ನಂದೀಶ್ ಭದ್ರಾವತಿ ದಾವಣಗೆರೆ/ಉಡುಪಿ

ಪೊಲೀಸ್ ಇಲಾಖೆ ಅಂದ್ರೆ ಅನೇಕರು ಮೂಗು ಮುರಿಯುವರೇ ಹೆಚ್ಚು. ಆದರೆ ಇಂತಹ ಅಪವಾದದ ನಡುವೆಯೂ ಕೆಲ ದಕ್ಷ ಅಧಿಕಾರಿಗಳು ಪ್ರಾಮಾಣಿಕವಾಗಿ ಎಲೆ ಮರೆ ಕಾಯಿಯಂತೆ ಇದ್ದು, ಜನರ ಸೇವೆ ಮಾಡಿ, ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ತಮ್ಮದೇ ಪಾತ್ರ ವಹಿಸಿದ್ದಾರೆ.

ಹೌದು..ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರಾದ ದೇವರಾಜ್ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ.  ದಾವಣಗೆರೆ ಡಿಸಿಆರ್ ಬಿಯಲ್ಲಿ ಇದ್ದಾಗ ಆಗಿನ ಎಸ್ಪಿ ಆರ್ ಚೇತನ್ ನೇತೃತ್ವದಲ್ಲಿ ದಾಳಿ ನಡೆಸಿ ಅನೇಕ ಭಾವಿ ವೈದ್ಯರನ್ನು ಜೈಲಿಗೆ ಅಟ್ಟಿದ್ದರು. ಅಲ್ಲದೇ ಗಾಂಜಾ ಆರೋಪಿ, ಕೊಲೆ ಮಾಡಿದ ಆರೋಪಿಗಳನ್ನು 24 ಗಂಟೆಯಲ್ಲಿ ಚೇಸ್ ಮಾಡಿ‌ಹಿಡಿಯುವ ಚಾಣಾಕ್ಷತೆ ಇವರಲ್ಲಿದ. ಈ ಕಾರಣದಿಂದ ಇವರಿಗೆ ಮುಖ್ಯಮಂತ್ರಿ ಪದಕ, ಕೇಂದ್ರದ ಗೃಹ ಸಚಿವ ಪದಕ ದೊರೆತಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರಕರಣ, ಟೆಕ್ನಿಕಲ್ ಬಳಕೆ, ಭೌತಿಕ ತನಿಖೆ, ತನಿಖೆ ಮಾಡುವ ವಿಧಾನದ ಬಳಕೆ ಹೇಗಿತ್ತು ಎಂಬ ಆಧಾರದ ಮೇಲೆ ಈ ಪದಕವನ್ನು ದೇವರಾಜ್ ಗೆ ನೀಡಲಾಗಿದೆ.‌

ಡ್ರಗ್ಸ್ ದಂಧೆಗೆ ಕಡಿವಾಣ

ಉಡುಪಿಯ ಎಸ್​ ಸ್ಟೇಸಿ ಬಾರ್​ನಲ್ಲಿ ಅನುಮತಿ ಇಲ್ಲದೆ ಡಿಜೆ ಪಾರ್ಟಿ ಮಾಡುತ್ತಿದ್ದ ಮಣಿಪಾಲದ ವಿದ್ಯಾರ್ಥಿಗಳನ್ನು ಮಣಿಪಾಲ ವೃತ್ತ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ಮಟ್ಟ ಹಾಕಿದ್ದರು. ಪ್ರತಿ ವೀಕೆಂಡ್​ನಲ್ಲೂ ಮಣಿಪಾಲ ಪೊಲೀಸರು ಮಣಿಪಾಲದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇದರಲ್ಲಿ ಟಿ.ವಿ.ದೇವರಾಜ್ ಪ್ರಮುಖ ಪಾತ್ರ ವಹಿಸಿದ್ದಾರೆ.

