ದಾವಣಗೆರೆ : ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೋಗುಂಡಿ ಬಕ್ಕಪ್ಪ  , ಉಪಾಧ್ಯಕ್ಷರಾಗಿ ಹರಿಹರ ತಾಲೂಕಿನ ಹನಗವಾಡಿಯ ಡಿ.ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅನುಮೋದಕರಾಗಿ ಎಚ್.ಕೆ.ಬಸಪ್ಪ, ಸೂಚಕರಾಗಿ ಜೆ.ಆರ್.ಷಣ್ಮುಖಪ್ಪ ಸೂಚಕರಾಗಿದ್ದರು.

13 ಸದಸ್ಯ ‌ಬಲದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ 10 ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಇದ್ದಾರೆ. ಉಳಿದ 3 ಜನ ಬಿಜೆಪಿ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರು.

ಅಧ್ಯಕ್ಷರ ಆಯ್ಕೆಗೆ  ಬುಧವಾರ ನಡೆದ‌ ಚುನಾವಣೆಯಲ್ಲಿ ಕೋಗುಂಡಿ ಬಕ್ಕಪ್ಪ ಅಧ್ಯಕ್ಷರಾಗಿ , ಡಿ.ಕುಮಾರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಈ ಮೂಲಕ ಕಳೆದ ಅವಧಿಯಲ್ಲಿ ಬಿಜೆಪಿ ತೆಕ್ಕೆಯಲ್ಲಿದ್ದ ಡಿಸಿಸಿ ಬ್ಯಾಂಕ್ ನ ಅಧಿಕಾರವನ್ನು ಕಾಂಗ್ರೆಸ್ ಪಡೆದುಕೊಂಡಿದೆ.

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ (ಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿ ಚುನಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೇತೃತ್ವವಹಿಸಿದ್ದರು‌.  ಈ ಹಿನ್ನೆಲೆಯಲ್ಲಿ 10 ಜನರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಈ ಮೂಲಕ ಕಾಂಗ್ರೆಸ್ ತೆಕ್ಕೆಗೆ ಆಡಳಿತ ಬಂದಿದೆ. ಒಟ್ಟಾರೆ ಸಚಿವ ಮಲ್ಲಿಕಾರ್ಜುನ್ ಹೇಳುವ ನಿರ್ದೇಶಕರೇ ಅಧ್ಯಕ್ಷರಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಯಾರು ಆಕಾಂಕ್ಷಿಗಳಾಗಿದ್ದರು 

ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸ್ವತಃ ಮುತುವರ್ಜಿವಹಿಸಿ ನಾಮಪತ್ರ ಸಲ್ಲಿಸಿದ್ದ ಕೋಗುಂಡಿ ಬಕ್ಕೇಶಪ್ಪ ಅಧ್ಯಕ್ಷ ಹಾದಿಯ ಮೊದಲ ಸ್ಥಾನದಲ್ಲಿದ್ದರು. ಹೊನ್ನಾಳಿ, ನ್ಯಾಮತಿ, ಚನ್ನಗಿರಿ ಭಾಗ 2 ರ ಹಾಲು ಉತ್ಪಾದಕರ ಸಂಘದಿಂದ ಆಯ್ಕೆಯಾಗಿದ್ದ ಎಚ್.ಕೆ.ಬಸಪ್ಪ ಕಂಚುಗಾರನಹಳ್ಳಿ ಎರಡನೇ ಸ್ಥಾನದಲ್ಲಿದ್ದರು..  

ಲೋಕಸಭೆ ಚುನಾವಣೆ, ಕಾಂಗ್ರೆಸ್ ಗೆಲ್ಲಿಸುವ ಶಕ್ತಿ ಇರೋರಿಗೆ ಅಧ್ಯಕ್ಷ ಸ್ಥಾನ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್  ಅಭ್ಯರ್ಥಿ ಗೆಲ್ಲಿಸಬೇಕೆಂಬ ಹೊಣೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್  ಹೆಗಲ ಮೇಲೆ ಇದೆ. ಇದರಲ್ಲಿ ಡಿಸಿಸಿ ಬ್ಯಾಂಕ್ ಮತದಾರರ ಹೊಣೆ ಸಾಕಷ್ಟಿದೆ‌. ಆದ್ದರಿಂದ ಕಾಂಗ್ರೆಸ್ ಗೆ ಮತ ಹಾಕಿಸುವ ಆರ್ಥಿಕ ಶಕ್ತಿ ಇರೋರರನ್ನು ನೇಮಕ ಮಾಡಲಾಗಿದೆ.  ಆದ್ದರಿಂದ ಕೋಗುಂಡಿ ಬಕ್ಕಣ್ಣ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ‌ . ಇನ್ನು ಕೋಗುಂಡಿ ಬಕ್ಕಣ್ಣಸಹಕಾರ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ.  

ನಿರ್ದೇಶಕರ ಮನವೊಲಿಕೆ 

ಕಾಂಗ್ರೆಸ್ ಬೆಂಬಲಿತರು ಹತ್ತು ಸ್ಥಾನ ಗೆದ್ದ ಹಿನ್ನೆಲೆಯಲ್ಲಿ ಅವರಲ್ಲಿಯೇ ಪೈಪೋಟಿ ಹೆಚ್ಚಿತ್ತು. ಆದ್ದರಿಂದ ಅಧ್ಯಕ್ಷ ಸ್ಥಾನ ಹಾದಿಯ ಆಕಾಂಕ್ಷಿಗಳು ನಿರ್ದೇಶಕರ ಮನವೊಲಿಸುತ್ತಿದ್ದರು. ಅಲ್ಲದೇ ಅವರ ಬೇಡಿಕೆಗಳನ್ನು ಕೇಳಿದ್ದರು. ಅಲ್ಲದೇ ಶಾಸಕರ ಮನವೊಲಿಕೆಯೂ ನಡೆಯಿತು.

3 ಬಿಜೆಪಿ ಮತಗಳು ತಟಸ್ಥ

ಕಾಂಗ್ರೆಸ್ ಹತ್ತು ಸ್ಥಾನಗಳು ಗಳಿಸಿದ್ದ ಹಿನ್ನೆಲೆ ಮೂರು ಬಿಜೆಪಿ ಮತಗಳಿಗೆ ಬೆಲೆ ಇರಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮತಗಳೇ ನಿರ್ಣಾಯಕವಾಗಿದ್ದವು. ಅಲ್ಲದೇ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳು ಹೆಚ್ಚು ಇದ್ದರು.  ಕಾರಣ ಬಿಜೆಪಿಯ ಮೂರು ಮತಗಳು ತಟಸ್ಥವಾಗಿದ್ದವು. 

ಕಾಂಗ್ರೆಸ್ ನಿಂದ ಗೆದ್ದವರು ಯಾರು?

ಕಾಂಗ್ರೆಸ್ ಬೆಂಬಲಿತ ದಾವಣಗೆರೆ ‘ಎ’ ವರ್ಗ ಭಾಗ-2 ಬಿ.ಕರಿಬಸಪ್ಪ, ಹರಿಹರ ‘ಎ’ವರ್ಗ ಡಿ.ಕುಮಾರ್, ಚನ್ನಗಿರಿ ‘ಎ’ ವರ್ಗ ಭಾಗ 2 ಸಂತೋಷ ಜಿ.ಎಸ್., ಹೊನಾಳ್ಳಿ ಭಾಗ-1 ಡಿ.ಎಸ್.ಸುರೇಂದ್ರ, ಭಾಗ-2 ಡಿ.ಜೆ.ವಿಶ್ವನಾಥ್, ದಾವಣಗೆರೆ ‘ಬಿ’ ವರ್ಗದಿಂದ ಜೆ.ಆರ್.ಷಣ್ಮುಖಪ್ಪ (ಅವಿರೋಧ) ದಾವಣಗೆರೆ ‘ಸಿ’ ವರ್ಗದಿಂದ ಕೋಗುಂಡಿ ಬಕ್ಕೇಶಪ್ಪ, ದಾವಣಗೆರೆ ಜಿಲ್ಲಾ ‘ಇ’ ವರ್ಗದಿಂದ ಮುದೇಗೌಡ್ರ ಗಿರೀಶ್, ದಾವಣಗೆರೆ, ಜಗಳೂರು, ಹರಿಹರ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಸುರೇಶ್ ಕೆಂಚಮ್ಮನಹಳ್ಳಿ, ಚನ್ನಗಿರಿ ಹೊನಾಳ್ಳಿ, ನ್ಯಾಮತಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಎಚ್.ಕೆ.ಬಸಪ್ಪ ಕಂಚುಗಾರನಹಳ್ಳಿ ಚುನಾಯಿತರಾಗಿದ್ದರು. ಒಟ್ಟಾರೆ ಡಿಸಿಸಿ ಬ್ಯಾಂಕ್ ಗೆ ನೂತನ ಸಾರಥಿ ಆಯ್ಕೆಯಾಗಿದ್ದು, ಆಡಳಿತ ಹೇಗೆ ನಡೆಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

 

Share.
Leave A Reply

Exit mobile version