ಚನ್ನಗಿರಿ: ಭಾರತ ದೇಶದಲ್ಲಿ ತಮ್ಮ ಸತ್ಯ ಶುದ್ದ ಕಾಯಕದ ತತ್ವ ಅದರ್ಶಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಂಬಿಗರ ಚೌಡಯ್ಯನವರು, ವೇಮನರವರು ಮತ್ತು ಸಿದ್ದರಾಮೇಶ್ವರರು ಪ್ರಮುಖರಾಗಿದ್ದರು ಎಂದು ತಹಶೀಲ್ದಾರ್ ಯರ‍್ರಿಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂಬಿಗರ ಚೌಡಯ್ಯನವರು, ವೇಮನರವರು ಮತ್ತು ಸಿದ್ದರಾಮೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಮಾತನಾಡಿ, ಶರಣರು ಒಂದು ಜಾತಿ, ದರ್ಮ, ಪಂಗಡಗಳಿಗೆ ಮೀಸಲಾಗದೇಸತ್ಯ ಶುದ್ದ ಕಾಯಕ ಮಾಡಿದರು.

ತಮ್ಮ ಕಾಯಕದ ಜೊತೆಗೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡ ಅವರು ಇಂದು ನಮಗೆ ಮಾದರಿಯಾಗಿದ್ದಾರೆ ಎಂದರು.

ಸಿದ್ದರಾಮೇಶ್ವರರು ಅಂದಿನ ಕಾಲದಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡದೇ ಇದ್ದರೇ ಪ್ರತಿಯೊಂದು ಗ್ರಾಮಗಳಲ್ಲಿ ನೀರಿಲ್ಲದೇ ಎಷ್ಟು ಸಮಸ್ಯೆಯನ್ನು ಎದುರಿಸಬೇಕಿತ್ತು ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ ಎಂದರು.

ಮಹಾರಾಷ್ಟ್ರದ ಸೊನ್ನಲಾಪುರದಲ್ಲಿ 12 ನೇ ಶತಮಾನದಲ್ಲಿ ಮುದ್ದಣ್ಣ ಮತ್ತು ಸುಗುಲಾದೇವಿಯವರ ಪುತ್ರರಾಗಿ ಜನಿಸಿದ್ದರು. ದೇವಾಲಯಗಳ ನಿರ್ಮಾಣ, ಬಡವರ ಕಲ್ಯಾಣ, ದಾಸೋಹ ಮಾಡುತ್ತಾ ಕಾಯಕಯೋಗಿ ಎನಿಸಿದ್ದು ಅನುಭವಮಂಟಪದ ಮೂಲಕ ಶರಣತತ್ವಕ್ಕೆ ಮಾರುಹೋಗಿದ್ದು ಕಪಿಲ ಸಿದ್ದ ಮಲ್ಲಿಕಾರ್ಜುನ ಅಂಕಿತ ನಾಮದೊಂದಿಗೆ 68000 ವಚನಗಳನ್ನು ರಚಿಸಿದ್ದರೆಂಬ ಮಾಹಿತಿ ಇದ್ದು 1379 ವಚನಗಳು ಇಂದಿಗೂ ಸಿಗುತ್ತವೆ ಎಂದರು.

ಬಿ.ಇ.ಓ. ಜಯಪ್ಪ ಮಾತನಾಡಿ, ಅಂಬಿಗರ ಚೌಡಯ್ಯನವರು 12 ನೇ ಶತಮಾನದ ವಚನಕಾರರು. ತುಂಗಭದ್ರಾ ನದಿಯ ತಟದಲ್ಲಿ ಅಂಬಿಗರ ವೃತ್ತಿಯನ್ನು ನಡೆಸುತ್ತಾ ಸಾಮಾಜಿಕ ಸೇವೆಯನ್ನು ಮಾಡಿದ್ದರು ಎಂದರು. ಕಾರ್ಯಕ್ರಮದಲ್ಲಿ ಸಮಾಜಕಲ್ಯಾಣಾದಿಕಾರಿ ಮಲ್ಲಿಕಾರ್ಜುನ್, ಡಾ.ಅಶೋಕ್, ಬೋವಿ ಸಮಾಜದ ಅಧ್ಯಕ್ಷ ರಾಜಪ್ಪ, ವಿಕ್ರಂ ಪಾಟೀಲ್ ರೆಡ್ಡಿ ಸಮಾಜದ ಅಧ್ಯಕ್ಷ, ಬೆಸ್ತರ ಸಮಾಜದ ಅಧ್ಯಕ್ಷ ನಾಗರಾಜಪ್ಪ ಇತರರು ಹಾಜರಿದ್ದರು.

Share.
Leave A Reply

Exit mobile version