ಬೆಂಗಳೂರು.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿ ಇತರೆ 5 ಆರೋಪಿಗಳು ಜಾಮೀನು ಸಿಕ್ಕರೂ ಸೋಮವಾರ ಜೈಲಿನಿಂದ ಹೊರ ಬರಬೇಕಾಯಿತು.
ಶುಕ್ರವಾರ ಮಧ್ಯಾಹ್ನ ಕರ್ನಾಟಕ ಹೈಕೋರ್ಟ್ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಗೆ ಜಾಮೀನು ನೀಡಿತು. ಇದಾದ ಬಳಿಕ ಆದೇಶ ಪ್ರತಿ ವಕೀಲರಿಗೆ ಸಿಗಲು ಸಮಯಬೇಕಿತ್ತು.
ಇನ್ನು ಷರತ್ತುಗಳ ಬಗ್ಗೆ ಮಾಹಿತಿ ಇರಲಿಲ್ಲ. ಅಲ್ಲದೇ ಬಾಂಡ್ ಪೇಪರ್ ಸೇರಿದಂತೆ ಇತರೆ ಷರತ್ತುಗಳು, ಭದ್ರತೆ ನೀಡುವವರ ದಾಖಲೆ ಪತ್ರ ಸಿದ್ಧಪಡೆಸಬೇಕಿತ್ತು.
ಶನಿವಾರ ಹಾಗೂ ಭಾನುವಾರ ರಜೆ ಇದ್ದ ಕಾರಣ ಭದ್ರತೆ (ಶ್ಯೂರಿಟಿ/ ಜಾಮೀನುದಾರರು) ವ್ಯಕ್ತಿಗಳನ್ನು ನೀಡಲು, ಕಾಗದ ಪತ್ರ ಸಿದ್ಧಪಡಿಸಲು ಹಾಗೂ ಜೈಲು ಅಧಿಕಾರಿಗಳಿಗೆ ಅಗತ್ಯ ದಾಖಲೆ ಸಲ್ಲಿಸಲು ಸಮಸ್ಯೆ ಆಯಿತು. ಈ ಹಿನ್ನೆಲೆ ಸೋಮವಾರವೇ ಬಿಡುಗಡೆಯಾಗಬೇಕಾಯಿತು.
ವಿವಿಧ ಜೈಲುಗಳಲಿದ್ದ ಆರೋಪಿಗಳು.
ಸದ್ಯ ಜಾಮೀನು ಸಿಕ್ಕಿರುವ 7 ಆರೋಪಿಗಳ ಪೈಕಿ ನಟ ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆ ಸೇರಿದ್ದಾರೆ.
ಪವಿತ್ರಾ ಗೌಡ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ (ಪರಪ್ಪನ ಅಗ್ರಹಾರ) ಇದ್ದು ಸೋಮವಾರ ಹೊರ ಬಂದಿದ್ದಾರೆ. ಅವರ ಜತೆ ರಾಜ್ಯದ ಇತರೆ ಜೈಲಿನಲ್ಲಿದ್ದ 5 ಮಂದಿ ಸೋಮವಾರ ಅಗತ್ಯ ದಾಖಲೆಗಳನ್ನು ಒದಗಿಸಿ ಬಿಡುಗಡೆಯಾದರು.
ಎದೆ ಉಬ್ಬಿಸಿಕೊಂಡು ಸಹಿ.
ನಟ ದರ್ಶನ್ ಸಾಮಾನ್ಯ ಜಾಮೀನು ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎದೆ ಉಬ್ಬಿಸಿಕೊಂಡು ಕೋರ್ಟ್ಗೆ ಹಾಜರಾಗಿ ಜಾಮೀನಿಗೆ ಸಹಿ ಹಾಕಿದ್ದಾರೆ. ಬಳ್ಳಾರಿ ಜೈಲಿನಲ್ಲಿದ್ದಾಗ ಬೆನ್ನುಹುರಿ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಬೆನ್ನಲ್ಲಿಯೇ 6 ವಾರಗಳ ತರುವಾಯ (ಡಿ.13ರ ಶುಕ್ರವಾರ) ಕೋರ್ಟ್ನಿಂದ ಸಾಮಾನ್ಯ ಜಾಮೀನು ಮಂಜೂರಾಗಿದೆ.
ಎರಡು ದಿನಗಳ ಸತತ ರಜೆಯ ಹಿನ್ನೆಲೆಯಲ್ಲಿ ಸೋಮವಾರ ಜಾಮೀನು ಅರ್ಜಿಯ ಎಲ್ಲ ಷರತ್ತುಗಳನ್ನು ಪೂರ್ಣಗೊಳಿಸಿದರು. ಹೀಗಾಗಿ, ಬಿಜಿಎಸ್ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಿಸಿಕೊಂಡು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಜೊತೆಗೆ ಸಹೋದರ ದಿನಕರ್ ತೂಗುದೀಪ ಹಾಗೂ ನಟ ಧನ್ವೀರ್ ಕೂಡ ಕೋರ್ಟ್ ಗೆ ಹಾಜರಾಗಿದ್ದರು.
ದಿನಕರ್ ಹಾಗೂ ಧನ್ವೀರ್ ಶ್ಯೂರಿಟಿ.
