
ನಂದೀಶ್ ಭದ್ರಾವತಿ, ದಾವಣಗೆರೆ
ರಾಜಧಾನಿ ಬೆಂಗಳೂರು ಬಿಟ್ರೇ ಅತಿ ದೊಡ್ಡ ಊರು ದಾವಣಗೆರೆ, ಇಲ್ಲಿ ದಿನಕ್ಕೊಂದು ಕ್ರೈಂ ನಡೆಯುತ್ತದೆ, ಅಲ್ಲದೇ ವಿಭಿನ್ನ ನೋಟ, ವಿಐಪಿ ಭದ್ರತೆ, ಸರಕಾರದ ಸೂಚನೆಗಳು, ನಾನಾತರಹದ ಮೀಟಿಂಗ್ ಗಳು, ಈ ನಡುವೆ ರಾಜಕಾರಣಿಗಳ ಒತ್ತಡ ಜತೆಗೆ ಸಂಸಾರದ ಭಾರ.. ಹಗಲು, ರಾತ್ರಿ, ರಿಂಗಣಿಸುವ ಪೋನ್…ಇಷ್ಟೇಲ್ಲ ಚಕ್ರವ್ಯೂಹ ಭೇದಿಸುವ ಮಹಿಳಾ ಅಧಿಕಾರಿ ಜನರ ಕಣ್ಣಲ್ಲಿ ಪ್ರಸ್ತುತ ವಿಭಿನ್ನವಾಗಿ ಕಾಣುತ್ತಾರೆ.
ಹೌದು..ಒಬ್ಬ ಮಹಿಳೆಯಾಗಿ ಇಡೀ ಜಿಲ್ಲೆಯನ್ನು ರಕ್ಷಣೆ ಮಾಡುತ್ತಿರುವ ಮಹಿಳಾ ರಕ್ಷಣಾಧಿಕಾರಿ ಹೆಸರು ಉಮಾ ಪ್ರಶಾಂತ್....ಮೂಲತಃ ಮೈಸೂರಿನವರಾದ ಉಮಾ, 2010ನೇ ಬ್ಯಾಚ್ನ ಕೆಎಸ್ಪಿಎಸ್ ಅಧಿಕಾರಿ. ಬೆಂಗಳೂರಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳ, ಅನಂತರ ಕುಣಿಗಲ್ ಹಾಗೂ ಕಾರವಾರದಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರಿನಲ್ಲಿ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಮಹಿಳಾ ಪೊಲೀಸ್ అధిಕಾರಿಯಾಗಿದ್ದು, ಸಂಚಾರ ನಿಯಂತ್ರಣ, ಭದ್ರತೆಯಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ. ನಂತರ ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅವರು ದತ್ತಪೀಠ ವಿವಾದ ಸೇರಿದಂತೆ ಅನೇಕ ಕಮ್ಯೂನಿಯಲ್ ಪ್ರಕರಣ ಭೇದಿಸಿದ್ದಾರೆ. ಸದ್ಯ ದಾವಣಗೆರೆ ಎಸ್ಪಿಯಾಗಿ ಹೊಸ ಹೊಸ ತಂತ್ರಜ್ಞಾನ ಬಳಸಿ ಸುರಕ್ಷತ ಆಡಳಿತ ನಡೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ನಗರದಲ್ಲಿ ಪ್ರಥಮ ಬಾರಿಗೆ ಮಹಿಳಾ ಪೊಲೀಸ್ ಬೀಟ್, ಖೋಟಾನೋಟು ತಯಾರು ಮಾಡುತ್ತಿದ್ದ ಕಳ್ಳರ ಬಂಧನ, ಒಂಟಿ ಮನೆ ಕಳ್ಳನ ಭೇದಿಸುವಿಕೆ, ಪೊಲೀಸರ ಮೇಲೆ ರಾಜಕಾರಣಿಗಳು ವಾಗ್ದಾಳಿ ನಡೆಸಿದ ವೇಳೆ ಎಫ್ ಐಆರ್ ದಾಖಲು, ಸ್ವತ್ತುಗಳನ್ನು ಹಿಂತಿರುಗಿಸುವಿಕೆ, 112 ಜಾರಿಗೆ ಶ್ರಮ, ರಸ್ತೆ ಸುರಕ್ಷತಾ ಸಪ್ತಾಹ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ, ಇಸ್ಟೀಟ್ ಪ್ರಕರಣಕ್ಕೆ ಬ್ರೇಕ್ ಹೀಗೆ ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ಕಾಪಾಡಲು ಒಬ್ಬ ಮಹಿಳೆಯಾಗಿ ಅವರಲ್ಲಿರುವ ಜ್ಞಾನ, ಅನುಭವ ಆಧಾರದ ಮೇಲೆ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ.ಅಪರಾಧ ಕೃತ್ಯಗಳ ನಿಯಂತ್ರಣ ಮತ್ತು ಪತ್ತೆಗೆ ಕ್ರಮ ಹಾಗೂ ಸುಗಮ ಸಂಚಾರ ನಿರ್ವಹಣೆಗೆ ಪ್ರಥಮ ಆದ್ಯತೆ ನೀಡಿರುವ ಇವರು, ಜನರ. ಸಹಕಾರ ಕೂಡ ಅಷ್ಟೇ ಅಗತ್ಯ, ಅದು ಸಿಕ್ಕಿದಾಗ ಮಾತ್ರ ಕೆಲಸವನ್ನು ಸಮರ್ಪಕವಾಗಿ ಹಾಗೂ ದಕ್ಷವಾಗಿ ನಿರ್ವಹಿಸುವುದು ಸಾಧ್ಯ ಎಂಬುದು ಅವರ ನಂಬಿಕೆ.
