ಚನ್ನಗಿರಿ: ಬಗರ್‌ಹುಕುಂ ಸಾಗುವಳಿದಾರರಿಗೆ  ಹಕ್ಕುಪತ್ರಗಳನ್ನು ವಿತರಿಸಲು  ಕೂಡಲೇ  ಚನ್ನಗಿರಿ ತಾಲೂಕಿನಲ್ಲಿ ಭೂ ಮಂಜೂರಾತಿ ಸಮಿತಿಗಳನ್ನು ರಚಿಸುವಂತೆ  ಆಗ್ರಹಿಸಿ ಎ.ಐ.ಕೆ.ಕೆ.ಎಂ.ಎಸ್. ಸಂಘಟನೆಯ ಕಾರ್ಯಕರ್ತರು  ಪಟ್ಟಣದ  ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್  ರುಕ್ಮಿಣಿಬಾಯಿಯವರಿಗೆ  ಮನವಿ ಪತ್ರ  ಸಲ್ಲಿಸಿದರು.

ಎ.ಐ.ಕೆ.ಕೆ.ಎಂ.ಎಸ್. ಸಂಘಟನೆಯ ಅಧ್ಯಕ್ಷ ಮಧು ತೊಗಲೇರಿ ಮಾತನಾಡಿ, ಚನ್ನಗಿರಿ ತಾಲೂಕಿನಲ್ಲಿ  ಸುಮಾರು ೮೦ ವರ್ಷಗಳಿಂದಲೂ ಭೂ ಹೀನ  ಬಡ  ರೈತರು  ಕಂದಾಯ ಮತ್ತು ಅರಣ್ಯ ಪ್ರದೇಶದ ಕೆಲ ಕಡೆಗಳಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ ಸರಕಾರ ಉಳಿಮೆ ಮಾಡಲು ಅವಕಾಶ ಮಾತ್ರ ನೀಡಿದ್ದು ಆಯಾ  ಜಮೀನಿಗೆ  ಸಂಬಂಧಿಸಿದ ಸಾಗುವಳಿ ಪತ್ರಗಳನ್ನು  ಮಾತ್ರ ಇದುವರೆಗೂ ನೀಡಿಲ್ಲ ಎಂದರು.

ಬಗರ್‌ಹುಕುಂನ  ಬಹುತೇಕ ಸಾಗುವಳಿದಾರರು  ಅನಕ್ಷರಸ್ಥರಾಗಿದ್ದು ಕೃಷಿಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ.   ಆದರೆ  ಕೃಷಿ ಚಟುವಟಿಕೆಗಳನ್ನು ನಡೆಸುವಂತಹ  ಸಂದರ್ಭದಲ್ಲಿ  ಕೃಷಿಭೂಮಿಯ  ಮೇಲೆ  ಯಾವುದೇ  ಸಾಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೇ  ಕೈ ಸಾಲದ ಮೊರೆ ಹೋಗಿ  ತೀವ್ರ  ಸಂಕಷ್ಟಕ್ಕೆ  ಒಳಗಾಗಿದ್ದಾರೆ. 

ರಾಜ್ಯದಲ್ಲಿ  ಹೊಸ  ಸರಕಾರ ಆಸ್ತಿತ್ವಕ್ಕೆ  ಬಂದರೂ ಸಹ  ಬಗರ್‌ಹುಕುಂ ಸಾಗುವಳಿದಾರರ ಬಗ್ಗೆ  ಯಾವ ವಿಚಾರವನ್ನು ಮಾಡಿಲ್ಲ. ಆದ್ದರಿಂದ ಕೂಡಲೇ ಭೂ  ಮಂಜೂರಾತಿ ಸಮಿತಿಗಳನ್ನು ರಚಿಸಿ  ತಾಲೂಕಿನ  ಎಲ್ಲಾ ಸಾಗುವಳಿದಾರರಿಗೆ  ಹಕ್ಕುಪತ್ರವನ್ನು ಮಂಜೂರು ಮಾಡಬೇಕು  ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ  ಸಂಘಟನೆಯ  ಜಿಲ್ಲಾ ಉಪಾಧ್ಯಕ್ಷ  ಬಸವರಾಜಪ್ಪ ನೀರ್ಥಡಿ, ಮಂಜುನಾಥ ರೆಡ್ಡಿ, ರಾಜು ಇತರರು ಹಾಜರಿದ್ದರು.

Share.
Leave A Reply

Exit mobile version