ದಾವಣಗೆರೆ : ಭದ್ರಾ ಜಲಾಶಯದ ಬುಡದಲ್ಲಿ ಸುಮಾರು 16 ಎಕರೆ ಬಫರ್ ಜೋನ್ ಪ್ರದೇಶದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಮತ್ತು ವಸತಿ ಸಮುಚ್ಚಯಗಳ ನಿರ್ಮಾಣ ಕಾಮಗಾರಿಗಳನ್ನು ಸದ್ದಿಲ್ಲದೆ ಮಾಡಲಾಗುತ್ತಿದ್ದು, ರೈತ ಮುಖಂಡ ಬಿ.ಎಂ.ಸತೀಶ್ ನೇತೃತ್ವದ ತಂಡ ಇದರ ವಿರುದ್ಧ ಡಿಸಿಗೆ ಮನವಿ ಸಲ್ಲಿಸಿದೆ.
ಮಧ್ಯ ಕರ್ನಾಟಕದ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯ 6 ಜಿಲ್ಲೆಗಳ ಸುಮಾರು 4.5 ಲಕ್ಷ ಎಕರೆ ಕೃಷಿಗೆ ಮತ್ತು ಕುಡಿಯುವ ನೀರಿನ ನೀರಾವರಿ ಮೂಲವಾಗಿದೆ. ಈ ನೀರನ್ನು ನಂಬಿ ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇದನ್ನು ತರೀಕೆರೆ ಮತ್ತು ಹೊಸದುರ್ಗ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು “ಜೆ.ಜೆ.ಎಂ” (ಜಲ ಜೀವನ ಮಿಷನ್) ಯೋಜನೆಯಡಿ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದು ಭದ್ರಾ ಜಲಾಶಯದ ಅಭದ್ರತೆ ಕಾರಣವಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದಿದ್ದಾರೆ.
ಪ್ರಮುಖ ಬೇಡಿಕೆಗಳು_
1.ಭದ್ರಾ ಡ್ಯಾಂ ತಳಭಾಗದಲ್ಲಿ ಜೆಜೆಎಂ ಯೋಜನೆಯಡಿ ಕೈಗೊಳ್ಳಲಾದ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಜಲಾಶಯಗಳ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ಭದ್ರಾ ಡ್ಯಾಂ ಸುರಕ್ಷತೆ ಬಗ್ಗೆ ಸಮೀಕ್ಷೆ ಮಾಡಿ, ಸೂಕ್ತ ಭದ್ರತೆ ಕ್ರಮಗಳನ್ನು ಕೈಗೊಳ್ಳಬೇಕು.
2.1962ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಸಹಜವಾಗಿ ಡ್ಯಾಂನ ತಳಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಸೋರಿಕೆ ತಡೆಗಟ್ಟಬೇಕು.
3.ಹಳೆಯಾದಾಗಿರುವ ಡ್ಯಾಂ ಗೇಟ್ ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು.
4.ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್ ಗಳನ್ನು ರೀ ಕಂಡೀಷನ್ ಮಾಡಿಸಬೇಕು.
5.ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು.
6.ಡ್ಯಾಂನ ಸುತ್ತಲೂ ಬೇಲಿ ನಿರ್ಮಿಸಿ ಸುಭದ್ರತೆ ಕಾಪಾಡಬೇಕು.
7.ಡ್ಯಾಂನ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗ ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆ (DRIP: Dam Rehabilitation and Improvement Project) ಅಡಿಯಲ್ಲಿ ಡ್ಯಾಂನ ಸುರಕ್ಷತೆಗೆ ₹100 ಕೋಟಿಗಳ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರ ₹100 ಕೋಟಿ ಬಿಡುಗಡೆ ಮಾಡಿ, ಡ್ಯಾಂನ ಸುರಕ್ಷತೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.ಜಿಲ್ಲಾ ಬಿಜೆಪಿ ರೈತ ಮೋರ್ಚಾ ನಿಯೋಗದಲ್ಲಿ ರೈತ ಮುಖಂಡ, ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ ಎಂ ಸತೀಶ್, ಮಾಜಿ ದೂಡ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಎಂ.ವೈ.ಪ್ರಕಾಶ್, ಮಾಜಿ ಮೇಯರ್ ಹೆಚ್.ಎನ್.ಗುರುನಾಥ್, ಜಿಲ್ಲಾ ಬಿಜೆಪಿ ಮುಖಂಡರಾದ ಎ.ಬಿ.ಹನುಮಂತಪ್ಪ, ಹೆಚ್.ಎನ್.ಶಿವಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ವಿ.ಚನ್ನಪ್ಪ, ವಕೀಲ ಕೆ.ಹೆಚ್.ಧನಂಜಯ, ಪುಲೀಯ, ಕೊಂಡಜ್ಜಿ ಹನುಮಂತ, ರಾಜುಗೌಡ ಮುಂತಾದವರು ಉಪಸ್ಥಿತರಿದ್ದರು.