ಚನ್ನಗಿರಿ: ಸರಕಾರಿ ಸೇವೆಯನ್ನು ಮಾಡುವಂತಹ ಅವಕಾಶ ದೊರಕುವುದು ಕೆಲವೇ ಜನರಿಗೆ ಅಂತಹ ಸಂದರ್ಭದಲ್ಲಿ ಜನರ ಮನದಲ್ಲಿ ಉಳಿಯುವಂತ ಸೇವೆಯನ್ನು ಮಾಡಿರುವ ತೃಪ್ತಿ ನನಗಿದೆ ಎಂದು ಶಿಶು ಅಭಿವೃದ್ದಿ ಅಧಿಕಾರಿ ಎಸ್.ಎಸ್.ಸದಾನಂದ್ ಹೇಳಿದರು.

ಬುಧವಾರ ಶಿಶು ಅಭಿವೃದ್ದಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ ೮ ವರ್ಷಗಳಿಂದ ಚನ್ನಗಿರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದು ಈಗ ಮುಂಬಡ್ತಿ ಸಿಕ್ಕಿದ್ದು,ದಾವಣಗೆರೆ ಕಚೇರಿಗೆ ವರ್ಗಾವಣೆಯಾಗಿದೆ. ಮಾತ್ರವಲ್ಲದೇ ಇದೇ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದೇನೆ ಎಂದರು.

ಚನ್ನಗಿರಿ ವರ್ಗಾಣೆಯಾಗಿ ಬಂದಾಗ ಸಾಕಷ್ಟು ಒತ್ತಡಗಳಿಂದ ಕೆಲಸ ಮಾಡಿದರೂ ನಂತರ ದಿನಗಳಲ್ಲಿ ಸಿಬ್ಬಂದಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಯಾವುದೇ ಸಮಸ್ಯೆಗಳು ಇಲ್ಲದಂತೆ ಉತ್ತಮವಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇದರ ಜೊತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ತಮವಾದ ಸಹಕಾರ ನೀಡಿದ್ದಾರೆ. ಕರ್ತವ್ಯವನ್ನು ನಿರ್ವಹಿಸುವಂತಹ ಸಂದರ್ಭದಲ್ಲಿ ಒರಟಾಗಿ ವರ್ತಿಸಿದ್ದರೂ ಅದು ಕೆಲಸವನ್ನು ನಿರ್ವಹಿಸಲು ಮಾತ್ರ ಸಾಧ್ಯ ಎಂದರು. ಮುಂಬರುವ ಅಧಿಕಾರಿಗಳಿಗೂ ಇದೇ ರೀತಿಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.

ಅಂಗನವಾಡಿ ಮೇಲ್ವಿಚಾರಕಿ ದ್ರಾಕ್ಷಾಯಿಣಿ ಮಾತನಾಡಿ, ಸದಾನಂದ್‌ರವರು ಕಳೆದ ೮ ವರ್ಷಗಳಿಂದ ಕಚೇರಿಯಲ್ಲಿ ಸಹೋದರನಂತೆ ಕಾರ್ಯನಿರ್ವಹಿಸಿದ್ದು ಸಾಕಷ್ಟು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ ಮೂಲಕ ಸಿಬ್ಬಂದಿಗಳಿಗೆ ಕೆಲಸವನ್ನು ತಿದ್ದಿ ಕಲಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ಶಿವಕುಮಾರ್, ಶಿಶು ಅಭಿವೃದ್ದಿ ಮೇಲ್ವಿಚಾರಕರರು ಹಾಜರಿದ್ದರು.

Share.
Leave A Reply

Exit mobile version