
ದಾವಣಗೆರೆ : ಕೆ.ಶಿವರಾಂ ಮಾನವೀಯ ಅಂತಃಕರಣ ಉಳ್ಳ ಸರಳ ಸಜ್ಜನ ಅಧಿಕಾರಿ. ಅದೇನೋ ನಮ್ಮ ಬ್ಯಾಚ್ ನ ಎಲ್ಲಾ ಪಿಎಸ್ಐ ರವರನ್ನು ಕಂಡರೆ ವಿಶೇಷ ಒಲವುಅಂತ ಎಸಿಬಿ ನಿವೃತ್ತ ಎಸ್ಪಿ ಜಿ.ಎ.ಜಗದೀಶ್ ನುಡಿನಮನದ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕೆ.ಶಿವರಾಂ ದಾವಣಗೆರೆಯಲ್ಲಿ 2000-2003 ರ ಈ ಅವಧಿಯಲ್ಲಿ ಅತ್ಯಂತ ಪಾಪ್ಯುಲರ್ ಜಿಲ್ಲಾಧಿಕಾರಿ ಆಗಿದ್ದರು. ನಾನೂ 2002 ರಿಂದ 2007 ರವರೆಗೆ ದಾವಣಗೆರೆ ಸೆಂಟ್ರಲ್ ಸರ್ಕಲ್ ಸಿಪಿಐ ಆಗಿದ್ದೆ. ಅವರೊಂದಿಗಿನ ಒಡನಾಟ ಮರೆಯಾಗುವುದಿಲ್ಲ. ಬಾಲ ಕಾರ್ಮಿಕರ ಪಿಡುಗು ನಿರ್ಮೂಲನೆ ಕಾರ್ಯಾಚರಣೆ ಹಾಗೂ ಅವರನ್ನು ಮುಖ್ಯವಾಹಿನಿಗೆ ತರಲು ಶಿಕ್ಷಣ – ಪುನರ್ವಸತಿ ವ್ಯವಸ್ಥೆ ಬಗ್ಗೆ ಪಟ್ಟ ಪರಿಶ್ರಮ ಪ್ರಶಂಸಿಸಲೇಬೇಕು.
ನಂತರ ವಸತಿ ರಹಿತ ಬಡ ಜನರ ಪಾಲಿಗೆ ದೇವರೇ ಆದರು. ಹಿಂದುಳಿದ ವರ್ಗದ, ಅಲ್ಪಸಂಖ್ಯಾತರು, ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಯ ಸುಮಾರು 800 ಕ್ಕೂ ಹೆಚ್ಚಿನ ಜನರಿಗೆ ಸೂರು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿದ ಸತ್ಕಾರ್ಯ ದೇವನಾಗರಿಯ ಜನ ಇನ್ನೂ ಮರೆತಿಲ್ಲ. ದಾವಣಗೆರೆ ನಗರದ ಪರಿಶಿಷ್ಟ ಪಂಗಡ ಹಾಗೂ ಜಾತಿಯ ಬಡ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಶಿವರಾಮು ಕಂಪ್ಯೂಟರ್ ತರಬೇತಿ ಶಾಲೆಯ ದಾವಣಗೆರೆಯಲ್ಲಿ ಈಗಲೂ ನಡೆಯುತ್ತಿರುವುದು ಗಮನಾರ್ಹವಾಗಿದೆ.

ದಾವಣಗೆರೆಯ ಅಂದಿನ ಜಿಲ್ಲಾ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಅವರ ವಿಶ್ವಾಸವನ್ನು ಸಂಪೂರ್ಣ ಗಳಿಸಿದ್ದರು.ದಾವಣಗೆರೆಯ ಅಭಿವೃದ್ಧಿ – ಪ್ರಗತಿ ಇನ್ನೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. *”ಜನಪರ ಸೇವೆ”* ಇತರೆ ಎಲ್ಲಾ ಐಎಎಸ್ ಅಧಿಕಾರಿಗಳ ಪಾಲಿಗೆ ಮಾದರಿಯಾಗಿತ್ತು ಎಂದರೆ ಅತಿಶಯೋಕ್ತಿಯಾಗಲಾರದು.
