
ದಾವಣಗೆರೆ : ಮಧ್ಯ ಕರ್ನಾಟಕ ಬಯಲು ಸೀಮೆಯ ಅಡಕೆ ಬೆಳೆಗಾ ಪ್ರಾತಿನಿಧಿಕ ಬಹುದೊಡ್ಡ ಸಹಕಾರಿ ಸಂಸ್ಥೆಯಾದ ತುಮ್ ಕೋಸ್ ಚುನಾವಣೆ ಇಂದು ನಡೆಯುತ್ತಿದ್ದು, ಇಂದೇ ಫಲಿತಾಂಶ ಹೊರಬರಲಿದೆ.
ಬೆಳಗ್ಗೆ 9ರಿಂದ ಸಂಜೆ 4ಗಂಟೆವರೆಗೂ ಮತದಾನ ನಡೆಯಲಿದ್ದು, ರಾತ್ರಿ ವೇಳೆಗೆ ಫಲಿತಾಂಶವೂ ಹೊರ ಬೀಳುವ ಸಾಧ್ಯತೆಯಿದೆ. ಪಟ್ಟಣದ ಹೊರ ವಲಯದ ಭದ್ರಾವತಿ ರಸ್ತೆಯ ಅಜ್ಜಿಹಳ್ಳಿಯ ತರಳಬಾಳು ಸೆಂಟ್ರಲ್ ಸ್ಕೂಲ್ನಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಮತಗಟ್ಟೆ ಪಟ್ಟಣದಿಂದ 1 ಕಿ.ಮೀ.ದೂರದಲ್ಲಿದ್ದು, ಮತದಾನ ಕೇಂದ್ರಕ್ಕೆ ತೆರಳುವವರಿಗೆ ತರಳಬಾಳು ಶಾಲೆಯ 4 ಬಸ್ ನಿಯೋಜಿಸ ಲಾಗಿದೆ. ಈ ಬಸ್ಗಳು ಚನ್ನಗಿರಿಯ ಮುಖ್ಯ ಬಸ್ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 8.30ರಿಂದ ಕಾರ್ಯನಿರ್ವಹಿಸಲಿವೆ. ಮತದಾನ ಬೆಳಗ್ಗೆ 9 ಗಂಟೆಗೆ ಶುರುವಾಗಿದೆ.
ತುಮ್ ಕೋಸ್ ಒಟ್ಟು ಸದಸ್ಯರಲ್ಲಿ ಈವರೆಗೂ 9,420 ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆ. ಇನ್ನು 5205 ಜನ ಸದಸ್ಯರು ಅನರ್ಹರಾಗಿದ್ದಾರೆ. ಅರ್ಹ ಮತದಾರರ ಮತ ದಾನಕ್ಕೆ 37 ಬೂತ್ ತೆರೆಯಲಾಗಿದೆ. ಒಂದೊಮ್ಮೆ ಅನರ್ಹ ಮತದಾರರನ್ನು ಅರ್ಹರೆಂದು ನ್ಯಾಯಾಲ ‘ಯದಿಂದ ಆದೇಶ ತಂದು ಅವರೂ ಮತದಾನಕ್ಕೆ ಅರ್ಹರಾದರೆ ತುರ್ತು ಪರಿಸ್ಥಿತಿ ಎಂದು 15 ಬೂತ್ ರಚಿಸಲಾಗಿದೆ. ಜತೆಗೆ ವಿಕಲಚೇತನರಿಗಾಗಿ ಸಂಖ್ಯೆ 53 ಮತ್ತು 54ರಲ್ಲಿ ಎರಡು ಮತದಾನ ಕೊಠಡಿಗಳು ಕಾರ್ಯ ನಿರ್ವಹಿಸಲಿವೆ. ಮತಕೇಂದ್ರ ದಲ್ಲಿ ನಾನಾ ಕಡೆಗಳಲ್ಲಿ 90ಕ್ಕೂ ಅಧಿಕ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ.

