ದಾವಣಗೆರೆ: ವೋಟ್ ಬ್ಯಾಂಕ್ ರಾಜಕಾರಣಕ್ಕೆ ವಕ್ಫ್ ಆಸ್ತಿಯ ಹೆಸರಿನಲ್ಲಿ ರೈತರ ಜಮೀನು, ದೇಗುಲ ಹಾಗೂ ಮಠಗಳನ್ನು ಕಬಳಿಸಲು ಮುಂದಾಗಿ ರಾಜ್ಯದ ಶಾಂತಿ ಕದಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ವಕ್ಫ್ ಸಚಿವ ಜಮೀರ್ ಅಹಮ್ಮದ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಶಾಸಕ ಬಿ.ಪಿ.ಹರೀಶ್ ಆಗ್ರಹಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಗಣೇಶ ಹಬ್ಬದ ಮೆರವಣಿಗೆಗೆ ನಿರ್ಬಂಧ ವಿಧಿಸಲಾಗಿದೆ. ದೀಪಾವಳಿ ಹಬ್ಬದ ಪಟಾಕಿ ಸಿಡಿಸಲು ಕಡಿವಾಣ ಹಾಕಲಾಗಿದೆ. ವಕ್ಫ್ ಹೆಸರಿನಲ್ಲಿ ರೈತರ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಹುನ್ನಾರ ನಡೆದಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ವಕ್ಫ್ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗುತ್ತಿದೆ. ಇದರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ವಿಜಯಪುರದಲ್ಲಿ ಹೋರಾಟ ನಡೆಸಲಾಗಿದೆ. ನ.14ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಹೋರಾಟಕ್ಕೆ ರೂಪುರೇಷ ಸಿದ್ಧಪಡಿಸಲಾಗುವುದು’ ಎಂದರು.
‘ಭಾರತೀಯರನ್ನು ಒಡೆದಾಳುವ ಉದ್ದೇಶದಿಂದ ವಕ್ಫ್ ಕಾಯ್ದೆಯನ್ನು ಬ್ರಿಟಿಷರು ಜಾರಿಗೆ ತಂದಿದ್ದರು. ಇದೇ ಕಾಯ್ದೆಯನ್ನು ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿದೆ. ಮುಸ್ಲಿಂ ದೊರೆಗಳು ಆಡಳಿತ ನಡೆಸಿದ ಭಾಗದಲ್ಲಿ ಮಾತ್ರ ಆಸ್ತಿ ವಿಚಾರದಲ್ಲಿ ಗೊಂದಲ ಇರಬಹುದು ಎಂಬ ಸಂಶಯವಿತ್ತು. ಆದರೆ, ವಕ್ಫ್ ಆಸ್ತಿಯ ನೆಪದಲ್ಲಿ ಇಡೀ ರಾಜ್ಯವನ್ನು ಸ್ವಾಧೀನಕ್ಕೆ ಪಡೆಯುವ ಹುನ್ನಾರ ನಡೆದಿದೆ’ ಎಂದು ದೂರಿದರು.