ದಾವಣಗೆರೆ : ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಸೋತಿದ್ದು ಒಬ್ರಲ್ಲ., ಇಬ್ರಲ್ಲ. ಒಟ್ಟು 14 ಪ್ರಭಾವಿ ಸಚಿವರು. 40% ಕಮಿಷನ್ ಕಳಂಕ, ಕೋವಿಡ್ ಹಗರಣದ ಆರೋಪ, 545 ಪಿಎಸ್​ಐ ನೇಮಕಾತಿ ಅಕ್ರಮ, ವ್ಯಾಪಕ ಭ್ರಷ್ಟಾಚಾರದ ಆರೋಪ ಹೊತ್ತ ಬಿಜೆಪಿಯನ್ನ ರಾಜ್ಯದ ಜನ ಮಕಾಡೆ ಮಲಗಿಸಿದ್ರು. ಕಾಂಗ್ರೆಸ್‌ ಅಬ್ಬರಕ್ಕೆ ಬಿಜೆಪಿ ಕೊಚ್ಚಿ ಹೋಗಿತ್ತು.. 

ಸೋತವರಲ್ಲಿ ವಿ. ಸೋಮಣ್ಣ, ಆರ್, ಅಶೋಕ್, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಡಾ. ಕೆ ಸುಧಾಕರ್, ಮಾಧುಸ್ವಾಮಿ, ಬಿಸಿ ಪಾಟೀಲ್, ಶ್ರೀರಾಮುಲು, ಎಂಟಿಬಿ ನಾಗರಾಜ್, ಆನಂದ್ ಸಿಂಗ್ ಹೀಗೆ ಅಂದಿನ ಒಟ್ಟು 14 ಪ್ರಭಾವಿ ಬಿಜೆಪಿ ಸಚಿವರು ಸೋತು ಸುಣ್ಣವಾಗಿದ್ರು. 

ಆದ್ರೀಗ ಇವರಲ್ಲಿ ಮತ್ತೆ ಐದು ಮಂದಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಹೀಗೆ ವಿಧಾನಸಭಾ ಚುನಾವಣೆಯಲ್ಲಿ ಸೋತ್ರೂ ಮತ್ತೆ ಲೋಕಸಭಾ ಚುನಾವಣಾ ಟಿಕೆಟ್ ಗಿಟ್ಟಿಸಿಕೊಂಡಿರೋ ಪ್ರಭಾವಿ ಬಿಜೆಪಿ ನಾಯಕರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೋಲಿನ ಭೀತಿ ಕಾಡ್ತಾಯಿದೆ. ಹಾಗಾದ್ರೆ ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಸೋತ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದೆ.? ಅಲ್ಲಿ ಬಿಜೆಪಿಗೆ ಮತ್ತೆ ಸೋಲಿನ ಭೀತಿ ಸೃಷ್ಟಿಯಾಗಿರೋದ್ಯಾಕೆ ಗೊತ್ತಾ.? 

ನಂಬರ್. 01 : ಡಾ. ಕೆ. ಸುಧಾಕರ್, ಚಿಕ್ಕಬಳ್ಳಾಪುರ

ಡಾ. ಕೆ. ಸುಧಾಕರ್.​ ಕಳೆದ ಬಿಜೆಪಿ ಸರ್ಕಾರದಲ್ಲಿ ಇವರು ಆರೋಗ್ಯ ಸಚಿವರಾಗಿದ್ರು. ಅಷ್ಟೇ ಅಲ್ಲ, ಇವರ ಮೇಲೆ ಸಾವಿರಾರು ಕೋಟಿ ಕೋವಿಡ್ ಅವ್ಯವಹಾರದ ಆರೋಪ ಕೇಳಿಬಂದಿತ್ತು. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ 2 ಸಲ, ಬಿಜೆಪಿಯಿಂದ ಒಂದು ಸಲ ಗೆದ್ದಿದ್ದ ಸುಧಾಕರ್ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಓರ್ವ ಟ್ಯೂಷನ್ ಮಾಸ್ಟರ್ ಆಗಿದ್ದ ಪ್ರದೀಪ್ ಈಶ್ವರ್ ಅನ್ನೋ ಸಾಮಾನ್ಯ ಹುಡುಗನ ವಿರುದ್ಧ ಹೀನಾಯವಾಗಿ ಸೋತು ಹೋಗಿದ್ರು.

