ಶಿವಮೊಗ್ಗ : ಆಗುಂಬೆ ಹಚ್ಚ ಹಸಿರನ್ನು ಹೊದ್ದು ಮಲಗಿರುವ ಪರಿಸರ, ಇಲ್ಲಿ ಸೂರ್ಯಾಸ್ತ, ಸೂರ್ಯ ಮುಳುಗುವುದನ್ನು ನೋಡುವುದೇ ಒಂದು ಅನುಭವ, ಇದಕ್ಕಾಗಿ ಇಲ್ಲಿ ಸಾಕಷ್ಟು ಪ್ರೇಮಿಗಳು, ಟೂರಿಸ್ಟ್ ಗಳು ಬರುತ್ತಾರೆ..ಆದರೆ ಇಂತಹ ಸ್ವಚ್ಛಂದ ಪರಿಸರದಲ್ಲಿ ಧರ್ಮಸ್ಥಳ ಪ್ರತಿನಿಧಿ ಯುವತಿಯ ಕೊಲೆಯಾಗಿದೆ.
ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯಾಗಿದ್ದ ಪೂಜಾ.ಎ.ಕೆ (24) ಕೊಲೆಯಾದ ಸುದ್ರೂಪಿ. ಈಕೆ ಕಳೆದ ಜೂ.30ರಂದು ಮನೆಯಿಂದ ಕೆಲಸಕ್ಕೆ ಹೋಗಿದ್ದುಏಕಾಏಕಿ ಕಾಣೆಯಾಗಿದ್ದಳು. ಮನೆಗೆ ವಾಪಸ್ ಬರದ ಹಿನ್ನೆಲೆಯಲ್ಲಿ ಪೂಜಾ ಪೋಷಕರು ಆತಂಕಗೊಂಡು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಬಳಿಕ ಆಗುಂಬೆ ಪೊಲೀಸ್ ಠಾಣೆಯಲ್ಲಿ ತಂದೆ ಕುಶಾಲ್ ಮಿಸ್ಸಿಂಗ್ ಕಂಪ್ಲೇಟ್ ಕೊಟ್ಟಿದ್ದರು.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಿಳಿದಾಗ ಪೊಲೀಸರಿಗೆ ಪೂಜಾ ಮರ್ಡರ್ ಆಗಿರುವುದು ಗೊತ್ತಾಗುತ್ತದೆ. ಅಲ್ಲದೇ ನಾಲೂರು-ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮನೆ ಎಂಬ ಗ್ರಾಮದ ಕಾಡಿನಲ್ಲಿ ಯುವತಿಯ ಶವ ಶನಿವಾರ ರಾತ್ರಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಬಳಿಕ ಪ್ರಕರಣ ಬೆನ್ನಿತ್ತಿದ ಖಾಕಿ ಪಡೆ ಆಕೆಯ ಫೋನ್ ಕಾಲ್ ಲಿಸ್ಟ್ ತೆಗೆದು ಮಿಸ್ಸಿಂಗ್ ಆದ ಕೊನೆ ದಿನ ಯಾರೆಲ್ಲ ಕರೆ ಮಾಡಿದ್ದರು ಅವರನ್ನೆಲ್ಲ ಪೊಲೀಸರು ವಿಚಾರಣೆ ನಡೆಸುತ್ತಾರೆ. ಈ ವೇಳೆ ಹಲವು ವರ್ಷಗಳಿಂದ ಸ್ನೇಹಿತನಾಗಿದ್ದ ಮಣಿಕಂಠ ಎಂಬಾತನಿಂದಲೇ ಪೂಜಾ ಕೂಲೆಯಾಗಿರುವುದು ಗೊತ್ತಾಗುತ್ತದೆ.
ಕೊಲೆಗೆ ಏನು ಕಾರಣ
ಮಣಿಕಂಠ ಹಾಗೂ ಪೂಜಾ ಇಬ್ಬರು ಮೊದಲಿನಿಂದಲೂ ಸ್ನೇಹಿತರಾಗಿರುತ್ತಾರೆ. ಹೀಗಿರುವಾಗ ಪೂಜಾಗೆ ಮದುವೆಯಾಗುತ್ತದೆ. ಆದರೆ ಸಂಸಾರದಲ್ಲಿ ಬಿರುಕು ಉಂಟಾಗಿ ಪೂಜಾ ತನ್ನ ತವರು ಮನೆಗೆ ಒಂದುವರೆ ವರ್ಷದ ಹಿಂದೆ ಬರುತ್ತಾಳೆ . ಪುನಃ ಪೂಜಾಗೆ ಕೊಲೆ ಮಾಡಿದ ಮಣಿಕಂಠನ ಸ್ನೇಹಿತನ ಪರಿಚಯವಾಗುತ್ತದೆ. ಹಲವು ದಿನಗಳಿಂದ ಇವರಿಬ್ಬರ ಸ್ನೇಹ ಮುಂದುವರಿಯುತ್ತದೆ. ಹೀಗಿರುವಾಗ ಪೂಜಾ ಇನ್ನೊಬ್ಬ ಹುಡುಗನ ಸ್ನೇಹ ಬೆಳೆಸುತ್ತಾಳೆ. ಒಂದು ದಿನ ಪೂಜಾ ತನ್ನ ಬರ್ತಡೇಯನ್ನು ಇನ್ನೊಬ್ಬ ಹುಡುಗನ ಜತೆ ಆಚರಿಸುತ್ತಾಳೆ. ಇದು ಮಣಿಕಂಠನಿಗೆ ಇಷ್ಟವಾಗಲಿಲ್ಲ. ಬಳಿಕ ಮಣಿಕಂಠ ಪೂಜಾಳನ್ನು ಆಗುಂಬೆಗೆ ಕರೆಸಿ ವಿಚಾರಿಸುತ್ತಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆಯುತ್ತದೆ. ನಂತರ ಮಣಿಕಂಠ ಪೂಜಾಳನ್ನು ಕತ್ತು ಹಿಸುಕಿ ಸಾಯಿಸುತ್ತಾನೆ. ನಂತರ ಆಕೆಯನ್ನು ನಾಲೂರು ಸಮೀಪ ಹೊಂಡದಲ್ಲಿ ಬಿಸಾಡಿ ಹೋಗಿದ್ದಾನೆ.
