ಸುಳ್ಳು ದಾಖಲೆ ಸೃಷ್ಟಿಸಿ ಮಠದ ಸಾವಿರಾರು ಎಕರೆ ಆಸ್ತಿ ಪ್ರಭಾವಿ ವ್ಯಕ್ತಿಗಳು, ಅಧಿಕಾರಿಗಳ ಸಹಕಾರದೊಂದಿಗೆ ಕಬಳಿಸುವ ಹುನ್ನಾರ, ಮಠ ಇನ್ನಿಲ್ಲದ ಆರ್ಥಿಕ ಸಂಕಷ್ಟ, ಶ್ರೀವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತೀವ್ರ ಅಸಮಾಧಾನ
ಶಿವಮೊಗ್ಗ:
ತಾಲೂಕಿನ ಹಾರನಹಳ್ಳಿಯಲ್ಲಿರುವ ಶ್ರೀರಾಮಲಿಂಗೇಶ್ವರ ಮಠದ ಸಾವಿರಾರು ಎಕರೆ ಆಸ್ತಿಯನ್ನು ಅನೇಕ ಪ್ರಭಾವಿ ವ್ಯಕ್ತಿಗಳು ಅಧಿಕಾರಿಗಳ ಸಹಕಾರದೊಂದಿಗೆ ಕಬಳಿಸುತ್ತಿದ್ದು ಶ್ರೀಮಠ ಇನ್ನಿಲ್ಲದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಮಠದ ಮಠಾಧಿಪತಿಗಳಾದ ಶ್ರೀವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ತಮ್ಮ ಮಠದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕೆಳದಿ ಅರಸನಾಗಿದ್ದ ರಾಮರಾಜ ನಾಯಕರಿಂದ ಹಾರನಹಳ್ಳಿಯಲ್ಲಿ ಧರ್ಮ ಮತ್ತು ಮನುಕುಲದ ಉದ್ಧಾರಕ್ಕಾಗಿ ಶ್ರೀಮಠವನ್ನು ಸ್ಥಾಪಿಸಿ ಬೆಂಗಳೂರೂ ಸೇರಿದಂತೆ ಶ್ರೀ ಮಠಕ್ಕೆ ಸಹಸ್ರಾರು ಕೋಟಿ ಬೆಲೆ ಬಾಳುವ ಸ್ಥಿರಾಸ್ಥಿಗಳನ್ನು ನೀಡಲಾಗಿತ್ತು.
ಮಠದ ಈ ಹಿಂದಿನ ಮಠಾಧಿಪತಿಗಳಾಗಿದ್ದ ಶ್ರೀಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿಯವರು ತಮಗೆ ಈ ಮಠದ ಪಟ್ಟಾಧಿಕಾರಿಯನ್ನಾಗಿ ಮಾಡಿ ತಮ್ಮ ಹೆಸರಿಗೆ ಶ್ರೀ ಮಠದ ಆಸ್ತಿಯ ಬಗ್ಗೆ ಉಯಿಲನ್ನೂ ಮಾಡಿಟ್ಟಿದ್ದರು. ಹೀಗಿದ್ದಾಗ್ಯೂ ಮಠದ ಆಡಳಿತ ಮಂಡಳಿಯಲ್ಲಿದ್ದ ವಕೀಲರಾದ ಎಚ್.ಆರ್.ವಿಶ್ವನಾಥ್ ಮತ್ತು ಭಕ್ತರಾದ ಡಿ.ಎಂ.ಶಿವಕುಮಾರಸ್ವಾಮಿ , ಡಿ.ಪಿ.ವೀರೇಂದ್ರ ದೇಸಾಯಿ ಮೊದಲಾದವರು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗಳ ಮುಗ್ಧತೆಯ ದುರುಪಯೋಗ ಪಡಿಸಿಕೊಂಡು, ಮಠದ ಹೆಸರಿನಲ್ಲಿ ನಕಲಿ ಕಾಗದಪತ್ರ ಸೃಷ್ಟಿಸಿ ಮಠದ ಎಲ್ಲ ಆಸ್ತಿಯನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಮಠವು ಶ್ರೀ ಕುಂಭೇಶ್ವರ ವಿದ್ಯಾ ಸಂಸ್ಥೆ ಎಂಬ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಶ್ರೀ ಕುಂಭೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಶ್ರೀಗಳು ದತ್ತು ತೆಗೆದುಕೊಂಡು ಮುನ್ನಡೆಸುತ್ತಿದ್ದರು.
ಹಿಂದಿನ ಶ್ರೀಗಳು ಲಿಂಗೈಕ್ಯರಾದ ನಂತರ ತಾವು ಇದರ ಅಧ್ಯಕ್ಷರಾಗಿ ಮುಂದುವರಿದಿದ್ದಾಗಿ ತಿಳಿಸಿದ ಶ್ರೀಗಳು ಈ ಸಂಸ್ಥೆಗೆ ಸಂಬಂಧಿಸಿದಂತೆಯೂ ಆಸ್ತಿ ಕಬಳಿಕೆದಾರರು ನಾವೆಲ್ಲ ಆಡಳಿತ ಮಂಡಳಿಗೆ ರಾಜಿನಾಮೆ ನೀಡಿದ್ದಾಗಿ ಸುಳ್ಳು ದಾಖಲೆ ಸೃಷ್ಟಿಸಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ ಎಂಬ ಸುಳ್ಳು ದಾಖಲೆ ನಿರ್ಮಿಸಿ ಅಲ್ಲಿಯೂ ಕಿರುಕುಳ ಅನುಭವಿಸುತ್ತಿರುವುದಾಗಿ ಹೇಳಿದರು.