ಇಸ್ಪೀಟ್ , ಓಸಿ ಆಟಕ್ಕೆ ಕಡಿವಾಣ
ದಾವಣಗೆರೆ ಎಸ್ಪಿ ಉಮಾಪ್ರಶಾಂತ ಮೊದಲು ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಟೀಟ್ ಆಟಕ್ಕೆ ಬ್ರೇಕ್ ಹಾಕಿದರು. ಸ್ಕಿಲ್ ಗೇಮ್, ಇಸ್ಪೀಟ್ ಕ್ಲಬ್, ವೈಶ್ಯವಾಟಿಕೆ ಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆದರೂ ಅವುಗಳನ್ನು ಮಟ್ಟ ಹಾಕಲು ಶ್ರಮಿಸಿದ್ದಾರೆ.
ಲೇಡಿ ಸಿಂಗಂ ಎಂದೇ ಖ್ಯಾತಿ
ಎಸ್ಪಿ ಉಮಾಪ್ರಶಾಂತ್ ಯಾವುದೇ ಘಟನೆ ನಡೆದರೂ ಶೀಘ್ರವೇ ಸ್ಥಳಕ್ಕೆ ಧಾವಿಸಿ ಸೀನ್ ಆಫ್ ಕ್ರೈಂ ವೀಕ್ಷಣೆ ಮಾಡುವರು. ಅಲ್ಲದೇ ಅಪರಾಧಿಗಳ ಎಡೆಮುರಿ ಕಟ್ಟುವಲ್ಲಿ ತಮ್ಮದೇ ಆದ ತಂತ್ರ ಎಣಿಯುವರು. ಇನ್ನು ಅಕ್ರಮ ಚಟುವಟಿಕೆಗಳು ಕಂಡು ಬಂದ ತಕ್ಷಣವೇ ಕಡಿವಾಣ ಹಾಕುವರು. ಅಲ್ಲದೇ ಈ ಕ್ರೈಂ ಹೀಗೆ ಆಗಿದೆ ಎಂದು ಹೇಳುವ ಚಾಣಾಕ್ಷತೆ ಹೊಂದಿರುವವರಾಗಿದ್ದಾರೆ. ಅಲ್ಲದೇ ಧೈರ್ಯವಂತ ಮತ್ತು ನಿಷ್ಠುರ ಮಹಿಳಾ ಪೊಲೀಸ್ ಅಧಿಕಾರಿಗಳಲ್ಲಿ ಇವರು ಕೂಡಾ ಒಬ್ಬರು. ಆದ್ದರಿಂದ ‘ಲೇಡಿ ಸಿಂಗಮ್’ ಎಂದೇ ಇವರನ್ನು ಬಣ್ಣಿಸಲಾಗುತ್ತಿದೆ. ರಾಜಕೀಯ ಅಥವಾ ಇನ್ನಾವುದೇ ಒತ್ತಡದ ಮಧ್ಯೆಯೂ ತಮ್ಮ ಕರ್ತವ್ಯವನ್ನು ನಿಭಾಯಿಸುವ ಮಹಿಳಾ ಪೊಲೀಸ್ ಅಧಿಕಾರಿಗಳಲ್ಲಿ ಇವರು ಒಬ್ಬರು. ಒಟ್ಟಾರೆ ಎದುರಾದ ಎಲ್ಲ ಅಪಸವ್ಯಗಳನ್ನು ಮೀರಿ ತಮ್ಮ ಕರ್ತವ್ಯವನ್ನು ಮೆರೆಯುವುದು ಉಮಾಪ್ರಶಾಂತ ವಿಶೇಷ.
