ನಂದೀಶ್ ಭದ್ರಾವತಿ, ಸತೀಶ್ ಪವಾರ್, ದಾವಣಗೆರೆ
ಲೋಕಸಭೆಯಲ್ಲಿ 28 ಸ್ಥಾನಗಳನ್ನು ಗೆಲ್ಲೆಲೇಬೇಕೆಂಬ ಪಣ ತೊಟ್ಟಿರುವ ಬಿಜೆಪಿ ಪಕ್ಷ ಬಿಟ್ಟು ಹೋದವರನ್ನು ಮತ್ತೆ ತವರು ಮನೆಗೆ ತರಲು ಸಿದ್ದವಾಗಿದೆ. ಅಂತೆಯೇ ಈಗ ದಾವಣಗೆರೆಯಲ್ಲಿ ತನ್ನದೇ ಆದ ಕಾರ್ಯಪಡೆ ಹೊಂದಿರುವ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿಗೆ ಮರಳಲು ಸಿದ್ದರಾಗಿದ್ದಾರೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಂದ ಮೇಲೆ ಹೆಚ್ಚಿನದಾಗಿ ಯುವಕರಿಗೆ ಆದ್ಯತೆ ನೀಡಲಾಗಿರುವ ಹಿನ್ನೆಲೆಯಲ್ಲಿ ಈಗ ಮಾಡಾಳ್ ಮಲ್ಲಿಕಾರ್ಜುನ್ ರನ್ನು ಕರೆತರಲಾಗುತ್ತಿದೆ. ಅಲ್ಲದೆ ವೈಯಕ್ತಿಕ ವರ್ಚಸ್ಸು, ಲೋಕಸಭೆಯಲ್ಲಿ ಹೆಚ್ಚಿನ ಮತ ಬಿಜೆಪಿಗೆ ಬೀಳುವಂತೆ ನೋಡಿಕೊಳ್ಳಲು ಮಾಡಾಳ್ ಮಲ್ಲಿಕಾರ್ಜುನ್ ರನ್ನು ಬಿಜೆಪಿಗೆ ತರಲಾಗುತ್ತಿದೆ.
ಯಾವಾಗ ಬಿಜೆಪಿಗೆ ಸೇರ್ಪಡೆ
ಫೆಬ್ರವರಿ 7, ಮಧ್ಯಾಹ್ನ 12 ಕ್ಕೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ. ಇದರಿಂದ ದಾವಣಗೆರೆಯಲ್ಲಿ ಬಿಜೆಪಿಗೆ ಹೆಚ್ಚು ಶಕ್ತಿ ಬರಲಿದೆ. ಅಲ್ಲದೇ ಚನ್ನಗಿರಿಯಲ್ಲಿ ಮತ್ತೇ ಕಮಲದ್ದೇ ಹವಾ ಸೃಷ್ಟಿಯಾಗಲಿದೆ.
ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಾಡಾಳ್ ಮಲ್ಲಿಕಾರ್ಜುನ್
ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದ ಮಾಡಾಳ್ ಮಲ್ಲಿಕಾರ್ಜುನ್ ಗೆ ಬಿಜೆಪಿ ಟಿಕೆಟ್ ಕೊಟ್ಟಿರಲಿಲ್ಲ. ಆದ್ದರಿಂದ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರರಾಗಿ ಸ್ಫರ್ಧೆ ಮಾಡಿದ್ದರು. ಅಲ್ಲದೇ ಇದೇ ಸಮಯದಲ್ಲಿ ತಂದೆ ಮಾಡಾಳ್ ವಿರೂಪಾಕ್ಷಪ್ಪ ಇದೇ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು. ಅಲ್ಲದೇ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಬೆಂಬಲಿಗರ ನಡುವೆ ಫ್ಲೇಕ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆ ಆಗಿತ್ತು.ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿತ್ತು. ಆದ್ದರಿಂದ ಮಾಡಾಳ್ ಮಲ್ಲಿಕಾರ್ಜುನ್ ರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿತ್ತು.
ಎಂಎಲ್ ಎ ಚುನಾವಣೆಯಲ್ಲಿ ಬಿಜೆಪಿಗೆ ಮೂರನೇ ಸ್ಥಾನ
ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಮಾಡಾಳ್ ಮಲ್ಲಿಕಾರ್ಜುನ್ ಸುಮಾರು 60 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರು.ಇದು ಅಧಿಕೃತ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಅವರಿಗಿಂತ ಮೂರು ಪಟ್ಟು ಅಧಿಕ ಮತಗಳಾಗಿದ್ದವು. ಇದರಿಂದ ಬಿಜೆಪಿಗೆ ಭಾರೀ ಮುಖಭಂಗ ವಾಗಿತ್ತು.
