ದಾವಣಗೆರೆ : ಹುಲಿ ಉಗುರು ಮತ್ತು ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಜಾಲದ 7 ಜನರ ತಂಡವನ್ನು ಸಿ.ಇ.ಎನ್ ಅಪರಾಧ ಪೊಲೀಸರು ಬಂಧಿಸಿ 7.20 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶೇರು ಮಾರ್ಕೆಟ್ ಟ್ರೇಡಿಂಗ್ ನಲ್ಲಿ ಕೆಲಸ ಮಾಡುವ ದಾವಣಗೆರೆಯ ಬಾಲಾಜಿ ನಗರದ ಅಶೋಕ್ಕುಮಾರ್ (27), ರಾಜಸ್ಥಾನ ಮೂಲದ ದಾವಣಗೆರೆ ಆರ್ಎಂಸಿ ಲಿಂಕ್ ರಸ್ತೆ ವಾಸಿ ರಮೇಶ್ ಕುಮಾರ್ ಗಾಂಸಿ (39), ಪುಟ್ಟಿ ವ್ಯಾಪಾರಿ ದಾವಣಗೆರೆಯ ಎಂ.ಆರ್.ಲೋಕೇಶ್ (40), ವಿನೋಬನಗರದ ಕಾರು ಚಾಲಕ ಕಾರ್ತಿಕ್(32) ಕಾರ್ಪೆಂಟರ್ ವೃತ್ತಿ ಮಾಡುವ ನಿಜಲಿಂಗಪ್ಪ ಬಡಾವಣೆಯ ರಾಮ್ ರತನ್ (34) ಬೆಂಗಳೂರಿನ ಬಸವೇಶ್ವರ ಬಡಾವಣೆಯ ವಾಸಿ ಮೂಲತ: ರಾಜಸ್ಥಾನದ ಸುನಿಲ್ ಕುಮಾರ್(28) ಮತ್ತು ಬೆಂಗಳೂರಿನ ಕೊಡಿಗೆಹಳ್ಳಿ ವಾಸಿ ಮೂಲತ: ರಾಜಸ್ಥಾನದ ಸ್ಟೀಲ್ ವ್ಯಾಪಾರಿ ಅಶೋಕ್ ಕುಮಾರ್(23) ಬಂಧಿತ ಆರೋಪಿಗಳು.
ಮಾದಕ ವಸ್ತು ವಶ
ಬಂಧಿತರಿಂದ 40 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು 6 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ: ಡಿಸೆಂಬರ್ 5 ರಂದು ಸಂಜೆ 4 ಗಂಟೆ ಸಮಯದಲ್ಲಿ ನಗರದ ಜಿ. ಮಲ್ಲಿಕಾರ್ಜುನಪ್ಪ ಬಡಾವಣೆಯ ಎನ್.ಹೆಚ್.48 ಸರ್ವಿಸ್ ರಸ್ತೆ ಕಡೆಯಿಂದ ಮಯೂರ್ ಗ್ಲೋಬಲ್ ಶಾಲೆಯ ಕಡೆಗೆ ಹೋಗುವ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಗಳು ಎಂಡಿಎಂಎ ಮಾದಕ ವಸ್ತುವನ್ನು ಇಟ್ಟುಕೊಂಡು ಸೇವನೆ ಮಾಡುತ್ತಿದ್ದಾರೆಂದು ಮಾಹಿತಿ ಬಂದಿತ್ತು.
ಹುಲಿ ಉಗುರು ಜಾಲ ಪತ್ತೆ
ಈ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 4 ಜನರನ್ನು ಬಂಧಿಸಿ ಅವರಿಂದ ಮಾದಕ ವಸ್ತು ಮತ್ತು ಕಾರನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದರು. ಆಗವ ಹುಲಿ ಉಗುರು ಮಾರಾಟ ಜಾಲ ಪತ್ತೆಯಾಗಿದೆ.
ಪ್ರಸಾದ್ ನೇತೃತ್ವದ ತಂಡಕ್ಕೆ ಎಸ್ಪಿ ಶ್ಲಾಘನೆ
ತನಿಖೆ ಕೈಗೆತ್ತಿಕೊಂಡ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಸಾದ್ ಪಿ ಮತ್ತು ಸಿಬ್ಬಂದಿಗಳಾದ ಪ್ರಕಾಶ್, ನಾಗರಾಜ, ಮುತ್ತುರಾಜ್, ಗೋವಿಂದರಾಜ್, ಮಲ್ಲಿಕಾರ್ಜುನ, ಲಿಂಗರಾಜ್ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ರಾಘವೇಂದ್ರ, ಶಾಂತರಾಜ್, ರಾಮಚಂದ್ರ ಜಾಧವ್ ಅವರತಂಡ ಅವರನ್ನೊಳಗೊಂಡ ತಂಡ 7 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಎಸ್ಪಿ ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿ ಮಾರಾಟ ಮಾಡಿದವ ಬಂಧನ
ಈ ತಂಡಕ್ಕೆ ಮಾದಕ ವಸ್ತು ಮಾರಾಟ ಮಾಡಿದ ಓರ್ವನನ್ನು ಹಿಡಿದು ಆತನ ಮೊಬೈಲ್ ನ್ನು ವಶಪಡಿಸಿಕೊಳ್ಳಲಾಯಿತು. ನಂತರ ಆರೋಪಿತನ ಮಾಹಿತಿಯ ಮೇರೆಗೆ ಬೆಂಗಳೂರು ನಗರದ ಬಸವೇಶ್ವರ ಬಡಾವಣೆ 2ನೇ ಹಂತ 4ನೇ ಮೇನ್ 5ನೇಕ್ರಾಸ್ ನಲ್ಲಿರುವ ಮನೆಯ ಮೇಲೆ ಶೋಧನಾ ವಾರೆಂಟ್ ಪಡೆದು ದಾಳಿ ಮಾಡಲಾಯಿತು. ದಾಳಿ ವೇಳೆ ಮನೆಯಲ್ಲಿದ್ದ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದು, ಅಲ್ಲಿದ್ದ ಮಾದಕ ವಸ್ತು ಮತ್ತು ಮೇಲ್ನೋಟಕ್ಕೆ ಹುಲಿಯ ಉಗುರಿನಂತೆ ಕಾಣುವ 6 ಉಗುರುಗಳನ್ನು ಹಾಗೂ 2 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಏಳು ಜನರ ಬಂಧನ
ಒಟ್ಟಾರೆ ಈ ಪ್ರಕರಣದಲ್ಲಿ ದಾವಣಗೆರೆಯ ಮೂವರು ಸೇರಿದಂತೆ 7 ಜನರನ್ನು ಬಂಧಿಸಿ ಅಂದಾಜು 3.20 ಲಕ್ಷ ರೂ ಮೌಲ್ಯದ 49 ಗ್ರಾಂ ಮಾದಕ ವಸ್ತು, 6 ಹುಲಿ ಉಗುರು, 04 ಮೊಬೈಲ್ಗಳು, 1 ಕಾರನ್ನು ವಶಪಡಿಸಿಕೊಳ್ಳಲಾಗಿದ್ದು ಇವುಗಳ ಒಟ್ಟು ಅಂದಾಜು ಮೌಲ್ಯ 7.20 ಲಕ್ಷ ರೂ. ಬಂಧಿತರ ಪೈಕಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರಿಸಿದ್ದಾರೆ.