*ಜನರ ಮನೆ ಬಾಗಿಲಿಗೆ ನಮ್ಮ ಸರ್ಕಾರ* ಎಂದು ಈಗ ಸುಮ್ಮನೇ ಬೊಬ್ಬೆ ಹೊಡೆಯುವ ಅನೇಕ ಸಚಿವರು ಇನ್ನೂ ಕಾರ್ಯರೂಪಕ್ಕೆ ತರಲು ಒದ್ದಾಡುತ್ತಿದ್ದಾರೆ. ಆದರೆ ಬಡವರ ಬಂಧು ಶ್ರೀ ಶಿವರಾಮು 2000-2003 ರಲ್ಲಿಯೇ ಜನಪರ ಆಡಳಿತ ನೀಡಿದ ಹೆಗ್ಗಳಿಕೆ ಅವರದು.
ಜಿಲ್ಲಾಡಳಿತದಲ್ಲಿ ಕನ್ನಡ ಭಾಷೆ ಜಾರಿಗೊಳಿಸುವಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದಾರೆ. ದಾವಣಗೆರೆಯಲ್ಲಿ 1997 ರಿಂದ ಈವರೆಗೆ ಅಂದರೆ ಸುಮಾರು 27 ವರ್ಷಗಳ ಕಾಲ 18-20 ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳುವರ್ಗಾವಣೆಯಾಗಿ ಬಂದು ಹೋಗಿದ್ದಾರೆ. ಅವರಲ್ಲಿ ದಾವಣಗೆರೆ ಜಿಲ್ಲೆಯ ಜನರಿಗೆ ಡಿಸಿ ಕೆ. ಶಿವರಾಮ್ ಅವರ ಹೆಸರನ್ನು ಮಾತ್ರ ಇನ್ನೂ ಮರೆತಿಲ್ಲ.
ಡಿಎಸ್ ಪಿ ಹುದ್ದೆಗೆ ಕೆಪಿ ಎಸ್ ಸಿ ಯಿಂದ ಆಯ್ಕೆಯಾದ ಶ್ರೀ ಶಿವರಾಮು ಅವರು 1985 -86 ರಲ್ಲಿ ಮೂಲ ತರಬೇತಿಯನ್ನು ನಮ್ಮ ಪಿಎಸ್ ಐ ಬ್ಯಾಚ್ ನ ಜೊತೆ ಜೊತೆಗೆ ನಡೆದಿದ್ದು ಹಾಗಾಗಿ ನಮ್ಮೆಲ್ಲರ ಒಟ್ಟಿಗೆ ಬಹಳಷ್ಟುಆತ್ಮೀಯತೆ ಹೊಂದಿದ್ದರು. ತರಬೇತಿಯ ಸಮಯದಲ್ಲಿ ಶಿವರಾಮು ಅವರು ಬಿಡುವಿನ ಸಮಯ ಚಲನಚಿತ್ರದ ಬಗ್ಗೆ ಸಾಕಷ್ಟು ಸಮಾಲೋಚನೆ ನಡೆಸುತ್ತಿದ್ದರು. ಅವರಿಗೆ ಆಗಲೇ ಸಿನಿಮಾದ ನಾಯಕ ನಟ ಹಾಗೂ ನಿರ್ಮಾಪಕ ಆಗಬೇಕೆಂಬ ದೊಡ್ಡ ಕನಸು ಚಿಗುರು ಹೊಡೆದಿತ್ತು. ಆ ಸಮಯದಲ್ಲಿ ತರಂಗ ವಾರ ಪತ್ರಿಕೆಯಲ್ಲಿ ಖ್ಯಾತ ಸಾಹಿತಿಗಳಾದ *ನಾಗತಿಹಳ್ಳಿ ಚಂದ್ರಶೇಖರ್ ಅವರು ಬಾನಲ್ಲೆ ಮಧುಚಂದ್ರಕೆ* ಪ್ರತಿ ವಾರ ಕಥೆ ಒಂದೆರಡು ಪುಟ ಪ್ರಕಟವಾಗುತ್ತಾ ಇತ್ತು. ನನಗೆ ಸಾಹಿತ್ಯಾಸಕ್ತಿ ಇದ್ದುದರಿಂದ ನಾನೂ ಕೂಡ ಪ್ರತಿ ವಾರ ಬಿಡದೆ ಓದುತ್ತಿದ್ದೆ .
