ಚನ್ನಗಿರಿ: ದೇಶದಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳು ಅವಕಾಶಗಳ ಕೊರತೆಯಿಂದ ಉಂಟಾಗುತ್ತಿದ್ದು ಜನರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಅರಿವು ಆಗತ್ಯವಿದೆ ಎಂದು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಮ ಶ್ರೀವತ್ಸ ಹೇಳಿದರು.
ಪಟ್ಟಣದ ಸರಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಸಮಿತಿ ಮತ್ತು ಚನ್ನಗಿರಿ ತಾಲೂಕು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸಾಮಾಜಿಕ ನ್ಯಾಯದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನರಿಗೆ ಕೆಲಸಕ್ಕೆ ತಕ್ಕ ವೇತನ ದೊರಕದ ಕಾರಣ ದೇಶವನ್ನು ಬಿಟ್ಟು ವಲಸೆ ಹೋಗುವುದು ಪ್ರಾರಂಭವಾಗುತ್ತದೆ. ಇದರಿಂದ ದೇಶದ ಅರ್ಥಿಕ ಅಭಿವೃದ್ದಿ ಕುಂಠಿತವಾಗುತ್ತದೆ ಎಂದು ಹೇಳಿದರು.
ವಕೀಲೆ ವಿಜಯಲಕ್ಷ್ಮೀ ಮಾತನಾಡಿ, ವಿಶ್ವಸಂಸ್ಥೆಯು ಸಾಮಾಜಿಕ ನ್ಯಾಯವನ್ನು ನೀಡುವ ಉದ್ದೇಶದಿಂದ ವಿಶ್ವಸಂಸ್ಥೆಯಿಂದ 2007 ರಲ್ಲಿ ಈ ಕಾರ್ಯಕ್ರಮವನ್ನು ಅನುಷ್ಟಾನ ಮಾಡಿದ್ದು 2009 ರಲ್ಲಿ ಜಾರಿಗೆ ತಂದಿದೆ. ಜನರಲ್ಲಿ ಸಾಮಾಜಿಕ ಪ್ರಜ್ಞೆ , ಸಮಾಜಮುಖಿ ಕೆಲಸಗಳನ್ನು ಮೂಡಿಸುವುದು ಈ ಕಾರ್ಯಕ್ರಮದ ಮುರ್ಖಯ ಉದ್ದೇಶವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯದ ಬಗ್ಗೆ ಅರಿವು ಆಗತ್ಯವಾಗಿದ್ದು ಕಾನೂನು ಪ್ರಾಧಿಕಾರದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಳಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಆರ್.ಬಾಬುಜಾನ್, ಕಾರ್ಯದರ್ಶಿ ಎಂ.ಎನ್.ಜಗದೀಶ್, ಸಮಾಜಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಮಲ್ಲಿಕಾರ್ಜುನ್, ಸರಕಾರಿ ಅಭಿಯೋಜಕರಾದ ಸರಿತಾ, ಸರಕಾರಿ ಪ್ರೌಡಶಾಲೆಯ ಮುಖ್ಯೋಪಧ್ಯಾಯ ಎಚ್.ಬಸವರಾಜಪ್ಪ, ವಕೀಲರಾದ ಎನ್.ಆರ್. ಪಾಟೀಲ್, ಕ್ಷೇತ್ರ ಸಮನ್ವಯಾಧಿಕಾರಿ ಡಾ.ಶಂಕರಪ್ಪ ಇತರರು ಹಾಜರಿದ್ದರು.