ದಾವಣಗೆರೆ : ಇತ್ತೀಚೆಗಷ್ಟೇ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಬಿಜೆಪಿಗೆ ಸೇರಿದ್ರು. ಇದ್ರಿಂದ ಇನ್ಮೇಲೆ ರೆಡ್ಡಿ ಮೇಲಿದ್ದ ಸಿಬಿಐ ಕೇಸ್ ಸೇರಿದಂತೆ ಹಲವು ಪ್ರಕರಣಗಳು ಸದ್ದು ಮಾಡಲ್ಲ. ರೆಡ್ಡಿಗೆ ಒಳ್ಳೆ ದಿನಗಳು ಬಂದ್ವು ಅಂತೇಳಿ ಎಲ್ರೂ ಭಾವಿಸಿದ್ರು. ಆದ್ರೆ ಜನಾರ್ದನರೆಡ್ಡಿ ಬಿಜೆಪಿಗೆ ಸೇರಿದ್ಮೇಲೆ ಹೊಸ ಸಂಕಷ್ಟ ಎದುರಾಗಿದೆ. ಅವರ ಶಾಸಕ ಸ್ಥಾನವೇ ರದ್ದಾಗೋ ಸಾಧ್ಯತೆ ಇದೆ.. ಹಾಗಾದ್ರೆ ಏನಿದು ಜನಾರ್ದನರೆಡ್ಡಿಗೆ ಹೊಸ ಸಂಕಷ್ಟ ಅಂದ್ರಾ?
ಬಿಜೆಪಿ ಅಂದ್ರೆ ವಾಷಿಂಗ್ ಮಷಿನ್ ಪಾರ್ಟಿ ಇದ್ದಂತೆ.. ಯಾರ್ಯಾರ ಮೇಲೆ ಐಟಿ, ಇಡಿ, ಸಿಬಿಐ ದಾಳಿಗಳಾಗೋ ಭೀತಿ ಇರುತ್ತೋ ಅಂಥವರೆಲ್ಲಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಿದ್ದಾರೆ. ಅವರು ಬಿಜೆಪಿ ಪಕ್ಷ ಸೇರಿದ ಕೂಡ್ಲೇ ಅವರ ಮೇಲೆ ಐಟಿ, ಇಡಿ, ಸಿಬಿಐ ದಾಳಿಗಳ ಸೈಲೆಂಟ್ ಆಗ್ತಾವೆ ಅನ್ನೋ ಮಾತುಗಳಿವೆ. ಇದೇ ವಿಷ್ಯದ ಬಗ್ಗೆ ಇತ್ತೀಚೆಗೆ ಪ್ರಜಾವಾಣಿ ಒಂದು ಸುದೀರ್ಘ ವರದಿಯನ್ನ ಪಬ್ಲಿಶ್ ಮಾಡಿತ್ತು. ಅದನ್ನ ಕೋಟ್ ಮಾಡಿದ್ದ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿಯನ್ನ ಕುಟುಕಿತ್ತು.
ಬಿಜೆಪಿ ಅಂದ್ರೆ ಒಂಥರಾ ವಾಷಿಂಗ್ ಮೆಷಿನ್ ಇದ್ದಂತೆ, ಕಂಪೆನಿಗಳು ಭ್ರಷ್ಟಾಚಾರದ ಆರೋಪ ಹೊತ್ತಿದ್ದರೆ ಚುನಾವಣಾ ಬಾಂಡ್ ಖರೀದಿಸುವ ಮೂಲಕ ಶುದ್ಧರಾಗಬಹುದು! ರಾಜಕಾರಿಣಿಗಳು ಭ್ರಷ್ಟರಾಗಿದ್ದರೆ ಬಿಜೆಪಿ ಸೇರುವ ಮೂಲಕ ಪವಿತ್ರರಾಗಬಹುದು!
“ಯಾವೊಬ್ಬ ಭ್ರಷ್ಟಾಚಾರಿಯನ್ನೂ ಬಿಡುವುದಿಲ್ಲ” ಎಂದಿದ್ದ ಮೋದಿಯವರು ನುಡಿದಂತೆ ನಡೆಯುತ್ತಿದ್ದಾರೆ, ಯಾವೊಬ್ಬ ಭ್ರಷ್ಟರನ್ನೂ ಬಿಡದೆ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ! ಭ್ರಷ್ಟಾಚಾರದ ವಿರುದ್ಧ ಮೋದಿಯವರ ಸರ್ಜಿಕಲ್ ಸ್ಟ್ರೈಕ್ ಅಮೋಘವಾದುದು ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕೆಂಡಾಕಾರಿತ್ತು..
ಪರಿಸ್ಥಿತಿ ಹೀಗಿರೋವಾಗ್ಲೇ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರೋ ಗಾಲಿ ಜನಾರ್ದನರೆಡ್ಡಿ ಅವರನ್ನ ಬಿಜೆಪಿ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿರೋ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜೊತೆಗೆ ಇನ್ಮೇಲೆ ಜನಾರ್ದನರೆಡ್ಡಿ ಅವರ ಮೇಲಿರೋ ಎಲ್ಲ ಪ್ರಕರಣಗಳು ಸೈಡ್ಲೈನ್ ಆಗ್ತಾವೆ ಅನ್ನೋ ಮಾತುಗಳಿದ್ವು. ಆದ್ರೆ ವಿಪರ್ಯಾಸ ನೋಡಿ, ಜನಾರ್ದನರೆಡ್ಡಿ ಬಿಜೆಪಿ ಸೇರಿದ್ಮೇಲೆ ಇದೀಗ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಯಾಕಂದ್ರೆ ರೆಡ್ಡಿ ಬಿಜೆಪಿ ಸೇರಿದ ಬೆನ್ನಲ್ಲೇ ಅವರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಅಂತೇಳಿ ರಾಜ್ಯ ಕಾಂಗ್ರೆಸ್ ವಿಧಾನಸಭೆ ಸ್ಪೀಕರ್ ಯುಟಿ ಖಾದರ್‌ಗೆ ದೂರು ನೀಡಿದೆ.
