ಬೆಂಗಳೂರು: ಅವರಿಬ್ಬರು ಪ್ರೀತಿ ಮಾಡಿ ಮದುವೆಯಾಗಿದ್ದರು, ಸುಮಾರು ಒಂಭತ್ತು ವರ್ಷ ಒಟ್ಟಿಗೆ ಇದ್ದರು. ಆದರೆ ಒಂದಿಷ್ಟು ಜಗಳಕ್ಕಾಗಿ ಮನ ನೊಂದ ಪತ್ನಿ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾಗಿದ್ದಾಳೆ.
ಬೆಂಗಳೂರಿನ ಕೊಡಿಗೇಹಳ್ಳಿಯ ಬಾಲಾಜಿ ಲೇಔಟ್ನ ಅಪಾರ್ಟ್ಮೆಂಟ್ ವೊಂದರ ಫ್ಲ್ಯಾಟ್ನಲ್ಲಿ ಈ ಘಟನೆ ನಡೆದಿದೆ. ಗಂಡನಿಗೆ ಪಾಠ ಕಲಿಸುತ್ತೇನೆ ಎಂದ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುತ್ರ ಶ್ರೇಯಾನ್ (6) ಹಾಗೂ ಪುತ್ರಿ ಚಾರ್ವಿ(ಒಂದು ವರ್ಷ ಒಂಬತ್ತು ತಿಂಗಳು) ಕೊಲೆಯಾದವರು. ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ ತಾಯಿ ಕುಸುಮಾ (35) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ತುಮಕೂರು ಜಿಲ್ಲೆಯ ಮಧುಗಿರಿಯ ಸುರೇಶ್ (40) ಅವರು ಯಶವಂತಪುರ ನಿವಾಸಿ ಕುಸುಮಾ ಅವರನ್ನು 2015ರಲ್ಲಿ ವಿವಾಹ ಆಗಿದ್ದರು. ದಂಪತಿ ಬಾಲಾಜಿ ಲೇಔಟ್ನ ಫ್ಲ್ಯಾಟ್ನಲ್ಲಿ ನೆಲಸಿದ್ದರು. ಸುರೇಶ್ ಅವರು ವೈಟ್ಫೀಲ್ಡ್ನ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಚಿಕ್ಕ ಮಕ್ಕಳಿದ್ದ ಕಾರಣಕ್ಕೆ ಕುಸುಮಾ ಅವರು ಕೆಲವು ತಿಂಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ’ ಎಂದು ಮೂಲಗಳು ಹೇಳಿವೆ.
ಸ್ಥಳದಲ್ಲಿ ದೊರೆತ ಮರಣ ಪತ್ರ
ಘಟನಾ ಸ್ಥಳದಲ್ಲಿ ಮರಣ ಪತ್ರ ದೊರೆತಿದೆ. ಅದನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಲಾಗುತ್ತಿದೆ. ‘ನಮ್ಮ ಸಾವಿಗೆ ನಾವೇ ಕಾರಣ. ಅಭಿನಂದನೆಗಳು… ವಿನ್ ಯುವರ್ ಈಗೋ… ಜೀವನ ಪೂರ್ತಿ ಇದು ನೆನಪಿನಲ್ಲಿ ಇರಬೇಕು’ ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮರಣ ಪತ್ರದ ನೈಜತೆ ಪರಿಶೀಲನೆ ಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕುಸುಮಾ ಅವರ ಸಹೋದರ ದೂರು ನೀಡಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ವರದಿ ಬಂದ ಬಳಿಕ ಮಕ್ಕಳ ಸಾವು ಹೇಗಾಯಿತು ಎಂಬುದು ಗೊತ್ತಾಗಲಿದೆ’ ಎಂದಿವೆ.
‘ಬುಧವಾರ ಬೆಳಿಗ್ಗೆ ಸುರೇಶ್ ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸುರೇಶ್ ಅವರೇ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.