ಹೀಗಿದ್ರೂ ಇದೀಗ ಮತ್ತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್​​ ಗಿಟ್ಟಿಸಿಕೊಂಡಿದ್ದಾರೆ.  ಶಾಕಿಂಗ್ ನ್ಯೂಸ್ ಏನಂದ್ರೆ ಡಾ. ಕೆ. ಸುಧಾಕರ್ ಅವರಿಗೆ ತಮ್ಮ ಜಿಲ್ಲಾ ಬಿಜೆಪಿಯಲ್ಲೇ ಭಾರೀ ವಿರೋಧ ಕೇಳಿಬರ್ತಾಯಿದೆ. ಇವತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸುಧಾಕರ್​ ಗೆಲ್ಲಲ್ಲ ಅಂತೇಳಿ ನಡೆಸಿರೋ ಪ್ರತಿಭಟನೆಯ ವಿಡಿಯೋ ಫುಲ್ ವೈರಲ್ ಆಗ್ತಾಯಿದೆ. 

ಮತ್ತೊಂದು ಕಡೆ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಮತ್ತು ಯುವ ಮುಖಂಡ ಪ್ರದೀಪ್ ಈಶ್ವರ್ ಈ ಸಲ ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್ ಗೆಲ್ಲೋದಕ್ಕೆ ಬಿಡೋದೇ ಇಲ್ಲ ಅಂತೇಳಿ ಪಣತೊಟ್ಟಿದ್ದಾರೆ. ಹೀಗಾಗಿ ಡಾ. ಕೆ. ಸುಧಾಕರ್ ಗೆಲುವು ಅಂದುಕೊಂಡಷ್ಟು ಸುಲಭ ಇಲ್ಲ. 

ನಂಬರ್. 02, ಜಗದೀಶ್ ಶೆಟ್ಟರ್, ಬೆಳಗಾವಿ

ಕಳೆದ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ರು ಮಾಜಿ ಸಿಎಂ ಜಗದೀಶ್ ಶೆಟ್ಟರ್. ಅಷ್ಟೇ ಅಲ್ಲ, ಕಾಂಗ್ರೆಸ್​ನಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿದಿದ್ರು. ಈ ವೇಳೆ ಬಿಜೆಪಿಯ ಮಹೇಶ್ ಟೆಂಗಿನಕಾಯಿ ಅವರ ವಿರುದ್ಧ ಸರಿ ಸುಮಾರು 34,053 ಮತಗಳ ಅಂತರದಿಂದ ಸೋತಿದ್ರು. ಆದ್ರೆ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಶೆಟ್ಟರ್ ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದು, ಬೆಳಗಾವಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆದ್ರೆ ಅಸಲಿ ವಿಷ್ಯ ಏನಂದ್ರೆ ಶೆಟ್ರು ಬಯಸಿದ್ದು ಹಾವೇರಿ ಇಲ್ಲ, ಧಾರವಾಡದ ಟಿಕೆಟ್.

ಆದ್ರೆ ಶೆಟ್ರೆಗೆ ಕೊಟ್ಟಿರೋದು ಬೆಳಗಾವಿಯ ಟಿಕೆಟ್. ಅಂದ್ರೆ ಶೆಟ್ರು ನಂಬಿಕೆಗೆ ಅರ್ಹರಲ್ಲ ಅಂತ ಭಾವಿಸಿರೋ ಬಿಜೆಪಿ ನಾಯಕರು ಶೆಟ್ರಿಗೆ ಬೆಳಗಾವಿ ಟಿಕೆಟ್ ಕೊಟ್ಟು ಹರಕೆಯ ಕುರಿ ಮಾಡಿದ್ದಾರೆ ಅನ್ನೋ ಮಾತುಗಳು ಹರಿದಾಡ್ತಾಯಿವೆ. ಮತ್ತೊಂದು ಕಡೆ ಶೆಟ್ಟರ್ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ, ಪೋಸ್ಟರ್ ಅಭಿಯಾನ ಶುರುವಾಗಿದೆ.

