ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ BSY ಕುಟುಂಬಕ್ಕೆ ಸೆಡ್ಡು ಹೊಡೆದಿದ್ದಾರೆ. ನಾನಾ, ನೀವಾ ಒಂದು ಕೈ ನೋಡೇ ಬಿಡೋಣ ಅಂತೇಳಿ ಶಿವಮೊಗ್ಗ ಅಖಾಡದಲ್ಲಿ ಧೂಳೆಬ್ಬಿಸೋಕೆ ಸಜ್ಜಾಗಿದ್ದಾರೆ. ಪರಿಸ್ಥಿತಿ ಹೀಗಿರೋವಾಗ್ಲೇ ಕೆ.ಎಸ್ ಈಶ್ವರಪ್ಪನವರನ್ನ ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಹಾಗಾದ್ರೆ ಶಿವಮೊಗ್ಗದಲ್ಲಿ ಅಸಲಿ ಆಟ ಈಗ ಶುರುವಾಯ್ತಾ.? BJP ಅಭ್ಯರ್ಥಿ ಬಿವೈ ರಾಘವೇಂದ್ರ ಅವರಿಗೆ ಈಶ್ವರಪ್ಪ ಸೋಲಿನ ರುಚಿ ತೋರಿಸ್ತಾರಾ.?
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ತಗೊಂತಾರೆ. ಹೈಕಮಾಂಡ್ ಮಾತಿಗೆ ಬಗ್ತಾರೆ ಅಂತೇಳಿ ಮಾಜಿ ಸಿಎಂ ಬಿಎಸ್ವೈ ಮತ್ತು ಅವರ ಪುತ್ರರು ಭಾವಿಸಿದ್ರು. ಆದ್ರೆ ಅಪ್ಪ ಮಕ್ಕಳಿಗೆ ತಕ್ಕ ಪಾಠ ಕಲಿಸೋಕೆ ಸಿಕ್ಕ ಅವಕಾಶವನ್ನ ಕೈ ಬಿಡೋ ಮಾತೇ ಇಲ್ಲ ಅಂತೇಳಿರೋ ಈಶ್ವರಪ್ಪ ಅಖಾಡದಿಂದ ಹಿಂದೆ ಸರಿಯೋ ಮಾತೇ ಇಲ್ಲ ಅಂತೇಳಿದ್ದಾರೆ. ಅಷ್ಟೇ ಅಲ್ಲ., ಬಿಜೆಪಿ ನಾಯಕರು ಮಹಾ ಅಂದ್ರೆ ನನ್ನ ಏನ್ ಮಾಡ್ತಾರೆ. ಪಕ್ಷದಿಂದ ಉಚ್ಚಾಟಿಸ್ತಾರೆ. ಅಷ್ಟೇ ಅಲ್ವಾ. ಮಾಡ್ಲಿ ಬಿಡಿ. ನಾನು ಪಕ್ಷೇತರವಾಗಿ ಸ್ಪರ್ಧಿಸ್ತಾಯಿದ್ದೀನಿ ಅಂದ್ರೆ ಪಕ್ಷ ಬಿಟ್ಟಿದ್ದೀನಿ ಅಂತ ಅರ್ಥ ತಾನೇ ಅಂತೇಳಿ ಈಶ್ವರಪ್ಪ ಗುಡುಗಿದ್ರು. ನಾಮಪತ್ರ ಹಿಂಪಡೆಯದ ಕಾರಣ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಕೆಎಸ್ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದೆ.
ನಿಮಗೆ ಗೊತ್ತಿರ್ಲಿ, ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ಈಶ್ವರಪ್ಪ ಮನವೊಲಿಸಲು ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವು ನಾಯಕರು ಪ್ರಯತ್ನ ಮಾಡಿದ್ದರು. ಆದರೆ ಯಾವುದಕ್ಕೂ ಬಗ್ಗದ ಈಶ್ವರಪ್ಪ ಸ್ಪರ್ಧೆ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಭಾವಚಿತ್ರ ಬಳಸುವ ಮೂಲಕ ಬಿಜೆಪಿಗೆ ಮತ್ತಷ್ಟು ತಲೆನೋವು ತಂದಿದ್ದರು. ಈಗ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿ ಆದೇಶ ನೀಡಲಾಗಿದೆ.
