ದಾವಣಗೆರೆ : ಇಳಿ ವಯಸ್ಸಿನಲ್ಲಿ HD ದೇವೇಗೌಡ್ರು ಮಹಾ ಸುಳ್ಳನ್ನ ಹೇಳ್ತಾಯಿದ್ದಾರಾ.? ಇವರು ಸುಳ್ಳುಗಳನ್ನ ಹೇಳ್ತಾಯಿರೋದು ಕರ್ನಾಟಕದ ಜನರ ಉದ್ಧಾರಕ್ಕಾ..? ಇಲ್ಲ, ತಮ್ಮ ಕುಟುಂಬದ ಉದ್ಧಾರಕ್ಕಾ ಅನ್ನೋ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಹಾಗಾದ್ರೆ ದೇವೇಗೌಡ್ರು ಹೇಳ್ತಿರೋ ರೀತಿ ಪ್ರಧಾನಿ ಮೋದಿ ಕರ್ನಾಟಕಕ್ಕೆ ಕೊಟ್ಟಿದ್ದು ಖಾಲಿ ಚೊಂಬಾ..? ಅಕ್ಷಯ ಪಾತ್ರೆನಾ..?
ಜಸ್ಟ್ 6 ತಿಂಗಳ ಹಿಂದೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ್ರು ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ನಡೆಸಿದ ವಾಗ್ದಾಳಿ ಒಂದಾ, ಎರಡಾ.? ಮೋದಿ ಸರ್ಕಾರದಿಂದ ಕರ್ನಾಟಕ ಮತ್ತು ಕನ್ನಡಿಗರಿಗಾದ ಅನ್ಯಾಯಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ರು. ಆದ್ರೆ ಅದ್ಯಾವಾಗ ಜೆಡಿಎಸ್ NDA ಸೇರ್ತೋ ಅವತ್ತಿನಿಂದ ಇವರ ವರಸೆ ಬದಲಾಗಿದೆ. ರಾಜ್ಯದ ಜನರ ಕಿವಿಗೆ ಹೂವಿಡೋ ಕೆಲಸಕ್ಕೆ ಕೈ ಹಾಕಿದ್ದಾರೆ. ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನ ಆಡ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಎಳ್ಳಷ್ಟು ಅನ್ಯಾಯವಾಗಿಲ್ಲ. ಎಳ್ಳಷ್ಟೂ ಮೋಸ ಆಗಿಲ್ಲ ಅಂತೇಳಿ ಪುಂಗುತ್ತಿದ್ದಾರೆ. ಹಾಗಾದ್ರೆ ಕಳೆದ 6 ತಿಂಗಳ ಹಿಂದಷ್ಟೇ ಬಿಜೆಪಿ ವಿರುದ್ಧ ನೀವು ನಡೆಸಿದ ವಾಗ್ದಾಳಿ ಸುಳ್ಳೇ.? ನಿಮಗೆ ಹಾವಿನ ಥರ ಎರಡು ನಾಲಿಗೆ ಇದ್ಯಾ ಅಂತೇಳಿ ಜನ ಸಾಮಾನ್ಯರು ದಳಪತಿಗಳನ್ನ ಪ್ರಶ್ನೆ ಮಾಡ್ತಿದ್ದಾರೆ. ಇನ್ನ ಬಿಜೆಪಿನ ಸಪೋರ್ಟ್ ಮಾಡಿ ಮಾತನಾಡ್ತಿರೋ ಹೆಚ್ಡಿ ದೇವೇಗೌಡ್ರು ಕಾಂಗ್ರೆಸ್ನ ಖಾಲಿ ಚೊಂಬಿನ ಅಸ್ತ್ರಕ್ಕೆ ತಿರುಗೇಟನ್ನ ಕೊಟ್ಟಿದ್ದಾರೆ. ಹತ್ತು ವರ್ಷದ ಆಡಳಿತದಲ್ಲಿ ರಾಷ್ಟ್ರದ ಸಂಪತ್ತು ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ ಬೊಕ್ಕಸ ಬರಿದು ಮಾಡಿ 2014ರಲ್ಲಿ ನರೇಂದ್ರ ಮೋದಿ ಅವರ ಕೈಗೆ ಖಾಲಿ ಚೊಂಬು ಕೊಟ್ಟಿತ್ತು. ಮುಂದಿನ ಹತ್ತು ವರ್ಷಗಳಲ್ಲಿ ತಮ್ಮ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಖಾಲಿ ಚೊಂಬನ್ನು ತುಂಬಿ ಅಕ್ಷಯ ಪಾತ್ರೆ ಮಾಡಿದರು ಅಂತೇಳಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಣ್ಣಿಸಿದ್ರು.. ಇದಕ್ಕೆ ರಾಜ್ಯ ಕಾಂಗ್ರೆಸ್ ಈಗ ತಿರುಗೇಟನ್ನ ಕೊಟ್ಟಿದೆ. ಮೋದಿಯವರ ಬಳಿ ಇರುವುದು ಖಾಲಿ ಚೊಂಬೇ ಹೊರತು ಅಕ್ಷಯ ಪಾತ್ರೆಯಲ್ಲ. ಅದು ಅಕ್ಷಯ ಪಾತ್ರೆ ಎಂದಾದರೆ, ಅದರಿಂದ ನಮ್ಮ ರೈತರಿಗೆ ಬರ ಪರಿಹಾರವನ್ನು, ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಬರಬೇಕಾದ ಅನುದಾನವನ್ನು ದೇವೇಗೌಡ ಅವರು ಪ್ರಧಾನಿಗಳಿಗೆ ಹೇಳಿ ಕೊಡಿಸಲಿ ಅಂತೇಳಿ ಸಚಿವ ಕೃಷ್ಣಭೈರೇಗೌಡ್ರು ತಿರುಗೇಟನ್ನ ಕೊಟ್ಟಿದ್ದಾರೆ.
ಇನ್ನು ಇದೇ ವಿಚಾರವಾಗಿ ದೇವೇಗೌಡ್ರಿಗೆ ತಿರುಗೇಟು ಕೊಟ್ಟಿರೋ ಸಿಎಂ ಸಿದ್ರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರು ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ ಅಂದರೆ ಈ ದೇಶದಲ್ಲಿ ಯಾವ ಸಮಸ್ಯೆ ಇಲ್ಲದೆ ಅಕ್ಷಯ ಪಾತ್ರೆಯಾಗಿದೆಯಾ? ಏಕೆ ಮತ್ತೆ ಹೆಚ್ಡಿ ದೇವೇಗೌಡರು ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಅಂತೇಳಿ ಸಿಎಂ ಸಿದ್ದರಾಮಯ್ಯ ತಿರುಗೇಟನ್ನ ಕೊಟ್ಟಿದ್ದಾರೆ. ಮೋದಿ ಮತ್ತು ದೇವೇಗೌಡರು ಸುಳ್ಳು ಹೇಳುವುದರಲ್ಲಿ ಪೈಪೋಟಿಗೆ ಬಿದ್ದಿದ್ದಾರೆ. ಏಕೆ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆ ಅಂತಾ ಅರ್ಥವಾಗಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿ ಕೋಮುವಾದಿ ಪಕ್ಷ ಅಂತಾ ಇದೇ ದೇವೇಗೌಡರು ಹೇಳಿದ್ದರು. ಮುಂದಿನ ಜನ್ಮದಲ್ಲಿ ಹುಟ್ಟಿದ್ದರೆ ಮುಸ್ಲಿಮನಾಗಿ ಹುಟ್ತೀನಿ ಎಂದಿದ್ದರು. ಜೆಡಿಎಸ್ ಪಕ್ಷದಲ್ಲಿ ತಮ್ಮ ಅಳಿಯನಿಗೆ ಟಿಕೆಟ್ ಕೊಟ್ಟಿಲ್ಲ. ಜೆಡಿಎಸ್ನವರು ಮೂರು ಕ್ಷೇತ್ರಗಳಲ್ಲಿ ಟೆಕೆಟ್ ತೆಗೆದುಕೊಂಡಿದ್ದಾರೆ. ಕೋಲಾರ ಮೀಸಲು ಕ್ಷೇತ್ರವಾಗದಿದ್ದರೆ ಆ ಕ್ಷೇತ್ರವನ್ನೂ ಬಿಡ್ತಿರಲಿಲ್ಲ. ಕುಟುಂಬ ರಾಜಕಾರಣ ಮಾಡುವವರಿಗೆ ನೀವು ಮತ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ. ಇರೋದನ್ನು ಹೇಳಿದರೆ ಸಿದ್ದರಾಮಯ್ಯ ಗರ್ವಭಂಗ ಮಾಡ್ತಾರೆ ಅಂತಾರೆ ಅಂತೇಳಿ ಸಿದ್ದರಾಮಯ್ಯ ಕುಟುಕಿದ್ದಾರೆ.
