ದಾವಣಗೆರೆ;ದೇಶದಲ್ಲಿ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದು,ಇದರ ಉಪಯೋಗವನ್ನು ಸಹಕಾರ ಸಂಘಗಳು ಪಡೆದುಕೊಳ್ಳಬೇಕಿದೆ ಎಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಡಾ.ಜೆ.ಆರ್.ಷಣ್ಮುಖಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿಂದು ಆರಂಭಗೊಂಡ ಅಖಿಲ ಭಾರತ 71 ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ ಈ ವರ್ಷದ ಘೋಷ ವಾಕ್ಯವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳು ಪಾತ್ರ ದೊಡ್ಡದಾಗಿದೆ ಎಂದರು.
ಜವಾಹರಲಾಲ್ ನೆಹರೂ ಕೂಡ ತಮ್ಮ ಜನ್ಮ ದಿನವನ್ನು ಸಹಕಾರ ಸಪ್ತಾಹವನ್ನಾಗಿ ಆಚರಿಸುವ ಪರಿಪಾಠ ಜಾರಿ ಮಾಡಿದರು. ಪ್ರಸ್ತುತ ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ಆರಂಭಿಸಿ ಅದಕ್ಕೆ ಒಬ್ಬ ಸಚಿವರನ್ನು ನೇಮಕಮಾಡಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದರ ಉಪಯೋಗವನ್ನು ಸಹಕಾರ ಸಂಘಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಆಡಳಿತ ವಿಕೇಂದ್ರೀಕರಣ ದೃಷ್ಟಿಯಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಸಹಕಾರ ಸಂಘ ಆರಂಭಕ್ಕೆ ಆದೇಶ ಮಾಡಿದೆ. ಇದರ ಉಪಯೋಗವನ್ನು ಯಾರೆ ಪಡೆದುಕೊಂಡರೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಸಂಘಗಳ ಇಲಾಖೆ ಉಪನಿರ್ಧೆಶಕ ಮಹೇಶ್ವರಪ್ಪ ಅವರು, ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ ಕುರಿತು ಉಪನ್ಯಾಸ ನೀಡಿ, ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವುದು ಕೇಂದ್ರ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದರು.
ಕೇಂದ್ರ ಸರ್ಕಾರ ಸಹಕಾರ ಚಳವಳಿಯನ್ನು ಪರಿಣಾಮಕಾರಿಯಾಗಿ ಬಲಪಡಿಸುವ ಉದ್ದೇಶದಿಂದ 2021 ರ ಜುಲೈ ಮಾಹೆಯಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ರಚನೆ ಮಾಡಿತು. ಸಹಕಾರ ಸಚಿವಾಲಯವು ದೇಶಾದ್ಯಂತ ಸಹಕಾರ ಸಂಸ್ಥೆಗಳನ್ನು ಬೆಂಬಲಿಸಲು, ನಿಯಂತ್ರಿಸಲು ಮತ್ತು ಉತ್ತೇಜಿಸಲು ಏಕೀಕೃತ ಚೌಕಟ್ಟನ್ನು ಒದಗಿಸಿದೆ. ಈಗಾಗಲೇ ಸಚಿವಾಲಯವು 54 ಉಪಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ಸಹಕಾರ ಕ್ಷೇತ್ರಕ್ಕೆ ಅನೇಕ ರೀತಿಯ ಸವಲತ್ತುಗಳು ಮತ್ತು ರಿಯಾಯಿತಿಗಳನ್ನು ಒದಗಿಸಿದೆ ಎಂದರು.
ಸರ್ಕಾರದ ಆರ್ಥಿಕ ನೀತಿಗಳ ಯಶಸ್ಸಿಗೆ, ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಸಾಧಿಸಲು ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕಂಕಣಬದ್ಧವಾಗಿದೆ.ಇದಕ್ಕಾಗಿ ಸಹಕಾರ ಸಂಘಗಳ ಪಾತ್ರ ದೊಡ್ಡದಿದೆ ಎಂದರು.