ಅನರ್ಹರು ಅರ್ಹರ ಪಟ್ಟಿಗೆ:
ಈಗಾಗಲೇ ಎಚ್.ಎಸ್.ಶಿವಕುಮಾರ್ ಬಣದಿಂದ 3194 ಅನರ್ಹ ಮತದಾರರನ್ನು ಅರ್ಹರೆಂದು ಪರಿಗಣಿಸಲು ನ್ಯಾಯಾಲಯದಿಂದ ಆದೇಶ ತರಲಾಗಿದೆ. ಹಾಗೆ ಆರ್.ಎಂ. ರವಿ ಬಣದಿಂದ 2778 ಅನರ್ಹ ಮತದಾರರನ್ನು ಅರ್ಹ ಮತದಾರರೆಂದು ಪರಿಗಣಿಸಿ ಆದೇಶ ತಂದಿದ್ದು, ಎರಡು ಬಣ ಸೇರಿ ಕನಿಷ್ಠ 5000 ಮತದಾರರು ಮತ ಚಲಾಯಿಸಲು ಸಜ್ಜಾಗಿದ್ದಾರೆ.
ಬಣಗಳ ತುರುಸು
15 ನಿರ್ದೇಶಕ ಸ್ಥಾನಗಳಿಗೆ ಚುನಾ ವಣೆ ನಡೆಯಲಿದ್ದು, ಚುನಾವಣಾ ಕಣದಲ್ಲಿ ಎರಡೂ ಬಣ ಸೇರಿ ಒಟ್ಟು 33 ಜನ ಅಭ್ಯರ್ಥಿಗಳಿದ್ದಾರೆ. ಹಾಲಿ ಅಧ್ಯಕ್ಷ ಆರ್.ಎಂ.ರವಿ ಮತ್ತು ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಬಣದ ನಡುವೆ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ತುಮ್ ಕೋಸ್ ವ್ಯಾಪ್ತಿಯಲ್ಲಿ ಎರಡು ಬಣ ತುರುಸಿನ ಪ್ರಚಾರ ನಡೆಸಿದ್ದಾರೆ. ಚುನಾವಣೆ ಒಂದು ರೀತಿ ಎಂಎಲ್ ಎ ಚುನಾವಣೆ ಖದರ್ ಪಡೆದು ಕೊಂಡಿದೆ. ಅಡಕೆ ನಾಡಿನಲ್ಲಿ ಚುನಾ ವಣೆ ದೊಡ್ಡ ಸದ್ದು ಮಾಡಿದ್ದು ವಿಜ ಯಲಕ್ಷ್ಮೀ ಯಾರ ಮುಡಿಗೇರಲಿದೆ ಎಂಬ ತೀವ್ರ ಕುತೂಹಲ ತುಮ್ ಕೋಸ್ ಷೇರುದಾರರಷ್ಟೇ ಅಲ್ಲದೆ ಎಲ್ಲ ಅಡಕೆ ಸಹಕಾರ ಸಂಘಗಳ ವಲಯದಲ್ಲೂ ಮೂಡಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ತುಮ್ ಕೋಸ್ ಚುನಾವಣೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಬ್ಬರು ಅಡಿಷನಲ್ ಎಸ್ಪಿ, ಒಬ್ಬರು ಡಿವೈಎಸ್ಪಿ, 4 ಪಿಐ, 9 ಪಿಎಸ್ಐ, 17 ಎಎಸ್ಐ, 145 ಜನ ಪೊಲೀಸ್ ಪೇದೆ, 1 ಕೆಎಸ್ಆರ್ಪಿ ತುಕಡಿ, 2 ಡಿಎಆರ್ ತು ಕಡಿಗಳ ನಿಯೋಜಿಸಲಾಗಿದೆ. ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ತುಮ್ ಕೋಸ್ ನ 150ಕ್ಕೂ ಹೆಚ್ಚು ಸಿಬ್ಬಂದಿ ಸಹ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.