ದಾವಣಗೆರೆ : ನಗರದಲ್ಲಿ ಅಕ್ಕಿ ವರ್ತಕರು ಸಾಂಪ್ರದಾಯಿಕವಾಗಿ ಕಾಮದಹನ ಮಾಡುವ ಮೂಲಕ ಹೋಳಿ ಆಚರಣೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತ್ತು. ಹೋಳಿ ಹುಣ್ಣಿಮೆ ಪ್ರಯುಕ್ತ ಸೋಮವಾರ ನಡೆಯುವ ರಂಗೋತ್ಸವದ ಅಂಗವಾಗಿ ಕಾಮದಹನ ಮಾಡಲಾಯಿತು.
ಸುತ್ತಲೂ ಕಗ್ಗತ್ತಲು ಆವರಿಸಿದ್ರೂ ನಗರದ ನಾನಾ ಕಡೆ ನಡು ಬೀದಿಯಲ್ಲಿ ಅದೇನೋ ಸಂಭ್ರಮ, ಪೂಜೆ ಪುನಸ್ಕಾರ. ಕೊನೆಗೂ ಬೆಂಕಿ ಹಚ್ಚಿ ದಹಿಸೋ (Holi 2023) ಮೂಲಕ ಎಲ್ಲವೂ ಸಮಾಪ್ತಿಯಾಯಿತು.
ಹೋಳಿ ಹಬ್ಬವನ್ನ ಒಂದೊಂದು ಭಾಗಗಳಲ್ಲಿ ಆಯಾಯ ಸಂಪ್ರದಾಯದಂತೆ ಆಚರಿಸುತ್ತಾರೆ. ಅಂತೆಯೇ ದಾವಣಗೆರೆ ಹಲವೆಡೆ ಇಂತಹ ಸಾಂಪ್ರದಾಯಿಕ ಹೋಳಿ ಆಚರಣೆ ನಿಮಿತ್ತ ಕಾಮಣ್ಣ ಸುಡಲಾಯಿತು.
ಹೋಳಿ ಸಂಭ್ರಮದಲ್ಲಿ ಕಾಮಣ್ಣ ದಹನವೇ ಮುಖ್ಯವಾಗಿದ್ದು, ಅಲ್ಲಲ್ಲಿ ಈ ಕಾಮಣ್ಣ ದಹನ ಸಾಂಪ್ರದಾಯಿಕ ಸಂಭ್ರಮವಾಗಿ ಕಂಡುಬಂತು. ಈ ದೃಶ್ಯವನ್ನ ಕಣ್ತುಂಬಿಕೊಳ್ಳಲು ಇಡೀ ಜನರು ಕಾಮದಹನದಲ್ಲಿ ಪಾಲ್ಗೊಂಡರು.
ನಿರುಪಯುಕ್ತ ವಸ್ತುಗಳಿಂದ ಸಾಯಂಕಾಲ ಹಲಗೆ ಮೆರವಣಿಗೆ ಮೂಲಕ ಹೋಳಿ ಸಂಭ್ರಮ ಆರಂಭವಾಯಿತು. ಮೆರವಣಿಗೆ ಮೂಲಕ ಕಾಮಣ್ಣನನ್ನ ಕರೆತರಲಾಯಿತು. ಈ ಕಾಮಣ್ಣನ ಪ್ರತಿಕೃತಿಯನ್ನ ಮೂರ್ನಾಲ್ಕು ದಿನ ಮುಂಚಿತವಾಗಿ ಮಹಿಳೆಯರು, ಮಕ್ಕಳು, ಯುವಕರು ಸೇರಿಕೊಂಡು ಮಾಡಿದ್ದರು. ನಿರುಪಯುಕ್ತ ವಸ್ತುಗಳನ್ನ ಮತ್ತು ಕಟ್ಟಿಗೆ, ಕುಳ್ಳು ಸೇರಿದಂತೆ ತೆಂಗಿನ ಗರಿಕೆಗಳನ್ನ ಹಾಕಿ ಎತ್ತರದಲ್ಲಿ ನಿಲ್ಲಿಸಿದ್ದರು.ಹಲಗೆ ಮೆರವಣಿಗೆ ಮೂಲಕ ಸಾಗಿ ಬರುವ ಕಾಮಣ್ಣನ ಪ್ರತಿಮೆಗೆ ಬಳಿಕ ಪೂಜಾರಿಯಿಂದ ವಿಶೇಷ ಪೂಜೆ ಜರುಗಿತು.
ನಗರದಲ್ಲಿ ಸಂಭ್ರಮವೋ ಸಂಭ್ರಮ!
ನಗರದ ಓಣಿಗಳಲ್ಲಿ ಮತ್ತು ಪ್ರಮುಖ ವೃತ್ತದಲ್ಲಿ ತಡರಾತ್ರಿ ಕಾಮದಹನ ಮಾಡಲಾಯಿತು. ನಂತರ ಮರುದಿನ ಬೆಳಗ್ಗೆಯಿಂದಲೇ ಬಣ್ಣ ಎರಚಾಡುವ ರಂಗಿನಾಟಕ್ಕೆ ಚಾಲನೆ ಸಿಕ್ಕಿತ್ತು. ಯುವಕರು, ಯುವತಿಯರು ಗುಂಪುಗುಂಪಾಗಿ ಬೈಕ್ ಓಡಿಸಿ ಕೇಕೆ ಹಾಕುತ್ತ ತಮ್ಮ ಬಂಧುಗಳು, ಸ್ನೇಹಿತರ ಮನೆಗೆ ಹೋಗಿ ಬಣ್ಣ ಹಚ್ಚುವ ಮೂಲಕ ರಂಗಪಂಚಮಿಗೆ ರಂಗು ತುಂಬುವುದು ಪ್ರತಿವರ್ಷ ನಡೆಯುವ ಕಾರ್ಯ. ಒಟ್ಟಾರೆ ಕಾಮದಹನ ನಗರದಲ್ಲಿ ಅದ್ದೂರಿಯಾಗಿ ನಡೆದಿದ್ದು ಮಾತ್ರ ಸುಳ್ಳಲ್ಲ.ಈ ಸಂದರ್ಭದಲ್ಲಿ ಅಕ್ಕಿ ವರ್ತಕರಾದ ಎಂ.ವಿ.ಜಯಪ್ರಕಾಶ್ ಮಾಗಿ,ಬಿ.ಪಿ.ಎಂ.ಜಗದೀಶ್, ಹಲವಾಗಲ ರುದ್ರೇಶ್,ಜಯರಾಜ್ ಮೇಟಿ,ಟಿ.ಎಸ್.ಮಲ್ಲಿಕಾರ್ಜುನ, ಸತೀಶ್ ಹುಬ್ಬಳ್ಳಿ, ಪರುಶುರಾಮ್ ಪಿ.ಎಸ್,ಎ.ಬಿ.ಬಸವರಾಜ್, ಶಾಸ್ತ್ರೀ ಬಸವರಾಜ್, ವಿನಾಯಕ ಬ್ಯಾಡಗಿ,ಮಾಳಗಿ ಸಿದ್ದು,ವಿಶ್ವನಾಥ ಬಾದಾಮಿ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ.ಪಾಟೀಲ್,ಟಿಂಕರ್ ಮಂಜಣ್ಣ ಜಿ ಬಿ ಉಮೇಶ್, ಎಂ ವೈ ಆನಂದ್ ಉಪಸ್ಥಿತರಿದ್ದರು