ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೆ ಮುಡಾ ಹಗರಣ ಸುತ್ತಿಕೊಂಡಿದ್ದು, ಮುಡಾ ಹಗರಣದ ಎ-2 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ತೀವ್ರ ಒತ್ತಡ ಕೇಳಿ ಬರುತ್ತಿದೆ. ಇದರ ನಡುವೆ ದಲಿತ ಸಿಎಂ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಚಿವರು, ಶಾಸಕರು ಗುಪ್ತ ಸಭೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಡಿಕೆಶಿ ಸಿಎಂ ಆಗಲು ಬಿಡಬಾರದು ಎಂದು ಶಪಥ ಮಾಡಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಡಿಕೆಶಿಗೆ ಮತ್ತ ಸಿಎಂ ಹುದ್ದೆ ತಪ್ಪುತ್ತಾ? ದಲಿತ ನಾಯಕರ ನಡುವೆ ಆದ ಒಪ್ಪಂದವೇನು? ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಹೆಚ್ಚಾದ ಬೆನ್ನಲ್ಲೆ ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೂಡ ಜೋರಾಗಿಯೇ ಸದ್ದು ಮಾಡುತ್ತಿದೆ. ಈಗಾಗಲೇ ಮುಖ್ಯಮಂತ್ರಿ ರೇಸ್‌ನಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ದಲಿತ ನಾಯಕರಾದ ಸತೀಶ್ ಜಾರಕಿಹೊಳಿ , ಡಾ ಜಿ ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಸ್ಪರ್ಧೆಗೆ ಇಳಿದಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುನ್ನಲೆಗೆ ಬಂದ ಹಿನ್ನೆಲೆ ಸತೀಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ, ಸಾಲುಸಾಲು ಸಭೆಗಳು ನಡೆದಿದ್ದು ಮುಖ್ಯಮಂತ್ರಿ ಬದಲಾವಣೆ ಖಚಿತವಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಬದಲಾವಣೆಯ ಕೂಗು ಹೆಚ್ಚಾದ ಬೆನ್ನಲ್ಲೆ ದಲಿತ ನಾಯಕರಾದ ಡಾ. ಜಿ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಇಬ್ಬರೂ ಮಾತನಾಡಿಕೊಂಡು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆಯಾದರೆ ದಲಿತರೇ ಮುಖ್ಯಮಂತ್ರಿ ಆಗಬೇಕು. ಅದೂ ಕೂಡ ಒಂದು ನಾನೇ ಸಿಎಂ ಆಗ್ತೀನಿ ಇಲ್ಲ ನೀವು ಸಿಎಂ ಆಗಿ ಎಂದು ಒಪ್ಪಂದ ಆಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 135 ಸ್ಥಾನಗಳನ್ನ ಪಡೆದು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿಯೂ ದಲಿತ ಸಿಎಂ ಕೂಗು ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನ ಆಯ್ಕೆ ಮಾಡಿತ್ತು. ಇದೀಗ ಮುಡಾ ಹಗರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಪದತ್ಯಾಗ ಮಾಡಿದ್ರೆ ದಲಿತರೇ ಸಿಎಂ ಆಗಬೇಕು. ಒಂದು ನಾನು ಸಿಎಂ ಆಗ್ತೇನೆ, ಇಲ್ಲವೇ ನೀವು ಆಗಿ ಎಂದು ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ್ ಪರಸ್ಪರ ಒಪ್ಪಂದದ ಮಾತುಕತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ದಲಿತ ನಾಯಕರ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ನಿರಂತರವಾಗಿ ಸಾಲುಸಾಲು ಸಭೆಯನ್ನ ನಡೆಸಿದ್ದು, ನಾಡಹಬ್ಬ ದಸರಾ ಸಂದರ್ಭದಲ್ಲಿ ಡಾ. ಹೆಚ್.ಸಿ ಮಹಾದೇವಪ್ಪ ನಿವಾಸದಲ್ಲಿ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ದಲಿತ ನಾಯಕರು ಮುಖ್ಯಮಂತ್ರಿ ಸ್ಥಾನದ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಪದತ್ಯಾಗ ಮಾಡಿದ್ರೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ದಸರಾ ಬಳಿಕ ಮುಖ್ಯಮಂತ್ರಿ ರಾಜೀನಾಮೆ ನೀಡುತ್ತಾರೆ ಎಂದು ವಿಪಕ್ಷ ನಾಯಕರು ಹೇಳುತ್ತಿದ್ದಾರೆ. ಈ ಹೊತ್ತಿನಲ್ಲಿ ಮುಖ್ಯಮಂತ್ರಿ ರಾಜೀನಾಮೆ ಚರ್ಚೆ ನಡುವೆ ದಲಿತ ಸಚಿವರ ಪ್ರತ್ಯೇಕ ಸಭೆ ಮಹತ್ವ ಪಡೆದುಕೊಂಡಿದೆ.ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Share.
Leave A Reply

Exit mobile version