
ಬೆಂಗಳೂರು/ಪೀಣ್ಯ ದಾಸರಹಳ್ಳಿ
ಪತಿ ಅಕ್ರಮಸಂಬಂಧಕ್ಕೆ ಬೇಸತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಮೊದಲು ಪುತ್ರಿ ಕೊಂದು ನಂತರ ನೇಣು ಬಿಗಿದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬ್ಯಾಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ (34) ಆತ್ಮಹತ್ಯೆ ಮಾಡಿಕೊಂಡ ಅಧ್ಯಕ್ಷೆ. ಇವರು ಮೊದಲು ತನ್ನ ನಾಲ್ಕು ವರ್ಷದ ಪುತ್ರಿ ರೋಷಿಣಿಯನ್ನು ಮೊದಲು ನೇಣು ಹಾಕಿ ಕೊಂದಿದ್ದಾರೆ. ಭಾನುವಾರ ಸಂಜೆ 6ಕ್ಕೆ ಘಟನೆ ನಡೆದಿದೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ತೆರಳಿದ ಪೊಲೀಸರು ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಮೃತದೇಹಗಳನ್ನು ಸೋಮವಾರ ಕುಟುಂಬ ಸದಸ್ಯರಿಗೆ ನೀಡಲಾಗಿದೆ. ಈ ಸಂಬಂಧ ಶೃತಿ ಸಹೋದರ ಶಶಿಧರ್ ನೀಡಿದ ದೂರಿನ ಮೇರೆಗೆ ಮೃತಳ ಪತಿ ಗೋಪಾಲಕೃಷ್ಣ ಅಲಿಯಾಸ್ ಜಿ.ಕೃಷ್ಣ ಮತ್ತು ಆತನ ಸ್ನೇಹಿತೆ ಸಾಯಿ ಸುಮನ ವಿರುದ್ಧ ವರದಕ್ಷಿಣಿ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ.
10ವರ್ಷಗಳ ಹಿಂದೆ ಮದುವೆ
ಶಿರಾ ತಾಲೂಕಿನ ಗುಳಿಗೇನಹಳ್ಳಿ ಗ್ರಾಮದ ಶೃತಿ 10 ವರ್ಷಗಳ ಹಿಂದೆ ಪಾವಗಡ ತಾಲೂಕಿನ ಗುಂಡಾರಲಹಳ್ಳಿ ಗ್ರಾಮದ ಚಾರ್ಟೆಡ್ ಅಕೌಂಟ್ ಗೋಪಾಲ ಕೃಷ್ಣನನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಶೃತಿಯವರು
ನಾಲ್ಕು ವರ್ಷಗಳ ಹಿಂದೆ ಬ್ಯಾಡನೂರು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, 8 ತಿಂಗಳ ಹಿಂದೆ ಅಧ್ಯಕ್ಷೆಯಾಗಿದ್ದರು. ಪತಿ ಮತ್ತು ಮಕ್ಕಳ ಜತೆ ಬೆಂಗಳೂರಿನ ನಾಗಸಂದ್ರದ ಎಂ.ಎಸ್.ರಾಮಯ್ಯ ಲೇಔಟ್ನಲ್ಲಿ ವಾಸವಾಗಿದ್ದು, ವಾರಕ್ಕೊಮ್ಮೆ ಬ್ಯಾಡನೂರು ಗ್ರಾಮಕ್ಕೆ ಹೋಗಿ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಕಾರಣಿ ಜತೆ ಪತಿಯ ಅಕ್ರಮ ಸಂಬಂಧ
ಕೆಲ ವರ್ಷಗಳಿಂದ ಪತಿ ಜಿ.ಕೃಷ್ಣ ಪಾವಗಡ ಮೂಲದ ಪ್ರಾದೇಶಿಕ ಪಕ್ಷದ ನಾಯಕಿ ಹಾಗೂ ಬೆಂಗಳೂರಿನ ವಕೀಲರೊಬ್ಬರ ಪತ್ನಿ ಸಾಯಿಸುಮನ ಎಂಬಾಕೆ ಜತೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ತಿಳಿದ ಶೃತಿ, ಪತಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಹಿರಿಯರಿಗೂ ಮಾಹಿತಿ ನೀಡಿದ್ದರು. ಹೀಗಾಗಿ 2-3 ಬಾರಿ ಹಿರಿಯರು ದಂಪತಿ ನಡುವೆ ಸಂಧಾನ ಮಾಡಿದ್ದು, ಕೃಷ್ಣ ಮತ್ತು ಸಾಯಿ ಸುಮನ ಕೂಡ ದೂರವಾಗಿದ್ದರು. ಆದರೆ, ಕೆಲ ತಿಂಗಳಿಂದ ಇಬ್ಬರು ಮತ್ತೆ ಅಕ್ರಮ ಸಂಬಂಧ ಮುಂದುವರಿಸಿದ್ದರು. ಇದೇ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಬೇಸತ್ತಿದ್ದ ಶೃತಿ ಪತಿಗೆ ಹೀಗೆ ಮುಂದುವರಿಸಿದರೆ ನಿನ್ನ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಪುತ್ರಿ ಕೊಂದು ತಾನೂ ಆತ್ಮಹತ್ಯೆ
ಶೃತಿ, ಪತಿ ಕೃಷ್ಣಗೆ ವಾಟ್ಸ್ಅಫ್ ಮೂಲಕ ಬುದ್ದಿವಾದ ಹೇಳಿದರೂ ಸುಮನ ಜತೆ ಅಕ್ರಮ ಸಂಬಂಧ ಮುಂದುವರಿಸಿದ್ದಿಯಾ?. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೀದ್ದೇನೆ ಎಂದು ಸಂದೇಶ ಕಳುಹಿಸಿದ್ದರು. ಆದರೆ, ಪತಿ ಕೃಷ್ಣ ಗಂಭೀರವಾಗಿ ಪರಿಗಣಿಸಿಲ್ಲ. ಭಾನುವಾರ ಸಂಜೆ ಪತಿ ಮತ್ತು ಸಹೋದರನ ವಾಟ್ಸ್ಅಫ್ಗೆ
ಡೆತ್ನೋಟ್ ಕಳುಹಿಸಿದ ಶೃತಿ, ಮನೆಯ ಕೋಣೆಯೊಂದರಲ್ಲಿ ಪುತ್ರಿ ರೋಷಿಣಿಗೆ ನೇಣು ಬಿಗಿದು ಹತ್ಯೆ ಮಾಡಿದ್ದಾರೆ. ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಹೊರಗಡೆ ಆಟವಾಡಲು ಹೋಗಿದ್ದ ಕಾರಣ, ಸಾವಿನಿಂದ ಪಾರಾಗಿದ್ದಾನೆ. ಇತ್ತ ಸಹೋದರಿಯ ಡೆತ್ನೋಟ್ ನೋಡಿದ ಸಹೋದರ, ಕೂಡಲೇ ಅಕ್ಕ-ಪಕ್ಕದ ನಿವಾಸಿಗಳಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕ ದೌಡಾಯಿಸಿದ ಬಾಗಲಗುಂಟೆ ಪೊಲೀಸರು ಪರಿಶೀಲಿಸಿ, ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.
ಡೆತ್ನೋಟ್ನಲ್ಲಿ ಪತಿ ವಿರುದ್ಧ ಆರೋಪ
ಪತಿ ಕೃಷ್ಣ ಸಾಯಿ ಸುಮನ ಎಂಬಾಕೆ ಜತೆ ಅಕ್ರಮ ಸಂಬಂಧ ಹೊಂದಿದ್ದಾರೆ.ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಆತನ ಜತೆ ಸಂಬಂಧ ಮುಂದುವರಿಸಿದ್ದಾರೆ. ಆದ್ದರಿಂದ ನಾನು ಬೇಸತ್ತು ಮಗಳನ್ನು ಹತ್ಯೆಗೆದು ಬಳಿಕ ತಾನೂ ಆತ್ಮಹತ್ಯೆಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ನೇರ ಕಾರಣ ಪತಿ ಜಿ. ಕೃಷ್ಣ ಮತ್ತು ಆತನ ಪ್ರೇಯಸಿ ಸಾಯಿ ಸುಮನ. ಜತೆಗೆ ತನಗೆ ಪತಿ ವರದಕ್ಷಿಣಿ ಕಿರುಕುಳ ನೀಡುತ್ತಿದ್ದರು ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
—
ಪತಿಯ ಅಕ್ರಮ ಸಂಬಂಧ ಮತ್ತು ವರದಕ್ಷಿಣಿ ಕಿರುಕುಳಕ್ಕೆ ಬೇಸತ್ತು ಪಂಚಾಯಿತಿ ಅಧ್ಯಕ್ಷೆ ಶೃತಿ ಎಂಬವರು ತಮ್ಮ ಪುತ್ರಿಯನ್ನು ಹತ್ಯೆಗೈದು, ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಶೃತಿ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
-ಸೈದುಲ್ಲಾಅಡಾವತ್, ಡಿಸಿಪಿ ಉತ್ತರ ವಿಭಾಗ.