![](https://davangerevijaya.com/wp-content/uploads/2025/01/IMG-20250116-WA0145.jpg)
ಶಿವಮೊಗ್ಗ: ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರು ನಿತ್ಯ ಸ್ಮರಣೀಯರು. ದೇಶದ ರಕ್ಷಣೆಗಾಗಿ ಜೀವವನ್ನೇ ಸಮರ್ಪಿಸುತ್ತಾರೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ, ನಮ್ಮ ಟಿವಿ ನಿರೂಪಕ ಜಿ.ವಿಜಯಕುಮಾರ್ ಹೇಳಿದರು.
ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ನಮ್ಮ ಟಿವಿ ಕಚೇರಿಯಲ್ಲಿ ಯೋಧರಿಗೆ ಗೌರವಿಸಿ ಮಾತನಾಡಿ, ಸೈನಿಕರು ಗಡಿಗಳಲ್ಲಿ ರಕ್ಷಣೆ ಕಾರ್ಯ ನಡೆಸುವ ಕಾರಣದಿಂದ ಇಂದು ನಾವು ದೇಶದೊಳಗೆ ಸುರಕ್ಷಿತವಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಇಪ್ಪತ್ತು ವರ್ಷ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೇನಾ ಅಧಿಕಾರಿ ಮಹಾಬಲೇಶ್ವರ ಹೆಗಡೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತದ ವಾಯುಸೇನೆಯಲ್ಲಿ ಜ್ಯೂನಿಯರ್ ವಾರೆಂಟ್ ಅಧಿಕಾರಿಯಾಗಿ ಕೆಲಸ ಮಾಡಿದ್ದು, ಕಾರ್ಗಿಲ್ ಯುದ್ಧದ ಸಮಯದಲ್ಲಿಯೂ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನನ್ನದಾಗಿತ್ತು ಎಂದರು.
![](https://davangerevijaya.com/wp-content/uploads/2025/01/IMG-20241225-WA0105.jpg)
![](https://davangerevijaya.com/wp-content/uploads/2025/01/IMG-20250125-WA0230.jpg)
ಕೇಂದ್ರ ಸರ್ಕಾರ ಆರಂಭಿಸಿರುವ ಅಗ್ನಿವೀರ್ ಯೋಜನೆ ತುಂಬಾ ಒಳ್ಳೆಯದು. ಯೋಜನೆಯಲ್ಲಿ ತೊಡಗಿಸಿಕೊಂಡು ಸೇನೆಯಲ್ಲಿ ಅಲ್ಪಕಾಲ ಸೇವೆ ಸಲ್ಲಿಸಿದಾಗ ಮುಂದಿನ ಜೀವನದಲ್ಲಿ ಗೌರವಯುತವಾಗಿ ನೆಮ್ಮದಿಯಾಗಿ ಇರಬಹುದು. ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸುತ್ತವೆ ಎಂದು ತಿಳಿಸಿದರು.
ಕಾರ್ಗಿಲ್ ಯುದ್ಧ ಸಮಯದಲ್ಲಿ ಆಗ್ರಾದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಎದುರಿಸಿದ ವಿಶೇಷ ಅನುಭವಗಳನ್ನು ನಿವೃತ್ತ ಸೈನಾ ಅಧಿಕಾರಿ ಮಹಾಬಲೇಶ್ವರ ಹೆಗಡೆ ಹಂಚಿಕೊಂಡರು. ಯುವಜನರು ದೇಶಕ್ಕೆ ಸೇವೆ ಸಲ್ಲಿಸುವ ಮಹತ್ತರ ಕನಸುಗಳನ್ನು ಕಂಡು ಸಾಕಾರಗೊಳಿಸಬೇಕು ಎಂದು ಸಲಹೆ ನೀಡಿದರು. ನಮ್ಮ ಟಿವಿಯ ಶ್ರೀಕಾಂತ್, ರೆಡಿಯೋ ನಿರೂಪಕ ಚೇತನ್ ರಾಯನಹಳ್ಳಿ, ಗಿರೀಶ್, ಜಗದೀಶ್, ಉಮೇಶ್, ನಮ್ಮ ಟಿವಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
![](https://davangerevijaya.com/wp-content/uploads/2025/01/IMG-20250116-WA01462.jpg)
![](https://davangerevijaya.com/wp-content/uploads/2025/01/IMG-20250125-WA0230.jpg)