ಇನ್ನು ಇಷ್ಟಕ್ಕೆ ನಿಲ್ಲದ ಸಿದ್ದರಾಮಯ್ಯ, ನರೇಂದ್ರ ಮೋದಿಯವರು ಹತ್ತು ವರ್ಷ ಪ್ರಧಾನಿಯಾಗಿದ್ದಾರೆ. ಬಡವರ, ಮಧ್ಯಮ ವರ್ಗದ ಜನರಿಗೆ ಅವರು ಏನು ಮಾಡಿಲ್ಲ. ಮೊದಲನೇ ಹಾಗೂ ಎರಡನೇ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟಿದ್ದರು. ಹಲವಾರು ಭರವಸೆಗಳನ್ನ ಸಹ ಕೊಟ್ಟಿದ್ದರು. ಆ ಭರವಸೆಗಳು ಇಲ್ಲಿಯತನಕ ಏನಾಯ್ತು ಅಂತ ಹೇಳಲಿಲ್ಲ. ಕಪ್ಪು ಹಣವನ್ನ ತೆಗೆದುಕೊಂಡು ಬಂದು ಅಕೌಂಟ್ಗಳಿಗೆ 15 ಲಕ್ಷ ರೂ. ಜಮಾ ಮಾಡುತ್ತೇವೆ ಅಂತ ಹೇಳಿದ್ದರು. ಪುಣ್ಯತ್ಮ ತಂದು ಕೊಡಬೇಕಲ್ವಾ, 15 ಲಕ್ಷ ರೂ. ಅಲ್ಲ 15 ಪೈಸೆ ಕೂಡ ಬರಲಿಲ್ಲ. ಇದು ಮೋದಿ ಹೇಳಿದ ಮೊದಲನೇ ಸುಳ್ಳು ಎಂದಿದ್ದಾರೆ. ನಿರುದ್ಯೋಗ ಸಮಸ್ಯೆ ಬಗೆಹತಿಸುತ್ತೇನೆ ಅಂತ ಹೇಳಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತಾನೆ ಅಂದಿದ್ದರು. ಹತ್ತು ವರ್ಷದಲ್ಲಿ 20 ಲಕ್ಷ ಕೂಡ ಕೊಡಲಿಲ್ಲ. ಯಾರಾದರೂ ಕೆಲಸ ಕೇಳಿದರೆ ಪಕೋಡ ಮಾರುವುದಕ್ಕೆ ಕಳಿಸಿ ಅಂತಾರೇ. ಎರಡು ಕೋಟಿ ಉದ್ಯೋಗ ಕೊಡ್ತೀನಿ ಅಂದವರು ಪಕೋಡ ಮಾರೋಕೆ ಹೋಗಿ ಅಂತಾರೇ ಇದು ಬೇಜಾವಾಬ್ದಾರಿ ಹೇಳಿಕೆ. ಇದು ನಾವು ಚುನಾವಣಾ ಪ್ರಚಾರಕ್ಕೊಸ್ಕರ ಹೇಳುವ ಮಾತಲ್ಲ ಅಂತಾನೂ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಹಾಗಾದ್ರೆ ಸಿಎಂ ಸಿದ್ದರಾಮಯ್ಯ ಹೇಳಿದಂತೆ ಹೆಚ್ಡಿ ದೇವೇಗೌಡ್ರು ಮತ್ತು ಪ್ರಧಾನಿ ಮೋದಿ ಚುನಾವಣಾ ಟೈಮಲ್ಲಿ ಜನರಿಗೆ ಹಸಿ ಹಸಿ ಸುಳ್ಳುಗಳನ್ನ ಹೇಳ್ತಾಯಿದ್ದಾರಾ?ಮೈಸೂರು ಕೊಡಗು ಲೋಕಸಭಾ ಕ್ಷೇತ್ರ.. ಸಿಎಂ ಸಿದ್ರಾಮಯ್ಯನವರ ತವರು ಲೋಕಸಭಾ ಕ್ಷೇತ್ರ.. ಈ ಕ್ಷೇತ್ರವನ್ನ ಗೆಲ್ಲಲೇಬೇಕು ಅಂತೇಳಿ ಸಿಎಂ ಸಿದ್ರಾಮಯ್ಯ ಪಣತೊಟ್ಟಿದ್ದಾರೆ. ಅದಕ್ಕಾಗಿ ಅಂತಾನೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಒಕ್ಕಲಿಗ ಬ್ರಹ್ಮಾಸ್ತ್ರವನ್ನ ಹೂಡಿದೆ. ಎಂ ಲಕ್ಷ್ಮಣ್ ಅವರನ್ನ ಅಖಾಡಕ್ಕಿಳಿಸಿರೋದು BJPಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಾಗಾದ್ರೆ ಇಲ್ಲಿ ಬಿಜೆಪಿ ಮಾಡಿದ ಆ 1 ತಪ್ಪಾದ್ರೂ ಏನ್ ಗೊತ್ತಾ.?
ಮೈಸೂರು ಕೊಡಗು ಲೋಕಸಭಾ ಕ್ಷೇತ್ರ.. ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಕಣಕ್ಕಿಳಿಸಿದ್ರೆ, ಕಾಂಗ್ರೆಸ್ ಒಕ್ಕಲಿಗ ಮುಖಂಡ ಎಂ ಲಕ್ಷ್ಮಣ್ ಅವರನ್ನ ಕಣಕ್ಕಿಳಿಸಿದೆ. ಆ ಮೂಲಕ ಈ ಭಾಗದ ಒಕ್ಕಲಿಗರ ಅಸ್ಮಿತೆಯನ್ನ ಬಡಿದೆಬ್ಬಿಸೋ ಕೆಲಸಕ್ಕೆ ಕೈ ಹಾಕಿದೆ. ಯಾಕಂದ್ರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಸೋಲು ಗೆಲುವಿನಲ್ಲಿ ನಿರ್ಣಾಯಕವಾಗಿವೆ. ಹೀಗಿದ್ರೂ ಬಿಜೆಪಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿಸಿ, ಅವರ ಬದಲಿಗೆ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ಕೊಟ್ಟಿದೆ. ಆ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ನಿಜ ಹೇಳ್ಬೇಕು ಅಂದ್ರೆ ಬಿಜೆಪಿ ಇಂಥಾ ಎಡವಟ್ಟು ಮಾಡುತ್ತೆ ಅಂತೇಳಿ ಖುದ್ದು ಕಾಂಗ್ರೆಸ್ ನಾಯಕರು ಕೂಡ ಎಕ್ಸ್ಪೆಕ್ಟ್ ಮಾಡಿರ್ಲಿಲ್ಲ. ಬಿಜೆಪಿಯ ಈ ತಪ್ಪಿನಿಂದಾಗಿ ಕಾಂಗ್ರೆಸ್ಗೆ ರೊಟ್ಟಿ ತಾನಾಗೇ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.
ಇನ್ನ ಇಲ್ಲಿ ಕಾಂಗ್ರೆಸ್ಗೆ ಗೆಲುವು ಸುಲಭ ಅನ್ನೋದು ಗೊತ್ತಿದ್ರೂ, ಸಿಎಂ ಸಿದ್ರಾಮಯ್ಯ ತಮ್ಮ ತವರ ಜಿಲ್ಲೆಯಲ್ಲಿ ಗೆಲ್ಲೋದನ್ನ ಪ್ರತಿಷ್ಠೆಯಾಗಿ ತಗೊಂಡಿದ್ದಾರೆ. ಇದೇ ಕಾರಣಕ್ಕೆ ವಾರಗಟ್ಟಲೆ ಮೈಸೂರಲ್ಲೇ ಇದ್ದು ಅಭ್ಯರ್ಥಿ ಪರ ಮತಬೇಟೆಗೆ ಇಳಿದಿದ್ದಾರೆ. ಹಲವು ರಣತಂತ್ರ ಹೆಣೆಯುತ್ತಿದ್ದಾರೆ. ಇದು ಬಿಜೆಪಿಗೆ ತಲೆ ನೋವಾಗಿದೆ. ಇದರ ನಡುವೆ ಒಕ್ಕಲಿಗ ಸಮುದಾಯ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರಿಗೆ ದೊಡ್ಡ ಶಾಕ್ ನೀಡಿದೆ. ಅದುವೇ ಒಕ್ಕಲಿಗ ಬ್ರಹ್ಮಾಸ್ತ್ರ.. ಬಿಜೆಪಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿಸಿದ್ದಕ್ಕೆ ಈ ಭಾಗದ ಒಕ್ಕಲಿಗ ಸಮುದಾಯ ಕೊತಕೊತ ಕುದಿಯುತ್ತಿತ್ತು. ಇದನ್ನು ಕಾಂಗ್ರೆಸ್ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದರ ಪರಿಣಾಮವಾಗಿಯೇ ಒಕ್ಕಲಿಗ ಸಮುದಾಯ ಬಿಜೆಪಿ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ.
