ನಂದೀಶ್ ಭದ್ರಾವತಿ ದಾವಣಗೆರೆ
ಎಲ್ಲೆಂದರಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಹೊಸ ನಿಯಮವೊಂದನ್ನು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತಂದಿದೆ.
ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಅದರಲ್ಲೂ ಶಾಲೆಯ ಗೇಟ್ ಬಳಿಯೇ ಗೂಡಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಯುವಸಮೂಹ ತಂಬಾಕು ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸಿ ಧೂಮಪಾನ ವ್ಯಸನಿಗಳಾಗಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದರು. ಆದ್ದರಿಂದ ಇದನ್ನು ತಡೆಗಟ್ಟಲು, ಧೂಮಾಪಾನ ಸೇವನೆ ಮಾಡದಂತೆ ಹಾಗೂ ಯುವಕರು ತಂಬಾಕಿನ ದಾಸರಾಗುವುದನ್ನು ತಡೆಯಲು ಸರಕಾರ ಮುಂದಾಯಿತು.
ಸಿಗರೇಟ್ ಮಾರಾಟಕ್ಕೆ ಲೈಸೇನ್ಸ್ ಕಡ್ಡಾಯ
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್ ಹೇಳುವಂತೆ, ಸರ್ಕಾರದ ಆದೇಶದಂತೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ತಂಬಾಕು ಪರವಾನಗಿ ಪಡೆಯಲು ವ್ಯಾಪಾರಸ್ಥರಿಗೆ ಷರತ್ತು ಹಾಗೂ ನಿಬಂಧನೆಗಳನ್ನು ವಿಧಿಸಲಾಗಿದೆ. ಅಲ್ಲದೇ ಸ್ವಂತ ಅಂಗಡಿಗಳನ್ನುಟ್ಟುಕೊಂಡು ಸಿಗರೇಟ್ ವ್ಯಾಪಾರ ಮಾಡುವರು ಪಾಲಿಕೆಯಲ್ಲಿನ ಆರೋಗ್ಯ ಇಲಾಖೆಯಿಂದ ಲೈಸೇನ್ಸ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದುಮಾಹಿತಿ ನೀಡಿದ್ದಾರೆ.
ತಂಬಾಕು ಅಂಗಡಿಗಳಿಗೆ ಫಲಕ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ತಂಬಾಕು ಉತ್ಪನ್ನಗಳ ವ್ಯಾಪಾರಸ್ಥರು ಪಾಲಿಸಬೇಕಾದ ಷರತ್ತು ಮತ್ತು ನಿಬಂಧನೆಗಳ ಕುರಿತು ಮೇಯರ್ ಮೂಲಕ ಬರವಣಿಯಮಾಹಿತಿ ಫಲಕ ನೀಡಲಾಗಿದೆ. ಆರು ತಿಂಗಳ ಕಾಲ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ತಂಬಾಕು ಉತ್ಪನ್ನಗಳ ನಿಯಂತ್ರಣ ಕೋಶದ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ ತರಬೇತಿ ನೀಡಲಾಗಿದೆ.
ದಾವಣಗೆರೆಯಲ್ಲಿ ಮಾತ್ರ ಅನುಷ್ಠಾನ
ಈ ಪರವಾನಗಿಯನ್ನು ರಾಜ್ಯಾದ್ಯಂತ ಅನುಷ್ಠಾನ ಮಾಡಲು ನ.28 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರವನ್ನು ಪೌರಾಡಳಿತದ ನಿರ್ದೇಶನಾಲಯದಿಂದ ಆಯೋಜಿಸಲಾಗಿದೆ. ಪ್ರಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಅನುಷ್ಠಾನ ಮಾಡಲಾಗಿದೆ. ಈ ಪರವಾನಗಿಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವ್ಯಾಪಾರಸ್ಥರು ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಪರವಾನಗಿ ಪಡೆಯಲು ಕೆಲ ನಿಬಂಧನೆಗಳನ್ನು ವಿಧಿಸಲಾಗಿದೆ.
ಏನು ನಿಬಂಧನೆಗಳು
ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ- 2003 ರ ಅನ್ವಯ ವ್ಯಾಪಾರ ಸ್ಥಳದಲ್ಲಿ ಕಡ್ಡಾಯವಾಗಿ 60*45 ಸೆ.ಮೀ ಅಳತೆಯ ಧೂಮಪಾನ ನಿಷೇಧಿಸಿದೆ. ಎಂಬ ನಾಮಫಲಕ ಅಳವಡಿಸಬೇಕು ಹಾಗೂ ಧೂಮಪಾನ ಉತ್ತೇಜಿಸುವ ವಸ್ತುಗಳನ್ನು ಇಡುವಂತಿಲ್ಲ. ಜಾಹೀರಾತು ಮಾಡುವಂತಿಲ್ಲ.18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರಾಟ ಮಾಡಬಾರದು,ಶೈಕ್ಷಣಿಕ ಸಂಸ್ಥೆಯ 100 ಗಜದ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ ಹೀಗೆ ಕೆಲ ನಿಬಂಧನೆಗಳ ಬರವಣಿಯನ್ನು ನೀಡಲಾಗಿದೆ ಎಂದರು.
