ನಂದೀಶ್ ಭದ್ರಾವತಿ ದಾವಣಗೆರೆ

ದಾವಣಗೆರೆಯಲ್ಲಿ ಏಕಾಂಗಿಯಾಗಿ ಒಂದು ವರ್ಷದಿಂದ ಓಡಾಡಿರುವ ವಿನಯ್ ಕುಮಾರ್ ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದು, ಅಹಿಂದ ಮತಗಳು ವಿಭಜನೆಯಾಗಲಿವೆ. ಈ ಮೂಲಕ
ದೊಡ್ಮನೆ ಸೊಸೆ, ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆ ವಿನಯ್ ಕುಮಾರ್ ಠಕ್ಕರ್ ಕೊಡುವ ಲಕ್ಷಣಗಳಿವೆ. ಅಲ್ಲದೇ ಕಕ್ಕರಗೊಳ್ಳ ಗ್ರಾಮ್ಲದ ಈ ಇಬ್ಬರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.  ಹಾಗಾದ್ರೆ ವಿನಯ್ ಕುಮಾರ್ ಹೇಳಿದ್ದೇನು? ಸುದ್ದಿ ಓದಿ..

ನಗರದ ತಮ್ಮ ಗೃಹಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಲಕ್ಷಾಂತರ ಮಂದಿ ಅಪೇಕ್ಷೆ ಪಟ್ಟಿದ್ದಾರೆ. ಜನರ ಪ್ರೀತಿ, ಅನಿಸಿಕೆಗೆ ಗೌರವ ನೀಡುತ್ತೇನೆ ಎಂದು ಕಾಂಗ್ರೆಸ್ ಯುವ ಮುಖಂಡ ಜಿ.ಬಿ ವಿನಯ್ ಕುಮಾರ್ ತಿಳಿಸಿದ್ದಾರೆ.

ನನಗೆ ಯಾರ ಭಯವೂ ಇಲ್ಲ. ಹಕ್ಕು ಮಂಡನೆ ಮಾಡ್ತೇನೆ ಅದನ್ನು ಸಾಧಿಸುತ್ತೇನೆ‌ ಎಂದರು. ಪ್ರಜಾಪ್ರಭುತ್ವ ಗೆಲ್ಲಬೇಕು. ನನ್ನನ್ನು ಸಾಮಾನ್ಯ ಜನರಿಗೆ ಅರ್ಪಿಸಿಕೊಳ್ಳುತ್ತೇನೆ‌ ಗೆಲ್ಲಿಸುವ ಜವಾಬ್ದಾರಿ ಜನರದ್ದು ಎಂದರು.

ನಾನು ಸೋಲಲು ರೆಡಿ, ಗೆಲ್ಲಲು ರೆಡಿ. ಸಿದ್ದರಾಮಯ್ಯರಿಗೆ ಮುಖ ತೋರಿಸಲು ಗೆಲ್ಲಿಸಬೇಕು. ಜನರ ಪ್ರೀತಿ, ವಿಶ್ವಾಸ ಇರುತ್ತದೆ.ಜನ ಸ್ಥಾನಮಾನ ಕೊಟ್ಟರೆ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತೇನೆ. ಈಗಿನ ಪರಿಸ್ಥಿತಿಯಲ್ಲಿ ಎರಡು ಪಕ್ಷಗಳ ಅಭ್ಯರ್ಥಿಗಳ ನೋಡಿದರೆ ನನಗೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದರು.

ಅಭ್ಯರ್ಥಿ ಆಯ್ಕೆ ನಿಮ್ಮದು, ಗೆಲ್ಲಿಸುವ ಜವಾಬ್ದಾರಿ‌ ಜನರಮೇಲಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧೆ ಮಾಡುತ್ತಿರುವುದು ನಾನು ಗೆಲ್ಲೋದಿಕ್ಕೆ ಹೊರೆತು ಸೋಲಿಸಲು ಅಲ್ಲ ಎಂದರು.

ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಶ್ರೀ ನೇತೃತ್ವದಲ್ಲಿ ನಡೆದ ಬಂಡಾಯ ಶಮನ ಮಾಡಿದರೂ ವಿನಯ್ ಸೊಪ್ಪು ಹಾಕಿಲ್ಲ. ಸಾಕಷ್ಟು ಒತ್ತಡ ಬರುತ್ತಿದೆ. ನಾನು ಅಂತಂತ್ರ ಸ್ಥಿತಿಯಲ್ಲಿದ್ದೆನೆ. ಸಿಎಂ ಸಾಹೇಬರು, ಶ್ರೀಗಳು ದೊಡ್ಡ ವ್ಯಕ್ತಿಗಳು, ಗೌರವ ಕೊಟ್ಟು ನಾನು ಹೋಗಿ ಕೂತು ಮಾತನಾಡಿದ್ದೇನೆ.

ಈ ವೇಳೆ ನಾನು ಗಟ್ಟಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಮೂಲೆಮೂಲೆಗಳಿಂದ ಜನ ಬರುತ್ತಿದ್ದಾರೆ. ನಾನು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿಲ್ಲ. ನನಗೆ ಟಿಕೆಟ್ ಸಿಗದೇ ಹೋದಾಗ ಯಾರು ಕೂಡ ನನಗೆ ಸಮಾಧಾನದ ಮಾತುಗಳನ್ನು ಹೇಳಲಿಲ್ಲ. ಈಗ ರಾಜ್ಯಮಟ್ಟದಲ್ಲಿ ನನ್ನ ವರ್ಚ ಸ್ಸನ್ನು ನೋಡಿದ ಮೇಲೆ ಬಂಡಾಯ ಶಮನ ಮಾಡಲು ಬರುತ್ತಿದ್ದಾರೆ. ಅದು ಈಗ ಸಾಧ್ಯವಿಲ್ಲ ಎಂದು ವಿನಯ್ ಕುಮಾರ್ ಹೇಳಿದರು.

ಸಿಎಂ ಸಿದ್ದರಾಮಯ್ಯ ಕರೆಸಿ ಭೇಟಿ ಮಾಡಿ ಮನವರಿಕೆ ಮಾಡಲು ಪ್ರಯತ್ನ ಮಾಡಿದರು. ನೀನು ಪಕ್ಷೇತರ ನಿಲ್ಲುವುದು ಕಷ್ಟ ಆಗುತ್ತದೆ, ಯೋಚನೆ ಮಾಡು ಎಂದಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಎರಡು ಕುಟುಂಬಗಳಿವೆ. ಒಂದು ಸಿದ್ದೇಶ್ವರ್ ಇನ್ನೊಂದು ಶಾಮನೂರು ಕುಟುಂಬ. ಅವರೆಲ್ಲ ಒಳ್ಳೆಯ ವ್ಯಕ್ತಿಗಳು. ಆದರೆ ಅವರು ಒಂದು ವ್ಯವಸ್ಥೆ ಕಟ್ಟಿದ್ದಾರೆ. ಅಲ್ಲಿ ಬೇರೆಯವರಿಗೆ ಅವಕಾಶ ಇಲ್ಲ. ಆ ವ್ಯವಸ್ಥೆಯಲ್ಲಿ ಅಹಿಂದ ಬಹಳ ಕಷ್ಟಪಡುತ್ತಿದೆ. ಆದ್ದರಿಂದ ಯಾವುದೇ ಕುಟುಂಬದ ವ್ಯಕ್ತಿ ವಿರುದ್ಧ ನನ್ನ ಹೋರಾಟವಲ್ಲ, ವ್ಯವಸ್ಥೆಯ ವಿರುದ್ಧ ನನ್ನ ಹೋರಾಟ ಎಂದು ಹೇಳಿದರು.