ತನಿಖೆಯಲ್ಲಿ ಎಕ್ಸ್ ಫರ್ಟ್ 

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣಸಘಟ್ಟದ ಮದರಸಾ ಬಳಿ ನಡೆದ ವೃದ್ಧನ ಕೊಲೆ ಪ್ರಕರಣವನ್ನು ರಕ್ತದ ಜಾಡು ಹಿಡಿದು ಕೇವಲ 24 ಗಂಟೆಗಳಲ್ಲಿ ಸಿಪಿಐ ಟಿ.ವಿ. ದೇವರಾಜ್‌ ಭೇದಿಸಿದ್ದರು. ಆಧುನಿಕ ತಂತ್ರಜ್ಞಾನ ವಿಧಾನ ಬಳಸಿ ಕೇಸು ಭೇದಿಸಿದ ಹಿನ್ನೆಲೆಯಲ್ಲಿ’ಅಪರಾಧ ಪ್ರಕರಣಗಳ ತನಿಖೆಯಲ್ಲಿನ ಅನನ್ಯ ಸಾಧನೆ’ ಪರಿಗಣಿಸಿ ಕೇಂದ್ರ ಸರಕಾರದ ಗೃಹ ಸಚಿವರ ಪದಕ ಅವರಿಗೆ ನೀಡಿತ್ತು. 

2018 ಮುಖ್ಯಮಂತ್ರಿ ಪದಕ

 ಹಲವಾರು ಸೂಕ್ಷ್ಮ ಪ್ರಕರಣಗಳನ್ನು ಬೇಧಿಸಿದ ಹೆಗ್ಗಳಿಕೆ ಟಿ.ವಿ ದೇವರಾಜ್ ಗಿದೆ. ಸಧ್ಯ ಮಣಿಪಾಲ್ ನಲ್ಲಿ ಸರ್ಕಲ್ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಟಿ ವಿ ದೇವರಾಜ್ ಗೆ 2018 ಮುಖ್ಯಮಂತ್ರಿ ಮೆಡಲ್  ಪಡೆದಿದ್ದಾರೆ. 

ದೇವರಾಜ್ ಬೇಧಿಸಿದ ಪ್ರಕರಣಗಳು

ಟಿವಿ ದೇವರಾಜ್ ತನಿಖೆಗೆ ಕೈಹಾಕಿದ್ದಾರೆಂದ್ರೆ ಆರೋಪಿಗಳ ಕತೆ ಮುಗಿದಂಗೆ. ದಾವಣಗೆರೆ ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ವೈದ್ಯರ ಬಂಧನ, ಎನ್ ಡಿ ಪಿ ಹೊನ್ನಾಳಿ  ಗಣಮಗ ಹತ್ಯೆ ಪ್ರಕರಣ,  ಶಿವಮೊಗ್ಗ  ಕೃಷಿ ವಿಜ್ಞಾನಿ ಗಂಗಾಪ್ರಸಾದ್ ನಿಗೂಢ ಸಾವಿನ ಪ್ರಕರಣ,  ಸಿಇನ್ ಇನ್ಸಪೆಕ್ಟರ್ ಆಗಿದ್ದ ಸಂದರ್ಭದಲ್ಲಿ  ಸೈಬರ್ ಕ್ರೈಮ್ ನಲ್ಲಿ  ಪೇಸ್ ಬುಕ್ ಕೇಸ್, ಡಿವೈಎಸ್ ಕಾಪಿ ಹಗರಣ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಟಿ ವಿ ದೇವರಾಜ್  ತನಿಖೆಯಲ್ಲಿ ನಿಷ್ಣಾತ ಸೂಪರ್ ಕಾಪ್ ಸಹ ಹೌದು.  

