ಬೆಂಗಳೂರುನ ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೇಗದ ನಿಯಂತ್ರಣಕ್ಕೆ ಅಭಿಯಾನಕ್ಕೆ ಎಡಿಜಿಪಿ.ಶರತ್ಶ್ಚಂದ್ರ ಚಾಲನೆ.
ಬೆಂಗಳೂರು
ಅಪಘಾತದಲ್ಲಿ ಅತಿ ಹೆಚ್ಚು ಮೃತಪಟ್ಟವರು ಬೈಕ್ ಸವಾರರು ಎಂದು ನೇಮಕಾತಿ ಮತ್ತು ಕಮಿಷನರ್ ಫಾರ್ ಟ್ರಾಫಿಕ್ ಮತ್ತು ರೋಡ್ ಸೇಫ್ಟಿ ಎಡಿಜಿಪಿ ಶರತ್ಶ್ಚಂದ್ರ ಹೇಳಿದರು.
ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೇಗದ ನಿಯಂತ್ರಣಕ್ಕೆ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. 2020ಯಿಂದ ಈ ನಾಲ್ಕು ವರ್ಷದಲ್ಲಿ ಅಪಘಾತಗಳು, ಸತ್ತವರ ಸಂಖ್ಯೆ ದುಪ್ಪಟ್ಟಾಗಿದೆ. ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರಲ್ಲಿ ಹೆಚ್ಚು ಮಂದಿ ಬೈಕ್ ಸವಾರರಾಗಿದ್ದಾರೆ. ನಾವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ, ವಾಹನ ಮಾಲೀಕರಿಗೆ ಅರಿವು ಮೂಡಬೇಕು ಎಂದರು.
ಬೆಂಗಳೂರಿನಲ್ಲಿ ಆಟೊಮ್ಯಾಟಿಕ್ ಕ್ಯಾಮೆರಾ ಜೋಡಿಸಿದ್ದೇವೆ. ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ(ಐಟಿಎAಎಸ್) ಜಾರಿಗೆ ತಂದಿದ್ದೇವೆ. ಆದರೂ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣ, ದ್ವಿಚಕ್ರ ವಾಹನ ಸವಾರರಲ್ಲಿ ಕೆಲವರು ಹೆಲ್ಮಟ್ ಧರಿಸಿರುವುದಿಲ್ಲ. ಹೆಲ್ಮಟ್ ಧರಿಸಿದರೂ, ಬೆಲ್ಟ್ಲಾಕ್ ಮಾಡಿರುವುದಿಲ್ಲ. ನಾವು ಎಷ್ಟೇ ಆಂದೋಲನ ಮಾಡಿ ಅರಿವು ಮೂಡಿಸಿದರೂ, ಜನರಲ್ಲಿ ಜಾಗೃತಿ ಮೂಡದ ಹೊರತು, ಅಪಘಾತಗಳನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.
2023ರಲ್ಲಿ ರಸ್ತೆ ಅಪಘಾತದಲ್ಲಿ ಸುಮಾರು 12 ಸಾವಿರ ಮಂದಿ ಸತ್ತಿದ್ದಾರೆ. ಅದರಲ್ಲಿ ಶೇ 47ರಷ್ಟು ಮಂದಿ ಬೈಕ್ ಸವಾರರಾದರೆ, ಶೇ 19.63ರಷ್ಟು ಪಾದಚಾರಿಗಳಾಗಿದ್ದಾರೆ. ಬಹುತೇಕ ಅಪಘಾತಗಳು ಸಂಭವಿಸಿರುವುದು ಅತಿಯಾದ ವೇಗವಾಗಿ ವಾಹನ ಚಾಲನೆ ಮಾಡಿದ್ದರಿಂದ. ನಿಗದಿತ ವೇಗದಲ್ಲಿದ್ದರೆ, ಅಪಘಾತಗಳನ್ನು ನಿಯಂತ್ರಿಸಬಹುದು ಎಂದರು.
ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಮಾತನಾಡಿ, 2023ರಲ್ಲಿ 11600 ಮಂದಿ ವಾಹನ ಅಪಘಾತದಿಂದ ಸತ್ತಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚುಮಂದಿ ಮೃತಪಟ್ಟಿದ್ದಾರೆ. ಅತಿವೇಗವಾಗಿ ವಾಹನ ಚಲಾಯಿಸಿರುವುದು ಹೆಚ್ಚಿನ ಅಪಘಾತಗಳಿಗೆ ಮೂಲ ಕಾರಣವಾಗಿದೆ. ಅತಿ ವೇಗವಾಗಿ ವಾಹನ ಚಾಲನೆ ಮಾಡುವುದನ್ನು ಕಡಿಮೆ ಮಾಡಿ, ನಿಗದಿತ ವೇಗದಲ್ಲಿ ವಾಹನ ಓಡಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು. ಜೀವ ಕಳೆದುಕೊಳ್ಳುವುದು, ಅಂಗವಿಕಲರಾಗುವುದು, ಕುಟುಂಬ ಸಂಕಷ್ಟಕ್ಕೀಡಾಗುವುದು ಇಂಥವನ್ನೆಲ್ಲ ನೆನಪಿಟ್ಟುಕೊಂಡು ಜವಾಬ್ದಾರಿಯಿಂದ ವಾಹನ ಚಾಲನೆ ಮಾಡಬೇಕು.
ಬೆಂಗಳೂರಿನಲ್ಲಿ ಸಮೂಹ ಸಾರಿಗೆ ಪ್ರಯಾಣ ಉತ್ತೇಜಿಸುವುದಕ್ಕಾಗಿ ಬಿಎಂಟಿಸಿಯಿAದ ‘ಫೀಡ್ ಸೇವೆ’ಯನ್ನು 6500 ರಿಂದ 10 ಸಾವಿರದವರೆಗೆ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕಾಗಿ ಹೆಚ್ಚು ಬಸ್ಗಳನ್ನು ಖರೀದಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ, ಸಂಚಾರ ದಟ್ಟಣೆ ನಿಯಂತ್ರಣವಾಗುತ್ತದೆ. ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇದೆ. ಅಲ್ಲಿ ಜನರಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚು ಅರಿವಿದೆ. ರಸ್ತೆ ಎಂಜಿನಿಯರಿAಗ್ ಕೂಡ ಚೆನ್ನಾಗಿದೆ. ನಮ್ಮ ದೇಶದಲ್ಲಿ ಇನ್ನೂ ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಸರಿಯಾದ ಅರಿವಿಲ್ಲ. ಅತಿವೇಗವಾಗಿ ವಾಹನ ಚಲಾಯಿಸುತ್ತಾರೆ. ಒಂದು ದ್ವಿಚಕ್ರವಾಹನದಲ್ಲಿ ಮೂವರು ಕೂತು ಪ್ರಯಾಣಿಸುತ್ತಾರೆ.
ನಿಗದಿತ ವೇಗವನ್ನು ದಾಟಿ, ಓವರ್ ಸ್ಪೀಡ್ನಲ್ಲಿ ಹೋಗುತ್ತಾರೆ. ಬೆಂಗಳೂರಿನಲ್ಲಿ ಒಂದು ಕೋಟಿ ವಾಹನಗಳಿವೆ. ಅವುಗಳನ್ನು ನಿಯಂತ್ರಿಸುವುದು ಕಷ್ಟ. ಚಾಲನೆ ಮಾಡುವವರೇ ಎಚ್ಚೆತ್ತುಕೊಂಡು ವಾಹನ ಚಲಾಯಿಸಬೇಕು. ಸಾಧ್ಯವಾದಷ್ಟು ನಿಯಂತ್ರಣ ಮಾಡಬೇಕು ಎಂದರು.
ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ ಎಂ ಯೋಗೀಶ್, ಹೆಚ್ಚುವರಿ ಆಯುಕ್ತರು ಮತ್ತು ಕೆಎಸ್ಆರ್ಎಸ್ಎ ಸದಸ್ಯ ಕಾರ್ಯದರ್ಶಿ ಜೆ ಪುರುಷೋತ್ತಮ್, ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ ಮಲ್ಲಿಕಾರ್ಜುನ್, ಬಿ.ಪಿ ಉಮಾಶಂಕರ್ ಮತ್ತು ನಿಮ್ಹಾನ್ಸ್ನ ಮಾಜಿ ನಿರ್ದೇಶಕ ಮತ್ತು ಹಿರಿಯ ಪ್ರಾಧ್ಯಾಪಕ ಸಿಟಿ ಮೂರ್ತಿ ಅವರ ಸಮ್ಮುಖದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಡಾ. ಗುರುರಾಜ್ ಮತ್ತು ಹೆಚ್ಚುವರಿ ಪ್ರಾಧ್ಯಾಪಕರು – ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗ, ಸಾರ್ವಜನಿಕ ಆರೋಗ್ಯ ಕೇಂದ್ರ ಡಾ. ಗೌತಮ್ ಎಂ ಸುಕುಮಾರ್ ಇದ್ದರು.