ದಾವಣಗೆರೆ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ವಿಧಾನಸಭೆ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಆರಂಭದಲ್ಲೆ ಆಘಾತ ಎದುರಾಗಿದೆ. ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲಿದ್ದ ಅಜ್ಜಂಪೀರ್ ಖಾದ್ರಿ ಕೈ ಟಿಕೆಟ್ ಕೈತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಸಂದಾನಸೂತ್ರ ಎಣೆಯಲು ಬಂದಿದ್ದ ಸಚಿವ ಜಮೀರ್ ಅಹ್ಮದ್‌ಗೆ ಖಾದ್ರಿ ಬೆಂಬಲಿಗರು ಕಲ್ಲೇಟಿನ ರುಚಿ ತೋರಿಸಿದ್ದಾರೆ. ಹಾಗಾದ್ರೆ ಶಿಗ್ಗಾವಿಯಲ್ಲಿ ನಡೆಯುತ್ತಿರುವುದೇನು? ಭರತ್ ಬೊಮ್ಮಾಯಿ ಸರಳವಾಗಿ ಗೆದ್ದು ಬೀಗುತ್ತಾರಾ? ಮಹತ್ವದ ಸ್ಟೋರಿ ಇಲ್ಲಿದೆ ನೋಡಿ.

ಮೂರು ಕ್ಷೇತ್ರಗಳ ಉಪಚುನಾವಣೆಗೆ ಭರ್ಜರಿ ತಯಾರಿ ನಡೆದಿದ್ದು ಕಾಂಗ್ರೆಸ್ ಹಾಗೂ ಎನ್‌ಡಿಎ ಮೈತ್ರಿಕೂಟ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಹಲವು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮುಸ್ಲಿಂ ಮತದಾರರು ಹೆಚ್ಚಿರುವ ಶಿಗ್ಗಾವಿ ಕ್ಷೇತ್ರದಲ್ಲಿ ಬಂಡಾಯ ಬಾವುಟ ಹಾರಿದೆ. ಇದರಿಂದ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿದ್ದು ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಅನುಕೂಲವಾಗಲಿದೆ.

ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಬದಲಿಗೆ ಯಾಸಿರ್ ಅಹ್ಮದ್ ಖಾನ್‌ಗೆ ಟಿಕೆಟ್ ಘೋಷಣೆಯಾಗಿತ್ತು. ಇದರಿಂದ ಬೇಸರಗೊಂಡಿರುವ ಅಜ್ಜಂಪೀರ್ ಖಾದ್ರಿ ಇದೀಗ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶಿಗ್ಗಾಂವಿ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ನಾಮಪತ್ರ ಸಲ್ಲಿಕೆಗೆ ಇನ್ನು ೧೩ ನಿಮಿಷ ಬಾಕಿ ಇರುವಂತೆ ಬೈಕ್‌ನಲ್ಲಿ ಬಂದ ಅಜ್ಜಂಪೀರ್ ಖಾದ್ರಿ ನಾಮಪತ್ರ ಸಲ್ಲಿಸಿದ್ದಾರೆ. ಅಜ್ಜಂಪೀರ್ ಖಾದ್ರಿಯ ಈ ನಡೆ ಇದೀಗ ಕಾಂಗ್ರೆಸ್ಸಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಅಜ್ಜಂಪೀರ್ ಖಾದ್ರಿಗೂ ಮೊದಲು ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ನಾಮಪತ್ರ ಸಲ್ಲಿಸಿದ್ದರು. ಅಲ್ಲದೆ ಅಜ್ಜಂಪೀರ್ ಖಾದ್ರಿ ನಾಮಪತ್ರ ಸಲ್ಲಿಸದಂತೆ ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಅಜ್ಜಂಪೀರ್ ಖಾದ್ರಿ ಬೆಂಬಲಿಗರು ಜಮೀರ್ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಇದರಿಂದಾಗಿ ಕಾರಿನ ಗ್ಲಾಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಶಿಗ್ಗಾಂವಿ ಬಿಜೆಪಿ ಶಾಸಕರಾಗಿದ್ದ ಮಾಜಿ ಸಿಎಂ, ಪ್ರಸ್ತುತ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರ ರಾಜಿನಾಮೆಯಿಂದ ತೆರವಾಗಿದ್ದ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಇನ್ನು ಬಿಜೆಪಿ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿದೆ. ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಎನ್‌ಡಿಎ ಅಭ್ಯರ್ಥಿಯಾಗಿದ್ದು ಜೆಡಿಎಸ್ ಬೆಂಬಲ ನೀಡಿದೆ. ಕಾಂಗ್ರೆಸ್ ಬಂಡಾಯ ಎದುರಾಗಿದ್ದು ಬಿಜೆಪಿಗೆ ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಶಿಗ್ಗಾವಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೊಸ ತಲೆನೋವು ಶುರುವಾಗಿದೆ.

Share.
Leave A Reply

Exit mobile version