ಚಿತ್ರದುರ್ಗ (ನಾಯಕನಹಟ್ಟಿ) : ಚಳ್ಳಕೆರೆ ತಾಲೂಕಿನ ಕರಿಬಸವೇಶ್ವರ 101 ನೇ ಕಾರ್ತಿಕೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ತೀಕೋತ್ಸವದ ಪ್ರಯುಕ್ತ ಬೆಳಗಿನಿಂದಲೇ ಚಳ್ಳಕೆರೆ, ಆಂಧ್ರ, ಚಿತ್ರದುರ್ಗ, ಬೆಂಗಳೂರು, ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು. ದೇವಸ್ಥಾನ ಹಾಗೂ ಊರನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಬೆಳಗ್ಗೆ 11.30 ಕ್ಕೆ ರಥ ಎಳೆಯಲಾಯಿತು, ನಂತರ ರಥವು ಸುಮಾರು ಎರಡು ಕಿ.ಲೋ.ಮಿಟರ್ ನಷ್ಟು ರಥ ಸಂಚಾರ ಮಾಡಿತು.
ಗ್ರಾಮದ ಮುಖ್ಯಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿ ಗ್ರಾಮದರ್ಶನ ಮೆರವಣಿಗೆ ಜರುಗಿತು. ದೇವಾಲಯದ ಆವರಣದಲ್ಲಿ ಎಣ್ಣೆ ದೀಪ ಬೆಳಗಿಸಿದ ಭಕ್ತರು ಭಕ್ತಿ ಸಮರ್ಪಿಸಿದರು. ದೇವಾಲಯ ಹಾಗೂ ರಾಜಬೀದಿಯನ್ನು ವಿದ್ಯುತ್ ದೀಪಗಳಿಂದ, ಮೂಲ ಕರಿಬಸವೇಶ್ವರ ವಿಗ್ರಹಕ್ಕೆ ಹೂವುಗಳಿಂದ ಅಲಂಕರಿಸಲಾಗಿತ್ತು. ಜಾತ್ರೆಯಲ್ಲಿ ಆಟಿಕೆ ಸಾಮಾನು, ಬಳೆ, ಐಸ್ ಕ್ರೀಂ, ಅಂಗಡಿಗಳು ಗಮನ ಸೆಳೆದವು.
ಚುಮು ಚುಮು ಚಳಿ ನಡುವೆ ಭಕ್ತರು ದೇವರ ದರ್ಶನ ಪಡೆದರು. ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಮೂಡಿತ್ತು. ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.ಕಾರು, ಆಟೊ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಭರಾಟೆ, ತೆಂಗಿನಕಾಯಿ, ಹೂ ಹಣ್ಣಿನ ವ್ಯಾಪಾರ ಹೆಚ್ಚಾಗಿತ್ತು. ದೇವಾಲಯ ಸಮಿತಿಯಿಂದ ಅನ್ನ ಸಂತರ್ಪಣೆ ನಡೆಯಿತು.ಪೊಲೀಸರು ಭದ್ರತೆ ಒದಗಿಸಿದ್ದರು.
55 ಸಾವಿರಕ್ಕೆ ಮುಕ್ತಿಬಾವುಟ : ಕರಿಬಸವೇಶ್ವರ ರಥಕ್ಕೆ ಸುಮಾರು ಲಕ್ಷ ರೂ.ಹೂವಿನ ಹಾರಗಳನ್ನು ಹಾಕಲಾಗಿತ್ತು. ನಂತರ ಬಾವುಟವನ್ನು ಹರಾಜು ಹಾಕಲಾಯಿತು. 55 ಸಾವಿರ ರೂ.ಗೆ ಮುಕ್ತಿ ಬಾವುಟ ಹರಾಜು ಮಾಡಲಾಯಿತು. ಪುಟ್ಟಮ್ಮಜ್ಜಿ ಮಲ್ಲಪ್ಪರ ಮಗ ಮುಕ್ತಿ ಬಾವುಟ ತೆಗೆದುಕೊಂಡರು.
ದಿನದಿಂದ ದಿನಕ್ಕೆ ಬೆಳೆಯುತ್ತಿದೆ ನಂದಿ ಮೂರ್ತಿ
ಚಳ್ಳಕೆರೆ ತಾಲೂಕಿನ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಇರುವ ನಂದಿ ಮೂರ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಮೂರ್ತಿ ಬೆಳೆಯುತ್ತಿದೆ. ಒಮ್ಮೆ ಒಂದು ಬಾರಿ ಈ ಮೂರ್ತಿ ನೋಡಿದರೆ, ಮುಂದಿನ ವರ್ಷಕ್ಕೆ ಸಣ್ಣದಾಗಿ ಈ ಮೂರ್ತಿ ಬೆಳೆಯುತ್ತಿದೆ. ಅಲ್ಲದೇ ಇಷ್ಟಾರ್ಥಗಳನ್ನು ಈ ದೇವರು ಈಡೇರಿಸಲಿದೆ ಎಂಬುದು ಭಕ್ತರ ಅಭಿಪ್ರಾಯ
ಈ ಸಂದರ್ಭದಲ್ಲಿ ಪ್ರಮುಖರಾದ ತಿಪ್ಪೆಸ್ವಾಮಿ, ಮಹಾಂತಣ್ಣ, ಎ.ಎಚ್.ರುದ್ರಮುನಿ, ಎಲಿಯಾರ್ ತಿಪ್ಪೇಶ್, ಅಂಗಡಿ ಚಂದ್ರಶೇಖರ್, ಪುಟ್ಟಮ್ಮಜ್ಜಿ ಬಾಬಣ್ಣ, ಅಂಗಡಿ ವಿನಯ್, ಹರೀಶ್ , ಪ್ರಭು, ನಾಗೇಶ್ ಸೇರಿದಂತೆ ಇತರರು ಇದ್ದರು.