ಭದ್ರಾವತಿ: ದಲಿತ ಸಂಘಟನೆ ಆರಂಭ ಗೊಳ್ಳುವುದಕ್ಕೂ ಮುಂಚಿನ ದಿನಗಳಿಂದಲೂ ದಲಿತರ, ಶೋಷಿತರ ಏಳಿಗೆಗಾಗಿ ಶ್ರಮಿಸಿದ ಪ್ರೊ.ಬಿ.ಕೃಷ್ಣಪ್ಪ ಧೀಮಂತ ವ್ಯಕ್ತಿ ಎಂದು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಓರ್ವರಾದ ಹಿರಿಯ ಮುಖಂಡ ಜಿ.ಮೂರ್ತಿ ಹೇಳಿದರು.
ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 50ನೇ ವರ್ಷದ ಸಂಭ್ರಮಾಚರಣೆಗೆ ಚಾಲನೆ ನೀಡಿ ಮಾತನಾಡಿ, ಇಂದಿಗೂ ಅವರ ಹೋರಾಟದ ಹಲವು ನೆನಪುಗಳನ್ನು ಭದ್ರಾವತಿ ನಗರದಲ್ಲಿ ಕಾಣಬಹುದಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಆಶಯ ಹಾಗು ಸಂವಿಧಾನದ ಆಧಾರದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಲಾಗಿದೆ. ಇಂಥದೊಂದು ಸಂಘಟನೆಯ 50 ವರ್ಷ ಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅನೇಕ ಚಳವಳಿಗಳು ಆರಂಭಗೊಂಡು ಕೆಲಕಾಲದಲ್ಲಿಯೇ ನಶಿಸಿವೆ. ಆದರೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ನಡುವೆ ಹುಟ್ಟಿದ ಚಳವಳಿಯಾಗಿದ್ದರಿಂದ ಇಂದಿಗೂ ಜೀವಂತವಾಗಿದೆ. ಸಾಮಾಜಿಕ ಮಾಧ್ಯಮ ಗಳಿಲ್ಲದ ಕಾಲದಲ್ಲಿಯೂ ಸದೃಢವಾಗಿ ಬಲಗೊಂಡ ಸಂಘಟನೆ ದಲಿತ ಸಂಘರ್ಷ ಸಮಿತಿ ಎಂದರು.
ಸಮಿತಿಯ ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ದಲಿತ ಸಂಘರ್ಷ ಸಮಿತಿ ಅನೇಕ ಕಾಯ್ದೆಗಳು ರೂಪಿಸಲು ಕಾರಣ ವಾಗಿದೆ. ಅನೇಕ ಬಡವರ ಜಮೀನುಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪ್ರಸ್ತುತ ದಲಿತರು ಅನೇಕ ಸೌಲಭ್ಯಗಳನ್ನು ಪಡೆಯುವಲ್ಲಿ ಕದಸಂಸ ಪಾತ್ರ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ರಂಗಪ್ಪ ವೃತ್ತದಿಂದ ನಗರದ ಮಾಧವಚಾರ್ ವೃತ್ತ, ಹಾಲಪ್ಪವೃತ್ತದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು. ಅಂಬೇಡ್ಕರ್ ಸರ್ಕಲ್ ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಹಿರಿಯ ಮುಖಂಡರಾದ ಜಿ.ಮೂರ್ತಿ ಮಾಲಾರ್ಪಣೆ ಮಾಡಿದರು. ನಂತರ ಡಾ.ಬಿ. ಆರ್. ಅಂಬೇಡ್ಕರ್ ಹಾಗು ಪ್ರೊ.ಬಿ.ಕೃಷ್ಣಪ್ಪ ಭಾವಚಿತ್ರಕ್ಕೆ ಸಮಿತಿಯ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಸದಸ್ಯ ಚೆನ್ನಪ್ಪ, ಮುಖಂಡರುಗಳಾದ ಈಶ್ವರಪ್ಪ, ಪ್ರಸನ್ನ, ರಂಗನಾಥ್, ಕಾಣಿಕ್ ರಾಜ್, ಉಮಾ, ತಿಪ್ಪೇಸ್ವಾಮಿ ಸೇರಿದಂತೆ ಅನೇಕರಿದ್ದರು.