಯಾ? ಸಿಪಿವೈಗೆ ಕಾಂಗ್ರೆಸ್ ನಾಯಕರು ಕೈಕೊಟ್ರಾ? ಈ ಕುರಿತು ಮಹತ್ವದ ಸ್ಟೋರಿ ಇಲ್ಲಿದೆ.
ರಾಜ್ಯದ ಮೂರು ಉಪಚುನಾವಣೆ ಕಾವು ದಿನೇದಿನೆ ಹೆಚ್ಚಾಗುತ್ತಿದೆ. ತೀವ್ರ ಕುತೂಹಲ ಕೆರಳಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಧುಮುಕುತ್ತಿದ್ದು, ಎನ್ಡಿಎ ಅಭ್ಯರ್ಥಿ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ದೇವೇಗೌಡ ಅವರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರೊಂದಿಗೆ ಎನ್ಡಿಎ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕಿಳಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಲೋಕಸಭಾ ಚುನಾವಣೆ ವೇಳೆ ಪಕ್ಷದ ಅಳಿವು ಉಳಿವಿಗಾಗಿ ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು.
ದೇವೇಗೌಡರ ಅವರು 92ರ ವಯಸ್ಸಿನಲ್ಲೂ ಅವರ ಫಿಟ್ನೆಸ್ ನೋಡಿದರೆ ಅಶ್ಚರ್ಯವನ್ನುಂಟು ಮಾಡುತ್ತದೆ. ಬೂತ್ ಮಟ್ಟದ ವಿಶ್ಲೇಷಣೆ ಮತ್ತು ದತ್ತಾಂಶ ಪರಿಶೀಲನೆ ಕುಳಿತಾಗ ತಜ್ಞರೂ ನಾಚಿಕೆಪಡುವಂತೆ ಮಾಡುತ್ತಾರೆ. ಅವರ ದೈಹಿಕ ಹಾಗೂ ಮಾನಸಿಕ ಸ್ಥೈರ್ಯ ನೋಡಿದರೆ ಯುವ ಕಾರ್ಯಕರ್ತರಿಗೆ ಸ್ಪೂರ್ತಿಯಾಗುತ್ತಿದೆ.
ಚನ್ನಪಟ್ಟಣದಲ್ಲಿ ಗೌಡರಿಗೆ ಹಲವು ಹಿತೈಷಿಗಳಿದ್ದರೂ ಇಲ್ಲಿ ಜೆಡಿಎಸ್ ಗೆಲುವುದು ಖಚಿತವಿಲ್ಲ ಎನ್ನುವ ವಾತಾವರಣವಿದೆ. ಈಗ ದೊಡ್ಡಗೌಡ್ರು ಎಂಟಿ ಕೊಟ್ಟಿದ್ದರಿಂದ ಚಿತ್ರಣವೇ ಬದಲಾಗುತ್ತಿದೆ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ನಿಖಿಲ್ ಕಣಕ್ಕಿಳಿದಾಗ ದೇವೇಗೌಡ ಅವರು ಪ್ರಚಾರ ನಡೆಸಿದ್ದರು. ಆದರೂ ಸೋಲನ್ನು ಅನುಭವಿಸಿದ್ದರು. ಜೆಡಿಎಸ್ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಪ್ರಕಾರ, ಗೌಡರ ಪ್ರಚಾರ ನಿಖಿಲ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ನಿಖಿಲ್ ಕುಮಾರಸ್ವಾಮಿ ಈಗಾಗಲೇ 2 ಚುನಾವಣೆಗಳಲ್ಲಿ ಸೋಲು ಕಂಡಿದ್ದು, ಸಂಬಂಧಿಯಾಗಿರುವ ಪ್ರಜ್ವಲ್ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಜನರು ಜೆಡಿಎಸ್ ಪಕ್ಷದ ಮೂರನೇ ತಲೆಮಾರನ್ನು ತಿರಸ್ಕರಿಸುತ್ತಿದ್ದಾರೆ. ಈ ಭಾರಿ ಜನ ಯಾವ ನಿರ್ಧಾರಕೈಗೊಳ್ಳುತ್ತಾರೆ ಎನ್ನುವ ಕೂತಹಲ ಮೂಡಿದೆ.
ಇನ್ನು ನಿಖಿಲ್ ಪರ ಪ್ರಚಾರಕ್ಕಿಳಿಯುತ್ತಿರುವ ದೇವೇಗೌಡ ಅವರು ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಹೊರಟು, ಚನ್ನಪಟ್ಟಣದಲ್ಲಿ 4 ಕಡೆ ಪ್ರಚಾರ ನಡೆಸಲಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರಚಾರ ನಡೆಸಲಿದ್ದಾರೆ. ಮೊದಲಿಗೆ ವಿರುಪಾಕ್ಷಿಪುರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಈ ವೇಳೆ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎನ್ಡಿಎ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಬಳಿಕ ಕೊಡಂಬಹಳ್ಳಿಯಲ್ಲಿ ಪ್ರಚಾರ ನಡೆಸಲಿದ್ದಾರೆ.ಮಧ್ಯಾಹ್ನ 2 ಗಂಟೆಯ ಬಳಿಕ ಜೆ.ಬ್ಯಾಡರಹಳ್ಳಿಯಲ್ಲಿ ಪ್ರಚಾರ ನಡೆಸಲಿದ್ದು, ನಂತರ ವೈ.ಟಿ.ಹಳ್ಳಿಯಲ್ಲಿ ಪ್ರಚಾರ ಕೈಗೊಂಡು ನಿಖಿಲ್ ಪರ ಮತಯಾಚಿಸಲಿದ್ದಾರೆ.ಒಟ್ಟಿನಲ್ಲಿ ದೊಡ್ಡ ಗೌಡ್ರು ಫಿಲ್ಡ್ಗೆ ಎಂಟ್ರಿ ಕೊಟ್ಟಿದ್ದು ನಿಖಿಲ ಕುಮಾರಸ್ವಾಮಿ ಪರ ಅನುಕಂಪದ ಅಲೆ ಸೃಷ್ಟಿಸುವ ಸಾಧ್ಯತೆಯಿದೆ.