ದಾವಣಗೆರೆ : ಶಿವಮೊಗ್ಗ.. ಬಿಎಸ್ವೈ ಕುಟುಂಬ ಮತ್ತು ಬಿಜೆಪಿಯ ಭದ್ರಕೋಟೆ ಅಂತ್ಲೇ ಬಿಂಬಿತವಾಗಿದೆ. ಆದ್ರೆ ಈ ಸಲ ಬಿಜೆಪಿಯ ಭದ್ರಕೋಟೆಯಲ್ಲಿ ಬಿಎಸ್ವೈಗೆ ಪುಕಪುಕ ಶುರುವಾಗಿದೆ. ಈ ಸಲ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿವೈ ರಾಘವೇಂದ್ರ ಗೆಲುವು ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ. ಹಾಗಾದ್ರೆ ಮಾಜಿ ಸಿಎಂ ಬಿಎಸ್ವೈ ಅವರಿಗೆ ಶುರುವಾಗಿರೋ ಆ 1 ಟೆನ್ಷನ್ ಏನು?
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂಗಳ ಮಕ್ಕಳ ಮಧ್ಯೆ ಬಿಗ್ ಫೈಟ್ ಏರ್ಪಟ್ಟಿದೆ. ಬಿಜೆಪಿಯಿಂದ ಬಿಎಸ್ವೈ ಪುತ್ರ ಬಿವೈ ರಾಘವೇಂದ್ರ ಅಖಾಡದಲ್ಲಿದ್ರೆ, ಮತ್ತೊಂದು ಕಡೆ ಮಾಜಿ ಸಿಎಂ ದಿವಂಗತ ಸಾರೆಕೊಪ್ಪ ಬಂಗಾರಪ್ಪನವರ ಮಗಳು ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.. ಇವರ ಮಧ್ಯೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅಖಾಡಕ್ಕಿಳಿಯೋದು ಕೂಡ ಗ್ಯಾರಂಟಿ ಎನ್ನಲಾಗುತ್ತಿದೆ. ಆದ್ರೆ ಸದ್ಯದ ಬೆಳವಣಿಗೆಗಳನ್ನ ನೋಡಿದ್ರೆ ಈ ಸಲ ಶಿವಮೊಗ್ಗದಲ್ಲಿ ಕಾಂಗ್ರೆಸ್ಗೆ ಪೂರಕವಾದ ರಾಜಕೀಯ ವಾತಾವರಣ ನಿರ್ಮಾಣವಾಗಿದೆ.
ರಾಘವೇಂದ್ರ ವಿರುದ್ಧ ಕೇಸ್ ದಾಖಲು?
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಶನಿವಾರ ಬಿ.ವೈ. ರಾಘವೇಂದ್ರ ಅವರು ಭೋವಿ ಮಠಕ್ಕೆ ಭೇಟಿ ನೀಡಿದ್ದರು. ಮಠದಲ್ಲಿ ವಿವಿಧ ಮಠಾಧೀಶರನ್ನು ಭೇಟಿಯಾಗಿದ್ದರು. ಬಳಿಕ ಮಠದಲ್ಲಿ ರಾಜಕೀಯ ಭಾಷಣ ಮಾಡಿದ ಆರೋಪ ಕೇಳಿ ಬಂದಿದೆ. ಪೂರ್ವಾನುಮತಿ ಪಡೆದುಕೊಳ್ಳದೆ ಸಭೆ ನಡೆಸಿ ಭಾಷಣ ಮಾಡಲಾಗಿದೆ ಎಂದು ಚಿತ್ರದುರ್ಗ FST ತಂಡದ ಅವಿನಾಶ್ ಎಂಬುವರು ದೂರು ನೀಡಿದ್ದಾರೆ. ಹೀಗಾಗಿ ರಾಘವೇಂದ್ರ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.
ಬೈಂದೂರು ಕ್ಷೇತ್ರದಲ್ಲಿ BYRಗೆ ವಿರೋಧ?
ಶಿವಮೊಗ್ಗ ಲೋಕಸಭಾ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ ಉಡುಪಿ ಜಿಲ್ಲಾ ವ್ಯಾಪ್ತಿಗೆ ಬರುತ್ತೆ. ಅದು ಬೈಂದೂರು ವಿಧಾನಸಭಾ ಕ್ಷೇತ್ರ. ಇಲ್ಲಿ ಬಿಜೆಪಿಯ ಗುರುರಾಜ ಗಂಟಿಹೊಳಿ ಶಾಸಕರಾಗಿದ್ದರೂ ಕೂಡಾ ಇತ್ತೀಚಿನವರೆಗೆ ಬಿಜೆಪಿಯಲ್ಲಿದ್ದ ಸುಕುಮಾರ್ ಶೆಟ್ಟಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಸುಕುಮಾರ್ ಶೆಟ್ಟಿಯವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಅಲ್ಲಿಂದ ಬಿಜೆಪಿ ನಾಯಕರ ವಿರುದ್ದ ಕಿಡಿಕಾರುತ್ತಿರುವ ಶೆಟ್ರು, ವಾರದ ಹಿಂದೆ ಜಯಪ್ರಕಾಶ್ ಹೆಗ್ಡೆಯವರ ಜೊತೆಗೆ ಕಾಂಗ್ರೆಸ್ ಸೇರಿದ್ದರು. ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೋಪಾಲ ಪೂಜಾರಿಗೆ 82,475 ಮತಗಳು ಬಂದಿದ್ದವು.
ಈಗ ಸುಕುಮಾರ್ ಶೆಟ್ಟಿ, ಗೋಪಾಲ ಪೂಜಾರಿ ಕ್ಷೇತ್ರದ ಪ್ರಭಾವಿ ನಾಯಕರು ಕಾಂಗ್ರೆಸ್ ಗೆಲುವಿಗೆ ಠೊಂಕ ಕಟ್ಟಿ ನಿಂತಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಕೂಡಾ, ಕಾಂಗ್ರೆಸ್ಸಿಗೆ ಇಲ್ಲಿಂದ ಹೆಚ್ಚು ಮತ ಚಲಾವಣೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಸಕ ಗುರುರಾಜ್ ಗಂಟಿಹೊಳಿ ಮೇಲಿದೆ. ಇದಕ್ಕಿಂತಲೂ ಭಿನ್ನಮತ ಎದುರಿಸುತ್ತಿರುವ ಕ್ಷೇತ್ರವೆಂದರೆ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮೀಣ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ್ರೆ ರಾಘವೇಂದ್ರಗೆ ಸೋಲಿನ ಭಯ ಇದ್ದೇ ಇರುತ್ತೆ. ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ನಟ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ”ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ನಮಗೆ ಪಾಸಿಟಿವ್ ವಾತಾವರಣವಿದೆ. ಚುನಾವಣೆ ಅನ್ನೋದು ಮೈಂಡ್ ಸ್ಟ್ರಾಟಜಿ ಅಲ್ಲ, ಹಾರ್ಟ್ ಸ್ಟ್ರಾಟಜಿ. ಎಲ್ಲವೂ ಹೃದಯದಿಂದಲೇ ನಡೆಯೋದು” ಅಂತೇಳಿ ನಟ ಶಿವರಾಜ್ಕುಮಾರ್ ಹೇಳಿದ್ದಾರೆ.
ಅಷ್ಟೇ ಅಲ್ಲ, ಶಿವಮೊಗ್ಗದ ಹಲವು ಪ್ರದೇಶಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರೋ ಶಿವರಾಜ್ಕುಮಾರ್ ತಮ್ಮ ಪತ್ನಿ ಗೀತಾ ಪರ ಮತಯಾಚನೆ ಮಾಡುತ್ತಿದ್ದಾರೆ. ಅಲ್ಲದೆ, ಕಳೆದ ಬಾರಿ ಸೋಲು ಅನುಭವಿಸಿದ್ದ ಗೀತಾ ಶಿವರಾಜ್ಕುಮಾರ್ ಈ ಬಾರಿ ಗೆದ್ದೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಶಿವಣ್ಣನಿಗೆ ಗೀತಕ್ಕ ಅವರನ್ನು ಸಂಸದೆಯಾಗಿ ನೋಡುವ ಆಸೆಯೂ ಇದೆ. ಇನ್ನು ಇದೇ ವೇಳೆ ಅಣ್ಣಾವ್ರ ರಾಜಕೀಯ ವಿಚಾರದ ಬಗ್ಗೆ ಹ್ಯಾಟ್ರೀಕ್ ಹೀರೋ ನೀಡಿರುವ ಹೇಳಿಕೆ ಮುನ್ನೆಲೆಗೆ ಬಂದಿದೆ.
ಯಾವುದೇ ಕಾರ್ಯಕ್ರಮ ಇದ್ರೂ ರಾಜಕೀಯದವರು ನಮ್ಮ ಮನೆಗೆ ಬರುತ್ತಿದ್ದರು. ಅಪ್ಪಾಜಿಗೂ ರಾಜಕೀಯ ಬೇಕಿತ್ತು. ಇಲ್ಲಾ ಅಂದ್ರೆ ಏಕೆ ಬಂಗಾರಪ್ಪ ಅವರ ಮಗಳನ್ನು ತರಬೇಕಿತ್ತು ಅಂತ ಶಿವಣ್ಣ ಹೇಳಿರೋದು ಇದೀಗ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪರ ಸುನಾಮಿ ಏಳುವಂತೆ ಮಾಡಿದೆ. ಹಾಗಾದ್ರೆ ಈ ಸಲ ಶಿವಮೊಗ್ಗದ ಜನ ಯಾರು ಬಯಸುತ್ತಾರಾ ಎಂದು ಕಾದುನೋಡಬೇಕಾಗಿದೆ.