ಹೌದು ಓದುಗರೇ, ಕೆಪಿಸಿಸಿ ವಕ್ತಾರ ಸಿ ರಮೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಸ್ಪೀಕರ್‌ಗೆ ದೂರು ಸಲ್ಲಿಸಿದ್ದಾರೆ. ಬಿಜೆಪಿಗೆ ಸೇರಿದ ಜನಾರ್ದನ ರೆಡ್ಡಿ ಅವರನ್ನು ಸಂವಿಧಾನದ 10ನೇ ಅನುಸೂಚಿ ಅನ್ವಯ ಅನರ್ಹಗೊಳಿಸಬೇಕು ಅಂತೇಳಿ ಕಾಂಗ್ರೆಸ್ ಮುಖಂಡರು ದೂರು ಕೊಟ್ಟಿದ್ದು, ಜನಾರ್ದನ ರೆಡ್ಡಿಗೆ ಸಂಕಷ್ಟ ಶುರುವಾಗಿದೆ.
KRPP ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಲು ಜನಾರ್ದನರೆಡ್ಡಿ ವಿಧಾನಸಭಾ ಸ್ಪೀಕರ್ ಹಾಗೂ ಚುನಾವಣಾ ಆಯೋಗದ ಅನುಮತಿ ಪಡೆದಿಲ್ಲ ಎಂದು ಕಾಂಗ್ರೆಸ್ ದೂರಿನಲ್ಲಿ ತಿಳಿಸಿದೆ. ಅದಲ್ಲದೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯಾವುದೇ ಪದಾಧಿಕಾರಿಯಾಗಿರದಿದ್ದರೂ ಜನಾರ್ದನ ರೆಡ್ಡಿ ಪಕ್ಷವನ್ನು ವಿಲೀನ ಮಾಡುವುದಾಗಿ ಘೋಷಿಸಿರುವುದು ಪಕ್ಷಾಂತರ ನಿಷೇಧ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ದೂರು ನೀಡಿದ್ದಾರೆ.
ಇನ್ನ KRPP ಪಕ್ಷ ವಿಲೀನದ ಬಗ್ಗೆ ಆ ಪಕ್ಷದ ಪದಾಧಿಕಾರಿಗಳು ಯಾವುದೇ ಸಭೆ ನಡೆಸಿ ನಿರ್ಧಾರ ತೆಗೆದುಕೊಂಡಿಲ್ಲ. ನೇರವಾಗಿ ಜನಾರ್ದನ ರೆಡ್ಡಿಯವರೇ ವಿಲೀನದ ಬಗ್ಗೆ ಘೋಷಿಸಿ ಬಿಜೆಪಿ ಜೊತೆ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಅದಲ್ಲದೇ ಸುಪ್ರೀಂ ಕೋರ್ಟ್‌ನ 2002ರ ತೀರ್ಪನ್ನು ತನ್ನ ದೂರಿನಲ್ಲಿ ಉಲ್ಲೇಖಿಸಿರುವ ಕಾಂಗ್ರೆಸ್ ಮುಖಂಡರು ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಪಕ್ಷ ವಿಲೀನ ವೇಳೆ ನಿಯಮಗಳು ಉಲ್ಲಂಘನೆಯಾಗಿದ್ದರೆ ಜನಾರ್ದನ ರೆಡ್ಡಿ ಅವರು ಅನರ್ಹಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಅಕ್ರಮ ಗಣಿ ಪ್ರಕರಣದ ಕಾರಣಕ್ಕೆ ರಾಜಕೀಯದಿಂದ ದಶಕಗಳ ಕಾಲ ದೂರ ಇದ್ದ ಜನಾರ್ದನ ರೆಡ್ಡಿ, ಈಗ ಶಾಸಕ ಸ್ಥಾನದಿಂದ ಅನರ್ಹಗೊಂಡರೆ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇದರಿಂದ ಅವರ ರಾಜಕೀಯ ಜೀವನ ಮತ್ತೆ ಅನಿಶ್ಚಿತತೆಗೆ ಹೋಗಲಿದೆ.
ಒಂದೊಮ್ಮೆ ಜನಾರ್ದನರೆಡ್ಡಿ ಶಾಸಕ ಸ್ಥಾನ ಅನರ್ಹಗೊಂಡ್ರೆ ಬಿಜೆಪಿ ನಾಯಕರು ಊಟದಲ್ಲಿ ಕರಿಬೇವಿನ ರೀತಿ ರೆಡ್ಡಿಯನ್ನ ಸೈಡಿಗಿಡ್ತಾರಾ.? ರೆಡ್ಡಿ ರಾಜಕೀಯ ಅಲ್ಲಿಗೆ ಅಂತ್ಯವಾಗುತ್ತಾ.?