ಗೋ ಬ್ಯಾಕ್‌  ಎನ್ನುವ ಅಭಿಯಾನ ಜೋರಾಗಿದೆ. ಬೆಳಗಾವಿ ನಗರದ ವಿವಿಧೆಡೆ ಇತ್ತೀಚೆಗೆ ಗೋಬ್ಯಾಕ್ ಶೆಟ್ಟರ್ ಅನ್ನೋ ಮತ್ತಷ್ಟು ಬ್ಯಾನರ್​​ಗಳು ಕಾಣಿಸಿಕೊಂಡಿವೆ. `ಬರ್ರಿ ಶೆಟ್ಟರ್… ಉಂಡು ಹೋಗರಿ, ಬೆಳಗಾವಿ ನಿಮ್ಮಂತವರಿಗೆ ಬಿಟ್ಟಿ ಬಿದ್ದೈತಿ’ ಎಂದು ಬರೆಯಲಾಗಿರುವ ಬ್ಯಾನರ್​​ಗಳು ಎಲ್ಲೆಡೆ ರಾರಾಜಿಸುತ್ತಿವೆ. ಕೆಳಗಡೆ  ಗೋ ಬ್ಯಾಕ್‌ ಎಂದೂ ಬರೆಯಲಾಗಿದೆ. ಅಷ್ಠೇ ಅಲ್ಲ, ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅಖಾಡದಲ್ಲಿದ್ದು ಸ್ಥಳೀಯ, ಮತ್ತು ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್​​ಗೆ ಬೆಳಗಾವಿಯ ಪಂಚಮಸಾಲಿ ಮತ್ತು ಮರಾಠ ಮತಗಳು ಸಾಲಿಡ್ಡಾಗಿ ಬೀಳೋ ಸಾಧ್ಯತೆ ಇದೆ.  

ನಂಬರ್. 03, ಶ್ರೀರಾಮುಲು, ಬಳ್ಳಾರಿ

ಶ್ರೀರಾಮುಲು.. ಬಿಜೆಪಿಯಲ್ಲಿ ಪ್ರಭಾವಿ ನಾಯಕರಾದ್ರೂ, ಇವರು ಬೆಳೆಯೋದು ಖುದ್ದು ಬಿಜೆಪಿ ನಾಯಕರಿಗೆ ಇಷ್ಟ ಇಲ್ಲ.. ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅವರನ್ನ 2018ರಲ್ಲಿ ಡಿಸಿಎಂ ಮಾಡ್ತೀವಿ ಅಂತೇಳಿ ಕಾಗೇ ಹಾರಿಸಿದ್ರು. ಇಷ್ಟೇ ಆಗಿದ್ರೆ ಪರ್ವಾಗಿರ್ಲಿಲ್ಲ.. 2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ಮೇಲೆ ರಾಮುಲು ಕೊಟ್ಟಿದ್ದ ಆರೋಗ್ಯ ಖಾತೆಯನ್ನ ಕಿತ್ಕೊಂಡು ಬೇರೆ ಖಾತೆ ಕೊಟ್ಟಿದ್ರು. ಇದು ಎಷ್ಟು ದೊಡ್ಡ ಅವಮಾನ..

ಇನ್ನ 2018 ಬಾದಾಮಿ ಮತ್ತು ಮೊಳಕಾಲ್ಮೂರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಿಂತು ಮೊಳಕಾಲ್ಮೂರಲ್ಲಿ ಗೆದ್ದಿದ್ದ ಶ್ರೀರಾಮುಲು, ಬಾದಾಮಿಯಲ್ಲೂ ಸಿದ್ದರಾಮಯ್ಯನವರಿಗೆ ಟಫ್ ಫೈಟ್ ಕೊಟ್ಟಿದ್ರು. ಆದ್ರೆ 2023ರಲ್ಲಿ ಬಾದಾಮಿ ಮತ್ತು ಮೊಳಕಾಲ್ಮೂರು ಎರಡೂ ಬಿಟ್ಟು ಬಳ್ಳಾರಿ ಗ್ರಾಮೀಣದಲ್ಲಿ ನಿಂತು ಕಾಂಗ್ರೆಸ್ ಅಭ್ಯರ್ಥಿ ಬಿ ನಾಗೇಂದ್ರ ಅವರ ವಿರುದ್ಧ ಹೀನಾಯವಾಗಿ ಸೋತಿದ್ರು. ಅಲ್ಲಿಗೆ ಶ್ರೀರಾಮುಲು ಅವರಿಗೆ ವರ್ಚಸ್ಸು ಕುಂದಿದೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದ್ರೀಗ ವಿಧಾನಸಭಾ ಚುನಾವಣೆಯಲ್ಲಿ ಸೋತ ಶ್ರೀರಾಮುಲು ಅವರಿಗೆ ಬಿಜೆಪಿ ಹೈಕಮಾಂಡ್ ಮತ್ತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಟ್ಟಿದೆ.

ಈ ಸಲ ಜನಾರ್ದನರೆಡ್ಡಿ ಬಿಜೆಪಿಗೆ ವಾಪಸ್ ಆಗಿರೋದು ಶ್ರೀರಾಮುಲುಗೆ ಸ್ವಲ್ಪ ಮಟ್ಟಿಗೆ ಪ್ಲಸ್ ಆಗಬಹುದು. ಆದ್ರೆ ಬಳ್ಳಾರಿಯಲ್ಲಿ ಕಾಂಗ್ರೆಸ್  ಇ.ತುಕಾರಾಂ ಅವರನ್ನು ಕಣಕ್ಕಿಳಿಸಿದೆ.

