ದಾವಣಗೆರೆ: ಲೋಕಸಭಾ ಕ್ಷೇತ್ರಕ್ಕೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿದ ನಂತರ ಅಂತಿಮ ನಿರ್ಧಾರಕ್ಕೆ ಬಂದಿದ್ದು, 12 ರಂದು ಮೊದಲ ನಾಮಪತ್ರ ಸಲ್ಲಿಕೆ. 18ರಂದು ಅದ್ದೂರಿ ಯಾಗಿ ಬೆಂಬಲಿಗರ ಜೊತೆ ಸೇರಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಾಗುತ್ತಿದ್ದು, ಯಾವುದೇ ಕಾರಣ ಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ 800ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಿದ್ದೇನೆ. 7ಲಕ್ಷಕ್ಕೂ ಮತದಾರರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಅವರೆಲ್ಲರೂ ನನ್ನನ್ನು ಚುನಾವಣೆಗೆ ನಿಲ್ಲುವಂತೆ ಸೂಚನೆ ನೀಡಿದ್ದಾರೆ. ಮತದಾರರು, ಕ್ಷೇತ್ರದ ಯುವ ಪೀಳಿಗೆಯ ಆಶಯದಂತೆ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದು ತಿಳಿಸಿದರು.
ನಾನು ಯಾವ ಮುಲಾಜಿಗೂ ಮಣಿಯುವುದಿಲ್ಲ, ಹಣ ಕೊಡುತ್ತಾರೆ ಎಂದು ನನ್ನ ಸ್ವಾಭಿಮಾನ ಮಾರಾಟ ಮಾಡಿಕೊಳ್ಳೋದಿಲ್ಲ. ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಜಿಲ್ಲೆಯ ಎರಡು ಪ್ರಭಲ ಕುಟುಂబ ರಾಜಕಾರಣದ ವಿರುದ್ಧ ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ. ದಾವಣಗೆರೆಯಲ್ಲಿ ಎರಡು ಕುಟುಂಬಗಳ ಕೈಯಲ್ಲಿಬಎರಡು ಪಕ್ಷಗಳ ರಾಜಕೀಯ ಇದೆ. ಕಾಂಗ್ರೆಸ್ ಶಾಮನೂರು ಫ್ಯಾಮಿಲಿ ಕೈಯಲ್ಲಿದ್ದರೆ ಬಿಜೆಪಿ ಜಿಎಂ ಸಿದ್ದೇಶ್ವರ್ ಫ್ಯಾಮಿಲಿ ಕೈಯಲ್ಲಿ ಇದೆ ಎಂದು ಕುಟುಕಿದರು.
ವಿನಯ್ ಕುಮಾರ್ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ನ ಅಹಿಂದ ಮತಗಳು ಛಿದ್ರವಾಗುವ ಸಾದ್ಯತೆ ಹೆಚ್ಚಿದೆ. ಅಹಿಂದ ವರ್ಗಕ್ಕೆ ಶಾಮನೂರು ಫ್ಯಾಮಿಲಿ ಯಿಂದ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅಹಿಂದ ವರ್ಗದ ಮುಖಂಡರು ಕೂಡ ವಿನಯ್ ಕುಮಾರ್ ಗೆ ಸಾಥ್ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ನಿರಂಜಾನಾನಂದಪುರಿ ಸ್ವಾಮೀಜಿ, ಎಸ್ಎಸ್ ಮಲ್ಲಿಕಾರ್ಜುನ್ ಸಂಧಾನ ಮಾಡಿದರು. ಆದರೆ, ನಾನು ಎರಡು ದಿನಗಳ ಕಾಲಾವಕಾಶ ನೀಡುವಂತೆ ಸಮಯ ಕೇಳಿದ್ದೆ. ಆದರೆ, ನಾನು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಅಭಿಪ್ರಾಯ ಸಂಗ್ರಹಿಸಿದ್ದು, ಅವರ ಆಸೆಯಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದು, ಇಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು.