![](https://davangerevijaya.com/wp-content/uploads/2025/01/IMG-20250116-WA0145.jpg)
ಬೆಂಗಳೂರು; ಎಲ್ಲಾ ವರ್ಗಗಳಿಗೆ ಬದುಕು ಕಟ್ಟಿಕೊಟ್ಟ, ಆಡಳಿತಕ್ಕೆ ಹೊಸ ರೂಪ ಕೊಟ್ಟ ಧೀಮಂತ ನಾಯಕ ಎಸ್.ಎಂ ಕೃಷ್ಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಮದ್ದೂರಿನಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ರಾಜ್ಯ ಮತ್ತು ರಾಷ್ಟ್ರದ ಧೀಮಂತ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ. ಆಧುನಿಕ ಕರ್ನಾಟಕದ ಮಹಾಶಿಲ್ಪಿ ಎಸ್.ಎಂ. ಕೃಷ್ಣ ಅವರು. ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರೂ ರಾಜ್ಯಕ್ಕೆ ಅವರ ಕೊಡುಗೆ ಅಪಾರ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಾಗಿ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ವಿದೇಶಾಂಗ ಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರ ಹುದ್ದೆ ಅಲಂಕರಿಸಿದ್ದ ಹಿರಿಯ ನಾಯಕ. 1962ರಿಂದ ಶಾಸಕರಾಗಿ ಆಯ್ಕೆಯಾಗಿ ಎಲ್ಲಾ ಸ್ಥಾನ ಅಲಂಕರಿಸಿ ಸೋಲು ಗೆಲವು ಕಂಡಂತಹ ಅಪರೂಪದ ನಾಯಕ” ಎಂದು ತಿಳಿಸಿದರು.
“ಭವಿಷ್ಯದ ಕನಸುಗಾರನಾಗಿ, ಕರ್ನಾಟಕಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಪುಟಾಣಿ ಮಕ್ಕಳಿಂದ, ಮಹಿಳೆಯರು, ರೈತರಿಗೆ ನೆರವಾಗಿದ್ದಾರೆ. ರೈತರು ಶ್ರೀಗಂಧವನ್ನು ಬೆಳೆಯಬೇಕು ಎಂದು ಕಾನೂನು ತಂದವರು ಎಸ್.ಎಂ ಕೃಷ್ಣ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಾಜ್ಯಕ್ಕೆ ಆರ್ಥಿಕ ಶಕ್ತಿ ತುಂಬಿದರು. ಕಾವೇರಿ ಜಲಾನಯನ ಪ್ರದೇಶಕ್ಕೆ ಶಕ್ತಿ ತುಂಬಲು ಕಾವೇರಿ ಜಲಾನಯನ ನಿಗಮ ಸ್ಥಾಪಿಸಿದರು. ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಮಾಡಿ, ಅನೇಕ ಕಾರ್ಯಕ್ರಮ ನೀಡುವ ಮೂಲಕ ಇತಿಹಾಸ ಸೇರಿದ್ದಾರೆ” ಎಂದರು.
![](https://davangerevijaya.com/wp-content/uploads/2025/01/IMG-20241225-WA0105.jpg)
![](https://davangerevijaya.com/wp-content/uploads/2025/01/IMG-20250125-WA0230.jpg)
“ಮಂಡ್ಯದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ರೈತನ ಮಗ ಎಸ್.ಎಂ ಕೃಷ್ಣ. ಮಹಾತ್ಮಾ ಗಾಂಧಿ ಅವರು ಮದ್ದೂರಿನ ಸ್ವಾತಂತ್ರ್ಯ ಸೌಧಕ್ಕೆ ಭೇಟಿ ನೀಡಿದ್ದಾಗ ಅವರ ತಂದೆ ಜತೆ ಗಾಂಧಿಜಿ ಅವರನ್ನು ಭೇಟಿ ಮಾಡಿದ್ದರು. 92 ವರ್ಷದ ಬದುಕಿನಲ್ಲಿ ಸಾಧನೆಯ ಶಿಖರ ಬಿಟ್ಟುಹೊಗಿದ್ದಾರೆ. ವರ್ಣರಂಜಿತ ಬದುಕನ್ನು ಕಂಡ ವ್ಯಕ್ತಿ” ಎಂದು ತಿಳಿಸಿದರು.
“ನಾಳೆ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಂದ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಕೆಂಗೇರಿ ಬಸ್ ನಿಲ್ದಾಣ, ಬಿಡದಿ ಬಸ್ ನಿಲ್ದಾಣ, ರಾಮನಗರ ಬಸ್ ನಿಲ್ದಾಣದ, ಚನ್ನಪಟ್ಟಣ ಗಾಂಧಿ ವೃತ್ತ ಮಾರ್ಗವಾಗಿ ಮದ್ದೂರಿಗೆ ಕರೆದೊಯ್ಯವಾಗುವುದು. ಈ ಜಾಗದಲ್ಲಿ 5 ನಿಮಿಷಗಳ ಕಾಲ ನಿಲ್ಲಿಸಲಾಗುವುದು. ಈ ವೇಳೆ ಯಾರೂ ಅಡ್ಡ ಹಾಕುವಂತಿಲ್ಲ. ಆಯಾ ತಾಲೂಕಿನ ಜನ ಆಯಾ ಜಾಗದಲ್ಲಿ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಬಹುದು” ಎಂದರು.
“ಮಧ್ಯಾಹ್ನ 3 ಗಂಟೆ ನಂತರ ಅವರ ಅಂತ್ಯಕ್ರಿಯೆ ಪ್ರಕ್ರಿಯೆ ನಡೆಯಲಿದೆ. ಹಿಂದೂ ಧರ್ಮದ ಒಕ್ಕಲಿಗ ಸಮುದಾಯದ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಲಿದ್ದು, ಶ್ರೀಗಂಧದ ಮರಗಳ ಚಿತೆಯ ಮೂಲಕ ಅಂತ್ಯಕ್ರಿಯೆ ಮಾಡಲಾಗುವುದು” ಎಂದು ತಿಳಿಸಿದರು.
![](https://davangerevijaya.com/wp-content/uploads/2025/01/IMG-20250116-WA01462.jpg)
![](https://davangerevijaya.com/wp-content/uploads/2025/01/IMG-20250125-WA0230.jpg)