ಲಿಂಗಾಯಿತ ಪ್ರಬಲ ನಾಯಕ
ದಾವಣಗೆರೆಯಲ್ಲಿ ವೀರಶೈವ ಲಿಂಗಾಯಿತರ ಪ್ರಭಾವ ಹೆಚ್ಚಿದ್ದು, ಈ ಸಮುದಾಯದ ಮತ ಸೆಳೆಯಲು ಈಗ ಮಾಡಾಳ್ ಮಲ್ಲಿಕಾರ್ಜುರನ್ನು ಬಿಜೆಪಿಗೆ ಕರೆತರಲಾಗುತ್ತಿದೆ. ಅಲ್ಲದೇ ಮೊದಲಿನಂದಲೂ ಬಿ.ವೈ.ವಿಜಯೇಂದ್ರ ಜತೆ ಕಾಣಿಸಿಕೊಳ್ಳುತ್ತಿದ್ದ ಮಾಡಾಳ್ ಮಲ್ಲಿಕಾರ್ಜುನ್ ಕಮಲಪಾಳಯದ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.
ಮಾಡಾಳ್ ಕುಟುಂಬ ಚನ್ನಗಿರಿ ಕ್ಷೇತ್ರ ಮಾತ್ರವಲ್ಲ, ದಾವಣಗೆರೆ ಜಿಲ್ಲೆಯಾದ್ಯಂತ ಪ್ರಭಾವ ಹೊಂದಿರುವ ನಾಯಕರಾಗಿದ್ದಾರೆ. ಅಲ್ಲದೇ ಯಡಿಯೂರಪ್ಪರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಮಾತ್ರವಲ್ಲ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದಾಗಲೂ ಚನ್ನಗಿರಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಮಾಡಾಳ್ ವಿರೂಪಾಕ್ಷಪ್ಪ ಕಣಕ್ಕಿಳಿದಿದ್ದರು. ಯಡಿಯೂರಪ್ಪ ಅವರ ಜೊತೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರಲಿಲ್ಲ. ಆದರೆ ಪಕ್ಷೇತರರಾಗಿ ಕಣಕ್ಕಿಳಿದ ಕಾರಣ ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಮಾತ್ರ ಜಿಲ್ಲಾ ಬಿಜೆಪಿಯು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿರುವುದಾಗಿ ಘೋಷಿಸಿತ್ತು.
ಹಳೆನಾಯಕರು ಈಗ ಮರಳಿ ಮನೆಗೆ
ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಎಲ್ಲವೂ ಅದಲು ಬದಲಾಗಿದ್ದು, ಹಳೆಯ ಮುಖಂಡರು, ಮಾಜಿ ಶಾಸಕರು, ಮಾಜಿ ಸಂಸದರನ್ನು ಸೆಳೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಮಾಡಾಳ್ ಮಲ್ಲಿಕಾರ್ಜುನ್ ಅವರೂ ಸಹ ತಾಲೂಕಿನಲ್ಲಿ ಉತ್ತಮ ಪ್ರಭಾವ ಹೊಂದಿದ್ದಾರೆ. ಎಲ್ಲೆಡೆ ಪ್ರವಾಸ ಮಾಡಿದ್ದಾರೆ. ತನ್ನದೇ ಆದ ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರು ಮತ್ತೆ ಮೇಲುಗೈ ಸಾಧಿಸುವ ಜೊತೆಗೆ, ಪಕ್ಷ ಮತ್ತಷ್ಟು ಸದೃಢಗೊಳಿಸಲು ಕಾರ್ಯತಂತ್ರದ ಭಾಗವಾಗಿಯೇ ಹಳೆಯ ಮುಖಂಡರು ಮತ್ತೆ ಬಿಜೆಪಿ ಮರಳುತ್ತಿರುವುದು ಎಂಬುದು ವಿಶೇಷ. ಒಟ್ಟಾರೆ ಜಿಲ್ಲೆಯ ಪ್ರಬಲ ನಾಯಕ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಮನೆಗೆ ಸೇರುತ್ತಿರುವುದರಿಂದ ಕಮಲ ಪಾಳಯಕ್ಕೆ ಮತ್ತಷ್ಟು ಪುಷ್ಠಿ ನೀಡಲಿದೆ.