ದಾವಣಗೆರೆ : ಬಿಜೆಪಿ ಭಿಷ್ಮ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಸಲು ಹಾಗೂ ರಾಜಕೀಯವಾಗಿ ಮುಗಿಸಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಂತ್ರ ಹೆಣೆದಿದ್ದರು ಎನ್ನುವ ಆರೋಪ ಕೇಳಿಬಂದಿವೆ. ಇದು ಬೇರಾರು ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದು ಸಿದ್ದು ಮಾತಿನ ಹಿಂದೆ ಸತ್ಯ ಇದೆನಾ? ಸಿಎಂ ಕುರ್ಚಿ ಬಿಟ್ಟುಕೊಟ್ಟ ಗುರು ಯಡಿಯೂರಪ್ಪ ಅವರಿಗೆ ಬೊಮ್ಮಾಯಿ ಮೋಸ ಮಾಡಿದ್ರಾ? ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
2021ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಕಾರಣ ಯಾರು? ಎನ್ನುವ ಪ್ರಶ್ನೆ ಈಗ ಎದ್ದಿದೆ. ಬಿಜೆಪಿ ಒಳಗೆ ಇರುವ ಯಡಿಯೂರಪ್ಪ ವಿರೋಧಿ ಬಣ ಬಿಎಸ್ವೈ ವಿರುದ್ಧ ಹೈಕಮಾಂಡ್ಗೆ ದೂರು ನೀಡಿತ್ತು. ಇದು ಮಾತ್ರವಲ್ಲ ಯಡಿಯೂರಪ್ಪ ಜತೆಗೆ ಇದ್ದುಕೊಂಡೇ ಯಡಿಯೂರಪ್ಪ ಅವರಿಗೆ ಖೆಡ್ಡಾ ತೋಡಿದ್ರಾ? ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದು ಯಾರು ಅಲ್ಲ ಯಡಿಯೂರಪ್ಪ ಅವರ ಪಟ್ಟ ಶಿಷ್ಯ ಹಾಗೂ ತಾವೇ ಮುಖ್ಯಮಂತ್ರಿಮಾಡಿದ್ದ ಬಸವರಾಜ ಬೊಮ್ಮಾಯಿ ಅವರೇ ಬೆನ್ನಿಗೆ ಚೂರಿ ಹಾಕಿದ್ರಾ ಎನ್ನುವ ಆರೋಪ ಕೇಳಿಬರುತ್ತಿವೆ. ಈ ಆರೋಪ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವುದು ದೊಡ್ಡ ಸುದ್ದಿಯಾಗಿದೆ.
ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬಸವರಾಜ ಬೊಮ್ಮಾಯಿ ಪ್ಲಾನ್ ಮಾಡಿದ್ದರು. ಹೀಗಾಗಿ ಜೊತೆಯಲ್ಲಿದ್ದೇ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹಮದ್ ಖಾನ್ ಪಠಾಣ್ ಪರ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ಬೊಮ್ಮಾಯಿ ಅವರನ್ನು ಈಗ ಎಲ್ಲರೂ ಶಕುನಿ ಎಂದು ಕರೆಯುತ್ತಿದ್ದಾರೆ, ಒಳಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುವ ಬೊಮ್ಮಾಯಿ ಅಂತಹವರು ರಾಜಕಾರಣದಲ್ಲಿ ಇರಬಾರದು.
ಇಲ್ಲಿನ ಬಿಜೆಪಿ ಅಭ್ಯರ್ಥಿ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಗೆ ಹಳ್ಳಿ ಬದುಕು ಗೊತ್ತಿಲ್ಲ. ಬಡವರ ಬದುಕು ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದು ಬಡವರ ಕಷ್ಟ, ಸುಖ ಗೊತ್ತಿರುವವರು. ಇವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ಮೋದಿ ಕುಟುಂಬ ರಾಜಕಾರಣದ ಬಗ್ಗೆ ಭರ್ಜರಿ ಭಾಷಣ ಮಾಡುತ್ತಾರೆ. ಆದರೆ, ಇಲ್ಲಿ ಮಾಜಿ ಸಿಎಂಗಳ ಮೊಮ್ಮಗ, ಮಗನಿಗೆ ಟಿಕೆಟ್ ನೀಡಿದ್ದಾರೆ. ಇದು ಕುಟುಂಬ ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದರು.
ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅಥವಾ ಬಿಜೆಪಿಯವರ ಷಡ್ಯಂತ್ರಗಳಿಗೆ ನಾನು ಎಂದಿಗೂ ಮಣಿಯುವುದಿಲ್ಲ. ಹಣ ಬೇಕಿದ್ದರೆ ಎಷ್ಟು ಬೇಕಾದರೂ ಮಾಡಬಹುದಿತ್ತು. ಆದರೆ, ಯಾವುದೇ ತಪ್ಪಿಲ್ಲದ ಕಾರಣ ಸುಳ್ಳು ಆರೋಪ ಹೊರಿಸಿ ಷಡ್ಯಂತ್ರ ಹೆಣೆದು ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ನಾಡಿನ ಜನತೆಯ ಪ್ರೀತಿ, ಆಗ್ರಹಗಳಿಗೆ ನಾನು ಬಗ್ಗುತ್ತೇನೆಯೇ ಹೊರತು ಇವರ ಕುತಂತ್ರಕ್ಕಲ್ಲ. ಇದಕ್ಕೆ ನಾಡಿನ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ಗ್ಯಾರಂಟಿ ನನಗಿದೆ. ಆದರೂ ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಒಟ್ಟಿನಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಇತಿಹಾಸದಲ್ಲಿ ಅಡಗಿರುವ ಘಟನೆಗಳು, ಕಹಿಸತ್ಯಗಳು ಒಂದೊಂದಾಗಿ ಹೊರ ಬರುತ್ತಿರುವುದು ಸುಳ್ಳಲ್ಲ.