ಬೆಂಗಳೂರು ದಕ್ಷಿಣ: ‘ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು, ಉನ್ನತ ಸಾಧನೆ ಮಾಡಬೇಕು’ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಬಾಲಾಜಿ ಅವರು ಹೇಳಿದರು.

ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನೆನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯಸೇವಾ ಯೋಜನೆಯು ಜನರಲ್ಲಿ ಶಿಸ್ತನ್ನು ಕಲಿಸುತ್ತದೆ. ಈ ಯೋಜನೆಯ ಮೂಲಕ ಗ್ರಾಮಸ್ಥರಲ್ಲಿ, ಅರಿವನ್ನು ಮೂಡಿಸುವ ಕೆಲಸವಾಗಬೇಕು. ಇದರಿಂದ ಹಳ್ಳಿ ಅಭಿವೃದ್ಧಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು, ಸಮಾಜವನ್ನು ಕಟ್ಟುವ ಮೂಲಕ, ರಾಜ್ಯ, ರಾಷ್ಟçದ ಬೆಳವಣಿಗೆಗಾಗಿ ಕೆಲಸ ಮಾಡಬೇಕು. ಸಮಾಜದ ಆಗು-ಹೋಗುಗಳನ್ನು ತಿದ್ದುವ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿದೆ ಎಂದು ಹೇಳಿದರು.
ಚನ್ನೆನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ಎನ್. ರಾಘವೇಂದ್ರ ಮಾತನಾಡಿ, ವಿದ್ಯಾಸಂಸ್ಥೆಗಳು ಶಿಕ್ಷಣಕ್ಕೆ ಒತ್ತು ಕೊಟ್ಟ ರೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಶಿಸ್ತನ್ನು ಬೆಳಸುತ್ತದೆ. ಇವುಗಳಿಂದ ಜೀವನದಲ್ಲಿ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ಇದಕ್ಕೆ ತಾಜಾ ಉದಾಹರಣೆ ನಾನೇ ಎಂದು ಹೇಳಿದರು.ನಾನು ಎನ್‌ಎಸ್‌ಎಸ್ ವಿದ್ಯಾರ್ಥಿಯಾಗಿ ಕಲಿತ ವಿದ್ಯೆ ಎಂದು ನಾಯಕನಾಗಿ ರೂಪಗೊಳ್ಳುವಲ್ಲಿ ಸಹಕಾರ ಆಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಾ ಅವರು ಮಾತನಾಡಿ ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಕಲಿಸುತ್ತದೆ. ಇದರ ಮೂಲಕ ಜೀವನದಲ್ಲಿ ಅಭಿವೃದ್ಧಿಗಳಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಚನ್ನೆನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಚಂದ್ರಯ್ಯ, ಹೊನ್ನಗನಹಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕರಾದ ಮೃತ್ಯುಂಜಯ ಜಿ.ಆರ್. ಕಾಲೇಜಿನ ಪ್ರಾಧ್ಯಾಪಕರು ಪ್ರಾಣಿಶಾಸ್ತ್ರ ವಿಭಾಗ ಡಾ. ದೇವರಾಜ್ ಟಿ.ಎಂ., ಪ್ರಾಧ್ಯಾಪಕರು ರಸಾಯನಶಾಸ್ತ್ರ ವಿಭಾಗ ಡಾ. ವಾಸುದೇವ ರೆಡ್ಡಿ, ಕನ್ನಡ ಸಹ ಪ್ರಾಧ್ಯಾಪಕರು ಆರ್. ಎನ್. ಪದ್ಮನಾಭ, ವಾಣಿಜ್ಯಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕರಾದ ಎನ್. ರಘು, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾ ಡಾ. ರತ್ನಕುಮಾರಿ ಹಾಗೂ ಡಾ. ರಾಘವೇಂದ್ರ ಎಸ್.ಜಿ, ಉಪಸ್ಥಿತರಿದ್ದರು.

Share.
Leave A Reply

Exit mobile version