ಗಣ ಮಗ ಕೊಲೆ ಪ್ರಕರಣ ಬೇಧಿಸಿದ್ದ ದೇವರಾಜ್

ಹೊನ್ನಾಳಿ: ಇಲ್ಲಿಯ ದೊಡ್ಡಕೇರಿ ಬೀರಲಿಂಗೇಶ್ವರ ದೇವರ ಗಣಮಗ ಎಚ್.ಕೆ. ಕುಮಾರ್ ಅವರ ಕೊಲೆ ಪ್ರಕರಣ ನಡೆದ 48 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಸಿಪಿಐ ದೇವರಾಜ್ ಹಾಗೂ ತಂಡ ಯಶಸ್ವಿಯಾಗಿತ್ತು.ಹೊನ್ನಾಳಿಯ ಬಿ.ಎಸ್. ಮೋಹನ್ ಸಣ್ಣರಾಯಪ್ಪ (28), ಹಾಸನದ ದಿನೇಶ್ ದೊರೆಸ್ವಾಮಿ (38), ಹರಿಹರ ತಾಲ್ಲೂಕಿನ ಹಿಂಡಸಘಟ್ಟ ಕ್ಯಾಂಪ್‌ನ ಕಾರ್ತಿಕ್‍ಕುಮಾರ್ ನಾಯ್ಕ (29), ಪರಮೇಶ್‍ ನಾಯ್ಕ (30), ಸುನೀಲ್ ನಾಯ್ಕ (24) ಅವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ್ದ ಮೋಟರ್ ಸೈಕಲ್, ಚಾಕು ಮತ್ತು ಕಂದ್ಲಿ ಆಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಕೊಲೆಯ ಹಿನ್ನೆಲೆ

ಆರೋಪಿಗಳಾದ ಹೊನ್ನಾಳಿಯ ಬಿ.ಎಸ್. ಮೋಹನ್, ಹಾಸನದ ದಿನೇಶ್ (ಕಡದಾರವಳ್ಳಿ ಗ್ರಾಮ, ಹಾಸನ ತಾಲ್ಲೂಕು) ಅವರು ಕುಮಾರ್ ಅವರೊಂದಿಗೆ ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಈಚೆಗೆ ಹಣಕಾಸಿನ ವಿಚಾರದಲ್ಲಿ ವೈಷಮ್ಯ ಉಂಟಾಯಿತು ಎನ್ನಲಾಗಿದೆ. ಹೀಗಾಗಿ ಕುಮಾರ್ ಅವರು ಮೋಹನ್ ಮತ್ತು ದಿನೇಶ್ ಅವರ ಬಳಿ ರಿಯಲ್ ಎಸ್ಟೇಟ್‌ನಲ್ಲಿ ತಾವು ತೊಡಗಿಸಿದ್ದ ಹಣವನ್ನು (₹ 20 ಲಕ್ಷ ), ವಾಪಸ್‌ ನೀಡುವಂತೆ ಕೇಳಿದ್ದರು. ಆದರೆ ಈ ಹಣವನ್ನು ವಾಪಸ್‌ ಮಾಡದೇ ತಮ್ಮಲ್ಲಿಯೇ ಇಟ್ಟುಕೊಳ್ಳುವ ಉದ್ದೇಶದಿಂದ ಮತ್ತು ಇತರ ಹಣದ ವ್ಯವಹಾರವನ್ನು ಮುಚ್ಚಿ ಹಾಕುವ ದುರುದ್ದೇಶದಿಂದ ಮೋಹನ್ ಮತ್ತು ದಿನೇಶ್ ಸೇರಿ ಈ ಕೃತ್ಯ ಎಸಗಿದ್ದರು.

 3 ಲಕ್ಷಕ್ಕೆ ಸುಪಾರಿ

‘ಹೊನ್ನಾಳಿಯ ಮೋಹನ್ ಅವರು ತನಗೆ ಪರಿಚಯವಿದ್ದ ಹರಿಹರ ತಾಲ್ಲೂಕಿನ ಹಿಂಡಸಘಟ್ಟ ಕ್ಯಾಂಪ್‌ನ ಕಾರ್ತೀಕ್‍ಕುಮಾರ್ ನಾಯ್ಕ, ಪರಮೇಶ್ ನಾಯ್ಕ ಹಾಗೂ ಸುನೀಲ್ ನಾಯ್ಕ ಅವರಿಗೆ ₹ 3 ಲಕ್ಷಕ್ಕೆ ಸುಪಾರಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೇವಲ ₹ 2,000 ಮುಂಗಡ ನೀಡಿದ್ದಾರೆ. ಈ ಮೂರು ಜನರನ್ನು ಕೊಲೆ ನಡೆಯುವ ಒಂದು ದಿನ ಮುಂಚಿತವಾಗಿ ಹೊನ್ನಾಳಿಗೆ ಕರೆಸಿಕೊಂಡು ಒಳ ಸಂಚು ರೂಪಿಸಿದ್ದರು. ಮರಳಿ ನೀಡಬೇಕಾದ ಹಣವನ್ನು ಕೊಡುತ್ತೇವೆ ಅಂತ ನಂಬಿಸಿ ಕುಮಾರ ಅವರನ್ನು, ಕಾರಿನಲ್ಲಿ ಎಚ್. ಕಡೆದಕಟ್ಟೆ ಸಮೀಪದ ಟವರ್ ಬಳಿ ಇರುವ ಜಮೀನಿಗೆ ಕರೆಸಿಕೊಂಡಿದ್ದರು. ಇದಕ್ಕೂ ಮುಂಚಿತವಾಗಿ ಹೊಂಚು ಹಾಕಿ ಕುಳಿತಿದ್ದ ಮೂವರು ಪಾತಕಿಗಳು ಕುಮಾರ ಅವರ ಕುತ್ತಿಗೆಗೆ ಹಿಂದಿನಿಂದ ಟವೆಲ್ ಹಾಕಿ ಬಿಗಿದು ಕುತ್ತಿಗೆಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದು, ಕಂದ್ಲಿ (ಮಚ್ಚು)ಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