ದೃಶ್ಯ ಚಿತ್ರದ ಕಥೆ ಕಟ್ಟಿದ್ದ
ನಾಲೂರು ಸಮೀಪ ಹೊಂಡದಲ್ಲಿ ಪೂಜಾಳ ಶವವನ್ನು ಬಿಸಾಡಿದ್ದ ಹೋಗಿದ್ದ ಮಣಿಕಂಠ ತನಗೆ ಏನು ಗೊತ್ತಿಲ್ಲದಂತೆ ನಟಿಸಿದ್ದ. ಅಲ್ಲದೇ ಮಣಿಕಂಠ ಪೂಜಾಳ ಸಂಬಂಧಿಯೇ ಆಗಿದ್ದು, ಸಿನಿಮಾದಲ್ಲಿ ಕಥೆ ಹೇಳಿದಂತೆ ಎಲ್ಲರ ಬಳಿ ಅಲ್ಲಿಗೆ ಹೋಗಿದ್ದೆ, ಇಲ್ಲಿಗೆ ಹೋಗಿದ್ದೆ ಅಂತ ಹೇಳುತ್ತಾನೆ.
ಹೀಗಿರುವಾಗ ಪೊಲೀಸರು ತಮ್ಮದೇ ರೀತಿಯಲ್ಲಿ ವಿಚಾರಣೆ ಮಾಡುತ್ತಾರೆ. ಸುಮಾರು 15 ಜನರನ್ನ ವಿಚಾರಣೆ ನಡೆಸಿದ ಪೊಲೀಸರಿಗೆ ಅನುಮಾನ ಬರುತ್ತದೆ. ಬಳಿಕ ಮಣಿಕಂಠನನ್ನು ತೀವ್ರ ತಪಾಸಣೆಗೆ ಒಳಪಡಿಸಿದ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾನೆ.
300 ಅಡಿ ಆಳಕ್ಕೆ ಮೃತ ದೇಹ ಎಸೆದಿದ್ದ
ಮಣಿಕಂಠ ಆಗುಂಬೆ ಘಾಟ್ ನಲ್ಲಿ ಕೊಲೆಮಾಡಿ ಮೃತದೇಹವನ್ನ 300 ಅಡಿ ಆಳಕ್ಕೆ ಬಿಸಾಕಿರುತ್ತಾನೆ. ಮರವೊಂದಕ್ಕೆ ಆಕೆಯ ಮೃತ ದೇಹ ನೇತಾಡಿಕೊಂಡಿತ್ತು.
ತಪ್ಪೋಪ್ಪಿಕೊಂಡ ಮಣಿಕಂಠ
ನಾಲೂರಿನ ಮಣಿ ಎಂಬಾತ ಕೊಲೆ ಮಾಡಿ ಹೊಂಡಕ್ಕೆ ತಳ್ಳಿದ್ದೇನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಶನಿವಾರ ರಾತ್ರಿ ಆತನನ್ನು ಸ್ಥಳಕ್ಕೆ ಕರೆದೊಯ್ದು ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ನಡೆದ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ:
ಯುವತಿ ಪೂಜೆ ಕೊಲೆ ನಡೆದ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಘಟನಾ ಸ್ಥಳದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು?
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಮಿಥುನ್ ಕುಮಾರ್, ನಾಪತ್ತೆಯಾದ ಮಹಿಳೆ ಅವರ ಸಂಬಂಧಿಕನೇ ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆಗೆ ಮದುವೆಯಾಗಿರುತ್ತದೆ. ಮದುವೆಯಾಗಿ ಎರಡು ವರ್ಷ ಸಂಸಾರ ನಡೆಸಿ ಸರಿಬಾರದ ಹಿನ್ನಲೆಯಲ್ಲಿ ತವರಿಗೆ ಬಂದಿರುತ್ತಾಳೆ. ಈ ಹಿಂದೆ ಮಣಿಕಂಠ ಪ್ರೀತಿ ಪ್ರೇಮವನ್ನು ಯುವತಿ ಮೇಲೆ ಇಟ್ಟುಕೊಂಡಿದ್ದ. ಇದರಿಂದ ಯುವತಿಗೆ ಮಣಿಕಂಠ ಹತ್ತಿರನಾಗಿದ್ದ. ಯಾವ ಕ್ರಿಮಿನಲ್ ಬ್ಯಾಕ್ ರೌಂಡ್ ಇಲ್ಲದ ಮಹಿಳೆಯನ್ನ ಕೊಲೆ ಮಾಡಿರುವ ಬಗ್ಗೆ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಕೊಲೆಗಾರನನ್ನ ಪತ್ತೆಹಚ್ಚಲಾಯಿತು ಎಂದರು. ಒಟ್ಟಾರೆ ಅಮಾಯಕ ಜೀವವೊಂದು ಏನು ಮಾಡದೇ ಬಲಿಯಾಯಿತು. ಸದ್ಯ ತಪ್ಪೇ ಮಾಡದ ಕುಟುಂಬ ಈಗ ಮಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದೆ.