ದಾವಣಗೆರೆ : ರೈತರ ಬಳಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಆಜಾದ್ ನಗರ ಠಾಣೆಯ ಇಬ್ಬರು ಪೊಲೀಸ್ ಪೇದೆಗಳನ್ನು ಲೇಡಿಸಿಂಗಂ ಖ್ಯಾತಿಯ ಉಮಾಪ್ರಶಾಂತ್ ಅಮಾನತುಗೊಳಿಸಿದ್ದಾರೆ.
ಆಜಾದ್ ನಗರ ಠಾಣೆಯ ಸಿಬ್ಬಂದಿಗಳಾದ ಅಂಕಳಪ್ಪ ಮತ್ತು ಮುಬಾರಕ್ ಅಮಾನತುಗೊಂಡವರು. ಇವರಿಬ್ಬರ ಮೇಲೆ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಜಾದ್ ನಗರ ಪೊಲೀಸ್ ನಿರೀಕ್ಷಕರು ನೀಡಿದ ವರದಿ ಮೇರೆಗೆ ನಗರ ಉಪ ವಿಭಾಗ ಡಿವೈಎಸ್ಪಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶಿಫಾರಸ್ಸು ಮಾಡಿದ ಮೇರೆಗೆ ಅಮಾನತುಗೊಂಡಿದ್ದಾರೆ. ಸದರಿ ಮೇಲ್ಕಂಡ ಸಿಬ್ಬಂದಿಗಳ ವಿರುದ್ಧ ಮುಂದಿನ ಇಲಾಖಾ ಶಿಸ್ತು ಕ್ರಮವನ್ನು ಬಾಕಿ ಇರಿಸಿಕೊಂಡು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತಿನಲ್ಲಿ ಇರಿಸಲು ಎಸ್ಪಿ ಉಮಾಪ್ರಶಾಂತ್ ಆದೇಶಿಸಿರುತ್ತಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ
ಏನಿದು ಘಟನೆ
ಆಜಾದ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಬೇತೂರು ರಸ್ತೆಯಲ್ಲಿ ಚೆಕ್ ಪೋಸ್ಟ್ ಗೆ ಇಬ್ಬರು ಪೊಲೀಸ್ ಪೇದೆಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಇವರು ಬೇತೂರು ಕಡೆಯಿಂದ ದಾವಣಗೆರೆ ಮಾರ್ಗವಾಗಿ ಬರುವ ಅಡಕೆ ತುಂಬಿದ ಟ್ರ್ಯಾಕ್ಟರ್ ಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಬಂದಿತ್ತು. ಈ ದೂರು ಬಂದ ಮೇರೆಗೆ ನೇಮಿಸಿದ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದೇ ಅಮಾಯಕ ರೈತರ ವಿರುದ್ಧ ದೌರ್ಜನ್ಯ ಮಾಡಿ ಕರ್ತವ್ಯದಲ್ಲಿ ಅತೀವ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನ ವಹಿಸಿ ಹಾಗೂ ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ ಕಾರಣ ಎಸ್ಪಿ ಅಮಾನತು ಮಾಡಿದ್ದಾರೆ ಎಂಬ ಮಾಹಿತಿ ಇದೆ.