ದಾವಣಗೆರೆ : ಎಂಜಿನಿಯರಿಂಗ್ ಓದಿಸುವ ಕನಸನ್ನು ಹೊತ್ತಿರುವ ಪೋಷಕರಿಗೆ ಈಗ ಬಿಗ್ ಶಾಕ್ ಕಾದಿದ್ದು, ಸರಕಾರ ಈಗ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಿದೆ.
ಈಗಾಗಲೇ ಖಾಸಗಿ ಶಾಲೆಗಳ ಶುಲ್ಕ ದರ ಹೆಚ್ಚಳ ಮಾಡಿರುವ ಸರಕಾರ ಈಗ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ದರ ಹಾಗೂ ಕಾಮೆಡ್- ಕೆ ಸೀಟುಗಳ ಶುಲ್ಕವನ್ನು
ಹೆಚ್ಚಳ ಮಾಡಲು ಮುಂದಾಗಿದೆ.
ಕರ್ನಾಟಕ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಸರಕಾರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈಗ ಸರಕಾರ ಅವರ ಒತ್ತಡಕ್ಕೆ ಮಣಿದು ದರ ಹೆಚ್ಚಳಕ್ಕೆ ಅಸ್ತು ಎಂದಿದೆ. ಈ ಕಾರಣದಿಂದ ಪೋಷಕರು ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚುವರಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಖಾಸಗಿ ಕಾಲೇಜು ಹಾಗೂ ಸರ್ಕಾರದ ಮಧ್ಯೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಾರಿಯ ಸಿಇಟಿ (ಸರ್ಕಾರದಿಂದ ನಡೆಸುವ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆ) ಫಲಿತಾಂಶ ಬಂದ ಕೂಡಲೇ ವಿದ್ಯಾರ್ಥಿಗಳು ಇಂಜಿನಿಯರಿAಗ್ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ತಮ್ಮಿಷ್ಟದ ಬ್ರಾಂಚ್ ಗಳಲ್ಲಿ (ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಸಿವಿಲ್ ಇತ್ಯಾದಿ) ಸೀಟು ಪಡೆದು ಓದುವ ಕನಸು ಕಾಣುತ್ತಿದ್ದಾರೆ. ಆದರೆ ಸರಕಾರದ ಈ ನಿರ್ಧಾರ ಪೋಷಕರನ್ನು ಚಿಂತಿಗೀಡು ಮಾಡಿದೆ.
ಸರ್ಕಾರಿಎಂಜಿನಿಯರಿಂಗ್ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಆರ್ಕಿಟೆಕ್ಚರ್ ವಾರ್ಷಿಕ ಶುಲ್ಕ 15 ಸಾವಿರ ಹಾಗೂ ವಿವಿ ಶುಲ್ಕ ಸೇರಿ ಒಟ್ಟು 19,090 ರೂ. ಶುಲ್ಕ ನಿಗದಿಪಡಿಸಿದೆ. ಕೆಲವು ದಿನಗಳ ಹಿಂದೆ ಸರ್ಕಾರವು ಎಂಜಿನಿಯರಿಂಗ್ ಶುಲ್ಕವನ್ನು ಶೇ.8ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ಖಾಸಗಿ ಕಾಲೇಜುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲದೆ ಉಪನ್ಯಾಸಕರಿಗೆ ಸರ್ಕಾರವೆ ಸಂಭಾವನೆ ಭರಿಸಿದರೆ ನಾವು ಶೇ.8ರಷ್ಟು ಶುಲ್ಕ ಹೆಚ್ಚಳಕ್ಕೆ ಸಮ್ಮತಿ ನೀಡುತ್ತೇವೆ ಎಂದು ತಿಳಿಸಿದ್ದರು. ಈ ವಿಚಾರ ಕುರಿತಾಗಿ ಇತ್ತೀಚೆಗೆ ನಡೆದಿದ್ದು ಖಾಸಗಿ ಕಾಲೇಜುಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಶೇ.10ರಷ್ಟು ಶುಲ್ಕ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿದೆ.
ಶೇ.8ರಷ್ಟು ಮಾತ್ರ ಹೆಚ್ಚಿಸಲು ಸರ್ಕಾರ ಪಟ್ಟು ಹಿಡಿದರೆ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸರ್ಕಾರದ ಮನವಿಯನ್ನು ತಿರಸ್ಕರಿಸಿದ್ದವು. ಪರಿಣಾಮ ಶುಲ್ಕ ನಿಗದಿಯಾಗದೆ ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಗೂ ಹಿನ್ನೆಡೆಯಾಗಿತ್ತು.
ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ಇನ್ನಿತರ ಮೆಟ್ರೋಪಾಲಿಟಿನ್ ಸಿಟಿಗಳಲ್ಲಿ ಜೀವನ ಮಾಡುವುದೇ ಕಷ್ಟ ಎನ್ನುವ ಕಾಲಘಟ್ಟದಲ್ಲಿ ಸರಕಾರದ ನಿರ್ಧಾರ ಪೋಷಕರನ್ನು ಕೆರಳಿಸಿದೆ. ಅದರಲ್ಲೂ ಮಧ್ಯಮ, ಕೆಳವರ್ಗದ ಜನರು ಈ ಬಗ್ಗೆ ಹೆಚ್ಚು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಸೀಟು ಸಿಗದ ವಿದ್ಯಾರ್ಥಿಗಳು, ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದಡಿ ಸೀಟು ಪಡೆಯಬೇಕಿರುತ್ತದೆ. ಅಲ್ಲದೇ ತಮ್ಮ ಮಕ್ಕಳನ್ನು ದೂರ ಕಳಿಸುವ ಬದಲು ಸಮೀಪವೇ ಕಳಿಸೋಣ ಎಂದು ಹಲವರು ತೀರ್ಮಾನ ಮಾಡಿರುತ್ತಾರೆ. ಆದರೆ, ಅಲ್ಲಿಯೂ ಸೀಟು ಸಿಗದ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳ ಕೋಟಾದಡಿ ಸೀಟು ಪಡೆಯಬೇಕಾಗುತ್ತದೆ. ಸರ್ಕಾರಿ ಸೀಟುಗಳನ್ನು ಪಡೆದಾಗ ಆಗುವ ಶುಲ್ಕಕ್ಕೆ ಹೋಲಿಸಿದರೆ ಖಾಸಗಿ ಕಾಲೇಜುಗಳ ಕೋಟಾದಡಿ ಖರ್ಚಾಗುವ ಶುಲ್ಕದ ಪ್ರಮಾಣ ಈಗಲೇ ಶೇ. 20ರಷ್ಟು ಶುಲ್ಕ ಹೆಚ್ಚಾಗುತ್ತದೆ. ಒಟ್ಟಾರೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಸರಕಾರ ಸಿಹಿ ನೀಡಿದ್ದು, ಪೋಷಕರಿಗೆ ದರದ ಬರೆ ಎಳೆದಿದೆ.