ಕರ್ತವ್ಯ ಜತೆ ಸಂಸ್ಕಾರ, ಸಂಸ್ಕೃತಿ
ಎಸ್ಪಿ ಉಮಾಪ್ರಶಾಂತ್ ಕೇವಲ ಎಸ್ಪಿ ಆಗಿಲ್ಲ, ಸಂಸ್ಕೃತಿ, ಸಂಸ್ಕಾರವನ್ನು ರೂಡಿಸಿಕೊಂಡಿದ್ದಾರೆ. ಒಬ್ಬ ಗೃಹಿಣಿಯಾಗಿ ಸಾಮಾನ್ಯರಂತೆ ಸಂಸ್ಕಾರವಂತರಾಗಿದ್ದಾರೆ. ಸುತ್ತೂರು ಮಠದ ಭಕ್ತೆ ಕೂಡ ಆಗಿದ್ದು ಹಬ್ಬ, ಹರಿದಿನಗಳಲ್ಲಿ ಎಲ್ಲರಂತೆ ಸಾಂಪ್ರದಾಯಕವಾಗಿ ಮನೆಯಲ್ಲಿ ಇರುತ್ತಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಪೊಲೀಸ್ ಸಿಬ್ಬಂದಿಗೆ ಎಸ್ಪಿ ಮಾಡಿದ ಕೆಲಸವೇನು?
ಎಸ್ಪಿ ಉಮಾಪ್ರಶಾಂತ್ ತನ್ನ ಅಡಿಯಲ್ಲಿ ಬರುವ ಸಿಬ್ಬಂದಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅದಕ್ಕಾಗಿ ಅವರು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಮಲೆಬೆನ್ನೂರಿನಲ್ಲಿ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಕ್ವಾಟರ್ಸ್ ಮೇಳ ಹಮ್ಮಿಕೊಂಡಿದ್ದು, ಪೊಲೀಸ್ ಸಿಬ್ಬಂದಿಗಳ ಕುಟುಂಬದ ಜತೆ ಔತಣ ಕೂಟ ಏರ್ಪಡಿಸಿದ್ದರು. ಅಲ್ಲದೇ ದಾವಣಗೆರೆ ಪೊಲೀಸ್ ವಸತಿ ಗೃಹದಲ್ಲಿನ ಕುಟುಂಬದ ಜತೆ ದೀಪಾವಳಿ ಆಚರಣೆ ಮಾಡಿದ್ದರು. ಇನ್ನು ಮಹಿಳಾ ಸಿಬ್ಬಂದಿಗೆ ಕಾರ್ಯಾಗಾರ, ಅವರ ನೋವಿಗೆ ಸ್ಪಂದನೆ, ಅವರ ಆರೋಗ್ಯಕ್ಕಾಗಿ ಯೋಗ, ಜುಮ್ಮಾ ಡ್ಯಾನ್ಸ್, ಯುರೋಬಿಕ್ ಹೀಗೆ ಸಿಬ್ಬಂದಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ.
ಗ್ರಾಮಗಳಿಗೆ ಹೊರಟ ಮೊದಲ ಮಹಿಳಾ ಎಸ್ಪಿ
ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಟ ಮಹಿಳಾ ಎಸ್ಪಿ ಉಮಾ ಪ್ರಶಾಂತ್ ಆಗಿದ್ದು, ಗ್ರಾಮಗಳಿಗೆ ಹೋಗಿ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಅದರಲ್ಲೂ ದಲಿತ ಸಮುದಾಯದ ಕಷ್ಟ, ಕಾರ್ಪಣ್ಯಗಳನ್ನು ಕೇಳಿ ಅವುಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕೆಳ ಹಂತದ ಸಿಬ್ಬಂದಿಗಳ ಜತೆ ಆಗಾಗ ಮೀಟಿಂಗ್ ತಗೊಂಡು ಸಮಸ್ಯೆ ಬಗೆಹರಿಸುವಲ್ಲಿ ಈ ಮಹಿಳಾ ಎಸ್ಪಿ ಸಫಲರಾಗಿದ್ದಾರೆ. ಒಟ್ಟಾರೆ ಮಹಿಳಾ ಎಸ್ಪಿಯಾಗಿ ಇಡೀ ಜಿಲ್ಲೆಯನ್ನು ಪೀಸ್ ಪೂಲ್ ಆಗಿ ಇಟ್ಟಿದ್ದಾರೆ…ಇವರ ಕಾರ್ಯಕ್ಕೆ ಹ್ಯಾಟ್ಸ್ ಆಫ್.