ಭದ್ರಾವತಿ: ಎಂಪಿಎಂ ಕಾರ್ಖಾನೆ ಸಮೀಪದ ಕಾಟೂರಿನ ಚಿನ್ನಸ್ವಾಮಿ ಎಂಬುವವರಿಗೆ ಸೇರಿದ ದನದ ಕೊಠಡಿಯಲ್ಲಿ ಸೋಮವಾರ ಬೆಳಗಿನ ಜಾವ ಆಕಸ್ಮಿಕ ಬೆಂಕಿ ತಗುಲಿ ದನದ ಕೊಟ್ಟಿಗೆ ಯಲ್ಲಿದ್ದ ಒಂದು ದನ ಹಾಗೂ ಒಂದು ಮೇಕೆ ಬೆಂಕಿಯ ಕಿರುನಾಲಿಗೆಗೆ ಬಲಿಯಾಗಿವೆ.
ಸುಮಾರು ಐವತ್ತು ವರ್ಷಗಳಿಂದ ಮನೆಯಲ್ಲಿ ವಾಸವಿದ್ದು ಮನೆಯ ಪಕ್ಕದಲ್ಲಿ ದನದ ಕೊಟ್ಟಿಗೆಗೆ ಶೆಡ್ ನಿರ್ಮಾಣ ಮಾಡಲಾಗಿತ್ತು. ಕೊಟ್ಟಿಗೆಯಲ್ಲಿ ಹಸು ಹಾಗೂ ಕುರಿ, ಮೇಕೆಗಳನ್ನು ಬಿಡಲಾಗಿತ್ತು.
ಕೊಟ್ಟಿಗೆಯಲ್ಲಿದ್ದ ಒಟ್ಟು ಐದು ರಾಸುಗಳಲ್ಲಿ ಒಂದು ಹಸು ಹಾಗೂ ಗಬ್ಬದ ಮೇಕೆ ಬೆಂಕಿಯ ರಭಸಕ್ಕೆ ಸಂಪೂರ್ಣ ಸುಟ್ಟು ಕರುಕಲಾಗಿವೆ. ಉಳಿದ ನಾಲ್ಕು ಹಸುಗಳಿಗೆ ಗಂಭೀರ ಗಾಯ ಗೊಂಡಿವೆ.
ಸ್ಥಳಕ್ಕೆ ನಗರಸಭೆ ಸದಸ್ಯ ಬಸವರಾಜ್ ಆನೆಕೊಪ್ಪ, ತಾಲ್ಲೂಕು ಆಡಳಿತದ ಕಂದಾಯಾಧಿಕಾರಿ ಪ್ರಶಾಂತ್,ಸಿಬ್ಬಂದಿಗಳು, ನಗರಸಭಾಧಿಕಾರಿ ಓಂಕಾರಪ್ಪ ಹಾಗೂ ಸಿಬ್ಬಂದಿಗಳು ಸೇರಿದಂತೆ ಪಶುವೈದ್ಯಾಧಿ ಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.