ನಿಮಗೆ ಗೊತ್ತಿರ್ಲಿ, 2023ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ 35,390 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ರು. ಜೊತೆಗೆ ಬಳ್ಳಾರಿಯಲ್ಲಿ ಉತ್ತಮ ಹೆಸರನ್ನ ಪಡ್ಕೊಂಡಿದ್ದಾರೆ. ಈ ಸಲ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಬೆನ್ನಿಗೆ ನಿಂತಿದ್ರೆ, ಬಿಜೆಪಿ ಬೆಲೆ ಏರಿಕೆ, ಆಡಳಿತ ವಿರೋಧಿ ನೀತಿ ಬಿಜೆಪಿಗೆ ಮುಳುವಾಗೋ ಸಾಧ್ಯತೆ ಇದೆ.

ನಂಬರ್. 04, ವಿ. ಸೋಮಣ್ಣ, ತುಮಕೂರು

2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ವಿ ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದರು. ಅದಾದ ಬಳಿಕ ಬಿಜೆಪಿ ನಾಯಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆಯಲು ಬಹಳ ಪ್ರಯತ್ನ ನಡೆಸಿದ್ದರು. ಸ್ಥಳೀಯರ ವಿರೋಧದ ನಡುವೆಯೂ ಈಗ ವಿ ಸೋಮಣ್ಣಗೆ ಬಿಜೆಪಿ ನಾಯಕರು ಮಣೆ ಹಾಕಿದ್ದಾರೆ. ಇಲ್ಲಿ ಸೋಮಣ್ಣ ಅವರಿಗೆ ಅತಿದೊಡ್ಡ ಡ್ರಾಬ್ಯಾಕ್ ಅಂದ್ರೆ ಅದು ಮಾಜಿ ಸಚಿವ ಮಾಧುಸ್ವಾಮಿ ಅಂಡ್ ಟೀಂ.. ತುಮಕೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಧುಸ್ವಾಮಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡಿದ್ದಾರೆ. ಜೊತೆಗೆ ಮಾಧುಸ್ವಾಮಿ ಬಹಿರಂಗವಾಗೇ ನಾನು ಸೋಮಣ್ಣ ಪರ ಪ್ರಚಾರ ಮಾಡಲ್ಲ ಅಂತೇಳಿದ್ದಾರೆ. ಜೊತೆಗೆ ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾದ್ರೂ ಇವರಿಗೆ ಈಗಾಗ್ಲೇ ತುಮಕೂರು ಬಿಜೆಪಿಯಲ್ಲೇ ಗೋಬ್ಯಾಕ್ ಸೋಮಣ್ಣ ಅನ್ನೋ ಘೋಷಣೆಗಳು ಕೇಳಿಬರ್ತಾಯಿವೆ. ಇನ್ನ ವಿ ಸೋಮಣ್ಣ ಪ್ರಭಾವಿ ಲಿಂಗಾಯತ ಮುಖಂಡರಾಗಿದ್ದು, ಇವರು ಪಕ್ಷದಲ್ಲಿ ಬೆಳೆದ್ರೆ ಬಿವೈ ವಿಜಯೇಂದ್ರ ಭವಿಷ್ಯಕ್ಕೆ ಮುಳ್ಳಾಗ್ತಾರೆ ಅನ್ನೋ ಮಾತುಗಳೂ ಇವೆ.  ಹೀಗಾಗಿ ಸೋಮಣ್ಣ ಸೋಲಿಗೆ ಸ್ವಪಕ್ಷದ ಕೆಲ ನಾಯಕರೇ ಪಿತೂರಿ ನಡೆಸೋ ಸಾಧ್ಯತೆ ಇದೆ.. ಅಂದ್ರೆ ಸೋಮಣ್ಣ ಈ ಸಲ ಸೋತ್ರೆ ಇವರ ರಾಜಕೀಯ ಭವಿಷ್ಯವೇ ಅಂತ್ಯವಾಗುತ್ತೆ ಅನ್ನೋ ಮಾತುಗಳೂ ಇವೆ. 2019ರ ಲೋಕಸಭಾ ಚುನಾವಣೆಯಲ್ಲಿ ಹೊರಗಿನ ಹೆಚ್​ಡಿ ದೇವೇಗೌಡ್ರನ್ನೇ ತುಮಕೂರಿನ ಮತದಾರರು ಸೋಲಿಸಿದ್ರು. ಈಗ ಹೊರಗಿನ ವಿ. ಸೋಮಣ್ಣ ಅವರನ್ನ ಸೋಲಿಸದೇ ಇರ್ತಾರಾ..? ಇಲ್ಲಿ ಕಾಂಗ್ರೆಸ್ ಮುದ್ದಹನುಮೇಗೌಡ್ರಿಗೆ ಟಿಕೆಟ್ ಕೊಟ್ಟಿದ್ದು, ಗೌಡ ವರ್ಸಸ್ ಲಿಂಗಾಯತ ಅನ್ನೋ ವಾರ್ ಶುರುವಾಗಿದೆ.

ಜೊತೆಗೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜಾತಿ ಅಸ್ತ್ರಕ್ಕಿಂತ ಪ್ರಾದೇಶಿಕತೆಯ ಅಸ್ತ್ರವೇ ದೊಡ್ಡದು.. ಇನ್ನ ಮುದ್ದಹನುಮೇಗೌಡ್ರ ಗೆಲುವಿಗೆ ಸಚಿವರಾದ ಡಾ. ಪರಮೇಶ್ವರ್, ಕೆ.ಎನ್ ರಾಜಣ್ಣ ಪಣತೊಟ್ಟಿದ್ದಾರೆ.. 

ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ

63 ವರ್ಷದ ಕಾಗೇರಿ ABVP ಪೂರ್ಣಾವಧಿ ಕಾರ್ಯಕರ್ತರಾಗಿ ನಂತರ ಬಿಜೆಪಿಗೆ ಬಂದವರು. 1994ರಲ್ಲಿ ಮೊದಲ ಬಾರಿಗೆ ಅಂಕೋಲಾ ಕ್ಷೇತ್ರದಿಂದ ಆಯ್ಕೆಯಾದರು. B.com ಹಾಗೂ LLB ವ್ಯಾಸಂಗ ಮಾಡಿದ್ದು, ಅಂಕೋಲ ಮತ್ತು ಶಿರಸಿ ಕ್ಷೇತ್ರದಿಂದ ತಲಾ ಮೂರು ಸಲ ಆಯ್ಕೆಯಾಗಿದ್ದಾರೆ. ಶಿಕ್ಷಣ ಸಚಿವರಾಗಿ, ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಸಂವಿಧಾನದ ಬಗ್ಗೆ ದೇಶದಲ್ಲಿ ಮೊದಲ ಬಾರಿಗೆ ಅಧಿವೇಶನದಲ್ಲಿ ಚರ್ಚೆ ನಡೆಸಿದ ಸ್ಪೀಕರ್ ಎಂಬ ಹೆಸರು ಪಡೆದಿದ್ದಾರೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಶಿರಸಿಯಲ್ಲಿ ಸೋಲು ಅನುಭವಿಸಿದ್ದರು.

ಈಗ ಹಾಲಿ ಸಂಸದ ಅನಂತ ಕುಮಾರ ಹೆಗಡೆ ಬದಲಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆದುಕೊಂಡಿದ್ದಾರೆ. ಇಲ್ಲಿ ಕಾಗೇರಿಗೆ ಸ್ವಪಕ್ಷದವರಿಂದ್ಲೇ ಸೋಲಿನ ಭೀತಿ ಇದೆ.. ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್​ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನ ಕಣಕ್ಕಿಳಿಸಿದೆ.. ಹೀಗಾಗಿ ಈ ಇಬ್ಬರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನ್ನು ಮೀರಿ ಬಹಳಷ್ಟು ವಿಸ್ತಾರವಾದ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರ ಮನ್ನಣೆಗಳಿಸಲು ಇದೀಗ ಪ್ರಯತ್ನ ಪ್ರಾರಂಭಿಸಿದ್ದಾರೆ. ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆಯೇ, ಕ್ಷೇತ್ರದ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳು ಹಾಗೂ ಬೆಳಗಾವಿ ಜಿಲ್ಲೆಯ ಎರಡು ತಾಲೂಕುಗಳ ಮತದಾರರ ಗಮನ ಸೆಳೆದು ಗೆಲ್ಲಬೇಕಾಗಿದೆ.ಅದೇನೇ ಇದ್ರೂ ರಾಜ್ಯ ಬಿಜೆಪಿ ಸೋತ ಐವರು ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದು ಐದಕ್ಕೆ ಐದೂ ಕ್ಷೇತ್ರಗಳಲ್ಲೂ ಈ ಅಭ್ಯರ್ಥಿಗಳಿಗೆ ಗೆಲ್ತಾರ, ಸೋಲ್ತಾರ ಎಂದು ಕಾದು ನೋಡಬೇಕಿದೆ.

Share.
Leave A Reply

Exit mobile version