ಹೌದು ವೀಕ್ಷಕರೇ, ಮೈಸೂರು ಒಕ್ಕಲಿಗ ಸಂಘದ ಅಧ್ಯಕ್ಷ ಮರಿ ಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿದ್ದಾರೆ. ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಒಕ್ಕಲಿಗ ಸಮುದಾಯದಿಂದ ಬಂದಿದ್ದರಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಒಕ್ಕಲಿಗರನ್ನು ವ್ಯವಸ್ಥಿತವಾಗಿ ಬದಿಗೊತ್ತಲಾಗಿದೆ ಮತ್ತು ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, “ಎಂ ಲಕ್ಷ್ಮಣ್ ಅವರು ಕಾಂಗ್ರೆಸ್ ಅಭ್ಯರ್ಥಿ ಅನ್ನೋ ಕಾರಣಕ್ಕೆ ನಾವು ಅವರನ್ನು ಬೆಂಬಲಿಸುತ್ತಿಲ್ಲ. ಬದಲಿಗೆ ಲಕ್ಷ್ಮಣ್ ಅವರು ಒಕ್ಕಲಿಗರು, ಅವರು ಒಕ್ಕಲಿಗರ ಸಂಘದಿಂದಲು ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಪಕ್ಷಾತೀತವಾಗಿ ಒಕ್ಕಲಿಗ ಅಭ್ಯರ್ಥಿಗೆ ಮತ ನೀಡುತ್ತೇವೆ ಅಂತೇಳಿದ್ದಾರೆ.
ನಿಮಗೆ ಗೊತ್ತಿರ್ಲಿ, ಮೈಸೂರು ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸುತ್ತಿದ್ದಂತೆ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಈ ಭಾಗದ ಕೆಲ ಬಿಜೆಪಿ ನಾಯಕರು ಅಸಲಿಗೆ ಎಂ ಲಕ್ಷ್ಮಣ್ ಅವರು ಒಕ್ಕಲಿಗರೇ ಅಲ್ಲ ಅಂತೇಳಿ ವಾದ ಮಾಡಿದ್ರು. ಆದರೆ ಇದಕ್ಕೆ ತಕ್ಕ ತಿರುಗೇಟು ಕೊಟ್ಟಿದ್ದ ಸಿದ್ರಾಮಯ್ಯ, ಎಂ ಲಕ್ಷ್ಮಣ್ ಅವರು 100ಕ್ಕೆ 200 ಪರ್ಸೆಂಟ್ ಒಕ್ಕಲಿಗ ಅಂತೇಳಿ ಒತ್ತಿ ಒತ್ತಿ ಹೇಳಿದ್ರು. ಲಕ್ಷ್ಮಣ್ ಒಕ್ಕಲಿಗರಾಗಿ ಹುಟ್ಟಿ ಕುವೆಂಪು ಆಶಯ ಪಾಲಿಸುತ್ತಿದ್ದಾರೆ ಅಂತೇಳಿದ್ರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಮತದಾರರು ಇದ್ದಾರೆ. ಅವರಲ್ಲಿ 4 ಲಕ್ಷಕ್ಕೂ ಹೆಚ್ಚು ಒಕ್ಕಲಿಗರಿದ್ದು, ಆ ಬಳಿಕ ಲಿಂಗಾಯತರು, ದಲಿತರು ಮತ್ತು ಒಬಿಸಿ ಮತದಾರರಿದ್ದಾರೆ. ಅಲ್ಲದೆ, 1.5 ಲಕ್ಷ ಮುಸ್ಲಿಂ ಸಮುದಾಯದ ಮತಗಳು ಮತ್ತು 1 ಲಕ್ಷ ಬ್ರಾಹ್ಮಣ ಮತದಾರರಿದ್ದಾರೆ.
ಇಲ್ಲಿ ಕಾಂಗ್ರೆಸ್ 4 ಲಕ್ಷ ಒಕ್ಕಲಿಗ, ಮುಸ್ಲಿಂ, ದಲಿತ, ಒಬಿಸಿ ಮತಗಳನ್ನ ಸೆಳೆದ್ರೆ ಈ ಮತಗಳೇ 8 ಲಕ್ಷದ ಗಡಿ ದಾಟುತ್ತೆ. ಹೀಗಾಗಿ ಈ ಮತಗಳ ಜೊತೆಗೆ ಇತರೆ ಸಮುದಾಯಗಳ ಮತಗಳನ್ನೂ ಸೆಳೆದ್ರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಗೆದ್ದು ಬೀಗೋದು ಗ್ಯಾರಂಟಿ.