ಈ ಕೊಲೆ ಪ್ರಕರಣವನ್ನು ಸಿಪಿಐ ದೇವರಾಜ್ ಅವರು ಕೊಲೆಯಾದ 48 ಗಂಟೆಗಳಲ್ಲಿಯೇ ತಮ್ಮ ತಾಂತ್ರಿಕ ಹಾಗೂ ಕೌಶಲದಿಂದ ಹಾಗೂ ಎಸ್‍ಐ ಬಸವನಗೌಡ ಬಿರಾದರ್ ಹಾಗೂ ಇತರ ಸಾಕ್ಷಿದಾರರ ತ್ವರಿತ ವಿಚಾರಣೆಯಿಂದ ಪತ್ತೆ ಹಚ್ಚಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್‍ಪಿ ರಾಮಗೊಂಡ ಬಿ. ಬಸರಗಿ ಹಾಗೂ ಚನ್ನಗಿರಿ ಡಿವೈಎಸ್‍ಪಿ ಡಾ. ಸಂತೋಷ್ ಅವರು ಮಾರ್ಗದರ್ಶನ ಮಾಡಿದ್ದರು.

ಎಸ್‍ಪಿಯವರಿಂದ ಶ್ಲಾಘನೆ, ಬಹುಮಾನ ಘೋಷಣೆ

ಸಿಪಿಐ ದೇವರಾಜ್ ಅವರೊಂದಿಗೆ ಎಸ್‍ಐ ಬಸವನಗೌಡ ಬಿರಾದರ್, ಎಎಸ್‍ಐ ಹರೀಶ್, ಪರುಶುರಾಮಪ್ಪ, ಮಾಲತೇಶಪ್ಪ, ಪೊಲೀಸ್ ಸಿಬ್ಬಂದಿಗಳಾದ ರಂಗನಾಥ್, ಧರ್ಮಪ್ಪ, ರಾಜು, ಮಂಜುನಾಥ್, ಮೌನೇಶ್, ಗಣೇಶ, ಜಗದೀಶ್, ಸುನೀಲ್ ಕುಮಾರ್, ಗಾಳಿ ಯೋಗೀಶ್, ಪ್ರಸನ್ನಕುಮಾರ್, ರಂಗನಾಥ್, ಜಗದೀಶ, ಹನುಮಂತಪ್ಪ, ಶಾಂತಕುಮಾರ್, ರಾಘವೇಂದ್ರ ಈ ತಂಡದಲ್ಲಿದ್ದರು. ಇವರಿಗೆ ಎಸ್‍ಪಿ ರಿಷ್ಯಂತ್ ಅವರು ಬಹುಮಾನ ಘೋಷಣೆ ಮಾಡಿದ್ದರು. ಒಟ್ಟಾರೆ  ಸೂಪರ್ ಕಾಪ್ ದೇವರಾಜ್ ಪೊಲೀಸ್ ಇಲಾಖೆಯಲ್ಲಿ ತನ್ನದೇ ಆದ ಸಾಧನೆ ಮಾಡಿದ್ದು, ಇವರ ಜನಸೇವೆಗೆ ಇನ್ನಷ್ಟು ಪ್ರಶಸ್ತಿ ಬರಲಿ.

…..

 

Share.
Leave A Reply

Exit mobile version