ದಾವಣಗೆರೆ: ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಂಘದಿಂದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಡಿ.17 ರಂದು ಬೆಳಗ್ಗೆ 10 ಕ್ಕೆ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಗೆ ಅದ್ದೂರಿಯಾಗಿ ಬರಮಮಾಡಿಕೊಳ್ಳಲಾಗುವುದು ಎಂದು ಸಂಘದ ಗೌರವಾಧ್ಯಕ್ಷರಾದ ತುರ್ಚಘಟ್ಟದ ಬಸವರಾಜಪ್ಪ ಹೇಳಿದರು.
ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯು ದೇಶದಾದ್ಯಂತ ಸಂಚರಿಸಿ ಡಿ.17 ರಂದು ಆಗಮಿಸಲಿದೆ.ದೊಡ್ಡಬಾತಿಯಿಂದ ಬೈಕ್ ರ್ಯಾಲಿ ಮೂಲಕ ರಥಯಾತ್ರೆಗೆ ಸ್ವಾಗತ ಕೋರಲಾಗುವುದು.ನಂತರ ಬೀರಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು.ಮೆರವಣಿಗೆಯಲ್ಲಿ ಕುಂಭಮೇಳ,ಕಲಾತಂಡಗಳು ಮೆರುಗು ನೀಡಲಿದ್ದು ಗಾಂಧಿವೃತ್ತದ ಮುಖಾಂತರವಾಗಿ ಜಯದೇವ ವೃತ್ತ ತಲುಪಲಿದೆ.ಬಳಿಕ ಶಿವಯೋಗಿ ಮಂದಿರದಲ್ಲಿ ಸಭೆ ನಡೆಯಲಿದೆ ಎಂದರು.
ದೇಶಾದ್ಯಂತ ಸುಮಾರು 11 ಕೋಟಿಗೂ ಹೆಚ್ಚಿನ ಜನಸಂಖ್ಯೆಯಲ್ಲಿರುವ ಉಪ್ಪಾರರು ವಿವಿಧ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗೆ ಅನುಸಾರವಾಗಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಉಪ್ಪಾರರನ್ನು ಜನ ಜಾಗೃತಿಗೊಳಿಸಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಮಾಜದ ಮುನ್ನಲೆಗೆ ತರಲು ಈ ಜನ ಕಲ್ಯಾಣ ರಥಯಾತ್ರೆಯು ಬಿಹಾರ ರಾಜ್ಯದಿಂದ ಪ್ರಾರಂಭವಾಗಿ ದೆಹಲಿ, ಪಂಜಾಬ್, ಹರಿಯಾಣ, ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಪ್ರವಾಸ ಮಾಡಿ ಡಿ. 9 ರಂದು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಗೆ ಆಗಮಿಸಿದೆ.
ದಾವಣಗೆರೆ ಜಿಲ್ಲೆಗೆ ಡಿ. 17 ರಂದು ಬೆಳಗ್ಗೆ 10.00 ಗಂಟೆಗೆ ಪ್ರವೇಶಿಸುವ ಶ್ರೀ ಭಗೀರಥ ಭಾರತ ಜನಕಲ್ಯಾಣ ಯಾತ್ರೆಯನ್ನು ಶ್ರೀ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಬರಮಾಡಿಕೊಳ್ಳಲಾಗುವುದು ಎಂದರು.
ಈ ವೇಳೆ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ರಾಜ್ಯ ಉಪ್ಪಾರ ಸಂಘಗಳ ಗೌರವ ಅಧ್ಯಕ್ಷರು, ಅಧ್ಯಕ್ಷರು- ಪದಾಧಿಕಾರಿಗಳು, ದಾವಣಗೆರೆ ಜಿಲ್ಲೆಯ ಎಲ್ಲಾ ಜಿಲ್ಲಾ ಸಂಘಗಳ ಗೌರವಾಧ್ಯಕ್ಷರು, ಅಧ್ಯಕ್ಷರು -ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹದಡಿ ರಮೇಶ್,ಗಿರೀಶ್,ಲೋಕೇಶ್,ಎಂ.ಎನ್ ಮಂಜುನಾಥ್, ಹಾಲೇಶ್,ರಾಜಪ್ಪ ಮತ್ತಿತರರಿದ್ದರು.