ಕೆ. ಶಿವರಾಮು ಅವರಿಗೆ ಇಂತಹ ಕಥೆ ಸಿನಿಮಾ ತೆಗೆಯಲು ತುಂಬಾ ಚೆನ್ನಾಗಿದೆ ಅಂತಹ ತಿಳಿಸಿದ್ದೆ. ಮೊದಲೇ ಸಿನಿಮಾ ತೆಗೆಯುವ ಗೀಳು ಹಚ್ಚಿಕೊಂಡಿದ್ದ ಶಿವರಾಮು ಅವರು ನಂತರ ಮೂಲ ತರಬೇತಿ ಅವಧಿಯ ಅಂತ್ಯದಲ್ಲಿ ಜುಲೈ 1986 ರಲ್ಲಿ ಶಿವರಾಮು ಅವರು ಕನ್ನಡಲ್ಲಿ ಯುಪಿಎಸ್ ಸಿ ಬರೆದು ಆಯ್ಕೆಯಾಗಿದ್ದರು. ಕರ್ನಾಟಕದಲ್ಲಿ ಕನ್ನಡದಲ್ಲಿ ಐಎಎಸ್ ಮಾಡಿದ ಕೀರ್ತಿ-ಗೌರವ ಶಿವರಾಮು ಅವರಿಗೆ ಸಲ್ಲುತ್ತದೆ.
ಶಿವರಾಮು ಅವರು ಐಎಎಸ್ ತರಬೇತಿ ಪಡೆದುಕೊಂಡ ನಂತರ ಚಲನಚಿತ್ರದ ಅಭಿರುಚಿ ಅವರನ್ನು ಬಿಡಲಿಲ್ಲ. ನಾಗತಿಹಳ್ಳಿ *ಚಂದ್ರಶೇಖರ್ ಅವರ ಬಾ ನಲ್ಲೆ ಮಧುಚಂದ್ರಕೆ* ಚಿತ್ರದಲ್ಲಿ ನಾಯಕ ನಟನಾಗಿ ಮತ್ತು ನಿರ್ಮಾಪಕರಾಗಿ ಅತ್ಯಂತ ಹಿಟ್ ಚಲನಚಿತ್ರವಾಗಿ ಹೊರ ಹೊಮ್ಮಿತು.ಅದು ಯಶಸ್ವಿಯಾಗಿ ಜನಮನ ಸೂರೆಗೊಂಡ ಚಿತ್ರವಾಯಿತು. ಇನ್ನು ಹಲವಾರು ಚಲನಚಿತ್ರಗಳಲ್ಲಿ ಕೆಲವು ವರ್ಷಗಳಕಾಲ ಅಭಿನಯ ಮಾಡಿದ್ದರು. ಯಶಸ್ವಿ ಐಎಎಸ್ ಅಧಿಕಾರಿಯಾಗಿ, ಅತ್ಯುತ್ತಮ ನಿರ್ಮಾಪಕ ನಟನಾಗಿದ್ದರು.
ಹಲವು ಜಿಲ್ಲೆಗಳ ಡಿ ಸಿ, ಸಿಇಓ ಆಗಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿ ಮೈಸೂರಿನ ಡಿವಿಸನಲ್ ಕಮಿಷನರ್ ಆಗಿ ನಂತರ 2013 ರಲ್ಲಿ ಸೇವೆಯಿಂದ ನಿವೃತ್ತರಾದರು. ಸರ್ಕಾರದ ಉನ್ನತ ಅಧಿಕಾರಿಯಾಗಿ ಕನ್ನಡ ಚಲನಚಿತ್ರ ನಾಯಕ ನಟನಾಗುವ ಕನಸು ನನಸಾಯಿತು. ಆದರೆ ರಾಜಕೀಯ ಕ್ಷೇತ್ರದಲ್ಲಿ MLA / MP ಆಗುವ ಕನಸು ಕನಸಾಗಿಯೇ ಉಳಿಯಿತು. ಆನೇಕಲ್ – ಮಳವಳ್ಳಿಯ ಶಾಸಕನಾಗುವ ಬಯಕೆ ಆಗಲಿಲ್ಲ.
ಇತ್ತೀಚಿಗೆ ಚಾಮರಾಜನಗರ ಕ್ಷೇತ್ರದ MP ಆಗಲು ಬಯಸಿ ಇಡೀ ಕ್ಷೇತ್ರದಲ್ಲಿ 2-3 ಬಾರಿ ವಿಶ್ರಾಂತಿ ರಹಿತವಾಗಿ ಸುತ್ತಾಡಿ ಬಂದಿದ್ದರು. ಎಂಪಿ ಟಿಕೆಟ್ ಪಡೆದು ಚುನಾವಣೆ ಎದುರಿಸಿ ಜನಪ್ರತಿನಿಧಿ ಆಗುವ ಮುನ್ನವೇ ಇಹಲೋಕ ತೊರೆದಿದ್ದು ತೀರಾ ನೋವಿನ ಸಂಗತಿಯಾಗಿದೆ ಎನ್ನುತ್ತಾರೆ ಜಿ.ಎ.ಜಗದೀಶ್.
…