ಲೈಸೆನ್ಸ್ ಹೇಗೆ ಪಡೆಯ ಬೇಕು
ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ವಾರು ಆರೋಗ್ಯ ನಿರೀಕ್ಷಕರು ಈ ಬರವಣಿಗೆಯ ಅರ್ಜಿ ನಮೂನೆ ನೀಡುತ್ತಾರೆ ನಂತರ ವ್ಯಾಪಾರಸ್ಥರು ಮೂಲ ದಾಖಲಾತಿಗಳಾದ ರೆಂಟ್ ಅಗ್ರಿಮೆಂಟ್ ಅಥವಾ ಕಂದಾಯ ರಸೀದಿ,ಆಧಾರ್ ಕಾರ್ಡ್,ಉದ್ಯಮಪರವಾನಗಿ ಪತ್ರ ,ಎರಡು ಭಾವಚಿತ್ರದೊಂದಿಗೆ ಆಯಾ ವಾರ್ಡ್ ಗೆ ಸಂಬಂಧಿಸಿದ ಆರೋಗ್ಯ ನಿರೀಕ್ಷಕರಿಗೆ ನೀಡಬೇಕು ಅವರು ಆ ಅರ್ಜಿ ಪರಿಶೀಲಿಸುತ್ತಾರೆ. ನಂತರ ಲೈಸೆನ್ಸ್ ನೀಡಲಾಗುತ್ತದೆ .ಐದು ವರ್ಷದ ಅವಧಿಗೆ ಲೈಸೆನ್ಸ್ ನೀಡಲಾಗುತ್ತದೆ ಹಾಗೂ ಇದಕ್ಕೆ ಐದು ನೂರು ರೂ ಶುಲ್ಕ ವಿಧಿಸಲಾಗಿದೆ.
ಅಧಿಕಾರಿ ಹೇಳುವುದೇನು ?
ಇನ್ನುಮುಂದೆ ಶಾಲಾ ವ್ಯಾಪ್ತಿಯಲ್ಲಿ ಲೈಸೆನ್ಸ್ ನೀಡುವುದಿಲ್ಲ. ಸುಮಾರು 75 ಅರ್ಜಿಗಳು ಬಂದಿವೆ.ಪ್ರಪ್ರಥಮವಾಗಿ ಎರಡು ಲೈಸೆನ್ಸ್ ಈಗ ನೀಡಲಾಗಿದೆ. ಅಂದಾಜು 1200 ಮಳಿಗೆಗಳು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇವೆ. ಯಾರು ನಿಬಂಧನೆಗಳನ್ನು ಅನುಸರಿಸುತ್ತಿಲ್ಲ. ಅದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಮೊದಲ ಹಂತವಾಗಿ ಯಾರು ಟ್ರೇಡ್ ಲೈಸೆನ್ಸ್ ಹೊಂದಿದ್ದಾರೋ ಹಾಗೂ ಪರ್ಮನೆಂಟ್ ಬಿಲ್ಡಿಂಗ್ ಹೊಂದಿದ್ದಾರೋ ಅವರಿಗೆ ಪರವಾನಗಿ ಲೈಸೆನ್ಸ್ ನೀಡಲಾಗುತ್ತದೆ ಎನ್ನುತ್ತಾರೆ ಸತೀಶ್
ಗೂಡಂಗಡಿಗೆ ಈ ನಿಯಮವಿಲ್ಲ
ಸರ್ಕಾರದ ಆದೇಶ ಬಂದ ಬಳಿಕ ಗೂಡಂಗಡಿಗಳಿಗೂ ಲೈಸೆನ್ಸ್ ನೀಡಲಾಗುವುದು. ಮೊದಲ ಹಂತದ ಪ್ರಕ್ರಿಯೆ ಈಗ ನಡೆಯುತ್ತಿದೆ.ಎರಡನೇ ಹಂತದಲ್ಲಿ ಸರ್ಕಾರದ ಆದೇಶ ಬಂದ ನಂತರ ಕೆಲಸ ಮಾಡುತ್ತೇವೆ ಎಂದು ಸತೀಶ್ ಹೇಳುತ್ತಾರೆ. ಈ ವೇಳೆ ಸಾಮಾಜಿಕ ಕಾರ್ಯಕರ್ತ ದೇವರಾಜ್ ಕರುಣಾಜೀವ ಕಲ್ಯಾಣ ಟ್ರಸ್ಟ್ ಪ್ರತಿನಿಧಿ ಸೋನು ಕೂಡ ಮಾಹಿತಿ ನೀಡಿದರು.