ದಾವಣಗೆರೆಯಲ್ಲಿ ಅಭಿವೃದ್ಧಿ ಮುಖ್ಯ. ಇಲ್ಲಿನ ಜನರಿಗೆ ಸಿದ್ಧಾಂತ ಮುಖ್ಯವಲ್ಲ. ಪ್ರಭಾ ಮಲ್ಲಿಕಾರ್ಜುನ್‌, ಗಾಯಿತ್ರಿ ಸಿದ್ದೇಶ್ವರ್, ಜಿ.ಬಿ.ವಿನಯ್ ಕುಮಾರ್ ಮೂವರಲ್ಲಿ ಯಾರನ್ನು ಆಯ್ಕೆ ಮಾಡಿದ್ರೆ ಒಳ್ಳೆಯದು ಎಂದು ಜನ ಯೋಚನೆ ಮಾಡ್ತಾರೆ. ಜನ ನನ್ನ ಪರ ಇದ್ದಾರೆ. ನಾನು 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ನಾನು ನಾಮಪತ್ರ ಸಲ್ಲಿಸುತ್ತೇನೆ. ಸಲ್ಲಿಸಿದ‌ ನಂತರ ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನನಗೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಂದಲೂ ಫೋನ್​ ಬಂದಿತ್ತು. ಸ್ಪರ್ಧೆ ಮಾಡ್ಬೇಡಿ ಎಂದು ಒತ್ತಡ ಹೇರುತ್ತಿದ್ದಾರೆ. ಟಿಕೆಟ್ ವಂಚಿತನಾಗಿದ್ದ ನನಗೆ ಸಚಿವ ಎಸ್​ ಎಸ್​ ಮಲ್ಲಿಕಾರ್ಜುನ್ ಅವರು ಒಂದು ಕರೆ ಮಾಡಿ ಕೇಳಲಿಲ್ಲ. ಏನೂ ಎತ್ತವೆಂದು ಸಚಿವರು ಕೇಳ್ಬುಹುದಿತ್ತು. ನಾನು ದಾವಣಗೆರೆ ಲೋಕಸಭಾ ಕ್ಷೇತ್ರದ ಹಳ್ಳಿ ಹಳ್ಳಿ ಓಡಾಡಿದ್ದೇನೆ, ಮತದಾರರ ಒಲವು ನನ್ನ ಪರ ಇದೆ ಎಂದರು.

ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಮಿಸ್ ಆಗಿರಬಹುದು. ಆದ್ರೆ ನಾನು ಪಕ್ಕಾ ಕಾಂಗ್ರೆಸ್ಸಿಗ, ಕಾಂಗ್ರೆಸ್ ಸೋಲಿಸುವುದು, ಬಿಜೆಪಿ ಗೆಲ್ಲಿಸುವುದು ನನ್ನ ಗುರಿ ಅಲ್ಲ. ನಾನು ಗೆಲ್ಲುವ ಕಡೆ ಪ್ರಯತ್ನ ಮಾಡುತ್ತೇನೆ. ನಾನು ಸಹ ಕಾಂಗ್ರೆಸ್ ಅಭ್ಯರ್ಥಿ ಎಂದೇ ಪ್ರಚಾರ ಮಾಡಿ ಅಹಿಂದ ಮತಗಳನ್ನು ಒಟ್ಟುಗೂಡಿಸುತ್ತೇನೆ. ಎಲ್ಲ ಅಹಿಂದ ಮುಖಂಡರು ಜಿಲ್ಲೆ, ರಾಜ್ಯ ಕಾಂಗ್ರೆಸ್ ಮುಖಂಡರು ನನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಆದ್ರೆ ನಾನು ನೂರಾರು ಹಳ್ಳಿಗಳ ಜನಸಾಮಾನ್ಯರ, ಮತದಾರರ ಅಭಿಪ್ರಾಯದಂತೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ವಿನಯ್​ ಕುಮಾರ್ ಹೇಳಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ವಿನಯ್ ಕುಮಾರ್ ಅಬ್ಬರ ಜೋರಾಗಲಿದ್ದು, ಮೂವರಲ್ಲಿ ಯಾರು ಪಾರ್ಲಿಮೆಂಟಲ್ ನಲ್ಲಿ ಹೆಜ್ಜೆ ಇಡುತ್ತಾರೆ ಕಾದು ನೋಡಬೇಕು.

Share.
Leave A Reply

Exit mobile version