ನಟ ದರ್ಶನ್ಗೆ ಮಧ್ಯಂತರ ಜಾಮೀನಿಗೆ ದಿನಕರ್ ಹಾಗೂ ಧನ್ವೀರ್ ಶ್ಯೂರಿಟಿ ನೀಡಿದ್ದರು. ಆಗ ಕೋರ್ಟ್ ಅಧಿಕಾರಿ ಇಲ್ಲಿ ಕೋರ್ಟ್ ಮುಂದೆ ಯಾರ್ಯಾರು ಇದ್ದಾರೆ ಎಂದು ಕೇಳಿದರು. ಆಗ ಎ2 ದರ್ಶನ್ ಇದ್ದಾರೆ ಎಂದು ದರ್ಶನ್ ಪರ ವಕೀಲರ ಮಾಹಿತಿ ನೀಡಿದರು. ಈ ವೇಳೆ ದರ್ಶನ್ ಪರ ವಕೀಲರಾದ ಸುನೀಲ್ ಅವರು ವಾದ ಮಂಡಿಸುತ್ತಾ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾದರು. ಇದೇ ವೇಳೆ ಕೋರ್ಟ್ನಿಂದ ಪವನ್, ರಾಘವೇಂದ್ರ, ಹಾಗೂ ನಂದೀಶ್ ಜಾಮೀನು ಅರ್ಜಿ ಸ್ವೀಕರಿಸಲಾಯಿತು. ಜೊತೆಗೆ, ಆರೋಪಿಗಳಾದ ಪವಿತ್ರಾಗೌಡ, ದರ್ಶನ್, ಅನುಕುಮಾರ್, ಪ್ರದೋಷ್, ನಾಗರಾಜ್ ಹಾಗೂ ಲಕ್ಷ್ಮಣ್ ಪರ ವಕೀಲರಿಂದ ಬಾಂಡ್ ಹಾಗೂ ಶ್ಯೂರಿಟಿ ಸಲ್ಲಿಕೆ ಮಾಡಲಾಯಿತು.
ಈ ವೇಳೆ ನಟ ದರ್ಶನ್ಗೆ ದಿನಕರ್ ಹಾಗೂ ಧನ್ವೀರ್ ಅವರಿಂದ ಶ್ಯೂರಿಟಿ ನೀಡಿ ಸಹಿ ಮಾಡಿಕೊಡಲಾಯಿತು. ಆಗ ನ್ಯಾಯಾಧೀಶರು ಆರೋಪಿ ಏನಾಗಬೇಕು ಎಂದು ಪ್ರಶ್ನೆ ಮಾಡಿದರು. ಆಗ ದಿನಕರ್ ಅವರು ಸಹೋದರ ಎಂದು ಮಾಹಿತಿ ನೀಡಿದರೆ, ನಟ ಧನ್ವೀರ್ ಸ್ನೇಹಿತ ಎಂದು ಉತ್ತರಿಸಿದರು. ಈ ವೇಳೆ ದರ್ಶನ್ ಪೆಂಡಿAಗ್ ಬ್ರಾಂಚ್ ಕೊಠಡಿಗೆ ತೆರಳಿ ಬಾಂಡ್ಗೆ ಸಹಿ ಮಾಡಬೇಕಿತ್ತು. ಪೆಂಡಿAಗ್ ಬ್ರಾಂಚ್ ಗೆ ಹೋಗಿ ಸಹಿ ಮಾಡುವುದು ಸ್ವಲ್ಪ ಕಷ್ಟ ಆಗಲಿದೆ. ಹೀಗಾ.ಗಿ ಕೋರ್ಟ್ ಹಾಲ್ನಲ್ಲೇ ಸಹಿ ಪಡೆಯುವಂತೆ ದರ್ಶನ್ ಪರ ವಕೀಲ ಸುನಿಲ್ಮನವಿ ಮಾಡಿದರು. ವಕೀಲ ಮನವಿ ಪುರಸ್ಕರಿಸಿ ಬಾಂಡ್ ದಾಖಲೆ ಕೋರ್ಟ್ಗೆ ತಂದು ಸಹಿ ಮಾಡಿಸಲು ಸೂಚನೆ ನೀಡಿದರು.
ಪವಿತ್ರಾಗೌಡಗೆ ಜಾಮೀನು ಕೊಡಿಸಿದ ಮನೀಶ್ ಯಾರು?
ರೇಣುಕಾಸ್ವಾಮಿ ಕೊಲೆ ಕೇಸಿನ ಎ1 ಆರೋಪಿ ಆಗಿರುವ ನಟಿ ಹಾಗೂ ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡಗೆ ಮನೀಶ್ ಎನ್ನುವವರು ಶ್ಯೂರಿಟಿ ನೀಡಿದ್ದಾರೆ. ಇನ್ನು ಮನೀಶ್ ಯಾರೆಂದು ಪರಿಶೀಲನೆ ಮಾಡಿದಾಗ ಅವರು ಪವಿತ್ರಾ ಗೌಡ ಅವರಿಗೆ ಪರಿಚಯಸ್ಥರು ಎಂದು ತಿಳಿದುಬಂದಿದೆ.
ಮನೀಶ್ ಅವರು ತಲಘಟ್ಟಪುರದಲ್ಲಿರುವ ತಮ್ಮ ಆಸ್ತಿಯ ದಾಖಲೆಯೊಂದನ್ನು ಶ್ಯೂರಿಟಿ ನೀಡಿದ್ದಾರೆ. ಜೊತೆಗೆ, 2ನೇ ಶ್ಯೂರಿಟಿಗೆ ಪವಿತ್ರಾ ಗೌಡ ಅವರ ತಾಯಿಯ ಸ್ನೇಹಿತೆ ಸಹಿ ಹಾಕಿದ್ದಾರೆ. ಅವರು ತಮ್ಮ ಆಸ್ತಿಯನ್ನು ಶ್ಯೂರಿಟಿಯಾಗಿ ನೀಡಿ ಜಾಮೀನು ಅರ್ಜಿಗೆ ಸಹಿ ಹಾಕಿದ್ದಾರೆ