ಸೋಮವಾರ ಸಂಜೆ ನಾಮಪತ್ರ ಹಿಂಪಡೆಯಲು ಚುನಾವಣಾ ಆಯೋಗದ ಗಡುವು ಮುಗಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ಹೊರಬಿದ್ದಿದೆ. ಈಶ್ವರಪ್ಪ ಅವರಿಗೆ ಕಬ್ಬಿನ ಮುಂದೆ ನಿಂತಿರುವ ರೈತನ ಚಿಹ್ನೆಯನ್ನು ನೀಡಲಾಗಿದೆ. ಶಿವಮೊಗ್ಗದಲ್ಲಿ ಮೇ 7 ರಂದು ಲೋಕಸಭಾ ಚುನಾವಣೆಯ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಹಾವೇರಿ ಕ್ಷೇತ್ರದಲ್ಲಿ ತಮ್ಮ ಪುತ್ರ ಕೆ.ಇ.ಕಾಂತೇಶ್ಗೆ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಬಿಜೆಪಿ ಹಾಗೂ ಈಶ್ವರಪ್ಪ ನಡುವೆ ಸಮರ ಶುರುವಾಗಿತ್ತು. ಬಿಎಸ್ವೈ ಮತ್ತು ಕುಟುಂಬದ ವಿರುದ್ಧ ಈಶ್ವರಪ್ಪ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಿಸಿದ ಬಿಎಸ್ ಯಡಿಯೂರಪ್ಪ ವಿರುದ್ಧ ಸೇಡು ತೀರಿಸಿಕೊಳ್ಳಲು, ಬಿಎಸ್ವೈ ಪುತ್ರ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ವಿರುದ್ಧ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಿದ್ದಾರೆ.
ನಿಮಗೆ ಗೊತ್ತಿರ್ಲಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ ಈಶ್ವರಪ್ಪ ಸೇರಿದಂತೆ 23 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ. ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ. ರಾಘವೇಂದ್ರ, ಕಾಂಗ್ರೆಸ್ ನಿಂದ ಖ್ಯಾತ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಸ್ಪರ್ಧಿಸಿದ್ದಾರೆ. ಇನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಸ್.ಕೆ. ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಅರುಣ ಕೆ.ಎ, ಬಹುಜನ ಸಮಾಜವಾದಿ ಪಾರ್ಟಿಯಿಂದ ಎ.ಡಿ. ಶಿವಪ್ಪ, ಯಂಗ್ಸ್ಟರ್ ಎಂಪರ್ಮೆಂಟ್ ಪಾರ್ಟಿಯಿಂದ ಯೂಸುಫ್ ಖಾನ್ ಕಣದಲ್ಲಿದ್ದಾರೆ. ಆದ್ರೆ ಶಿವಮೊಗ್ಗದಲ್ಲಿ ಕೆ.ಎಸ್ ಈಶ್ವರಪ್ಪನವರ ಸ್ಪರ್ಧೆ ಖಚಿತವಾಗಿರೋದ್ರಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಈಶ್ವರಪ್ಪನವರ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ ಬಿಜೆಪಿ ವೋಟ್ಗಳು ಈಶ್ವರಪ್ಪ ಮತ್ತು ಬಿವೈ ರಾಘವೇಂದ್ರ ಮಧ್ಯೆ ಚದುರಿ ಹೋಗೋದ್ರಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಅವರು ಗೆಲ್ಲೋ ಸಾಧ್ಯತೆಗಳಿವೆ. ಈ ಬಗ್ಗೆ ನೀವೇನಂತಿರಾ?