ಶಿವಮೊಗ್ಗ:
ನೀರು ಕೇಳುವ ನೆಪದಲ್ಲಿ ಮನೆಗೆ ಬಂದು, ವೃದ್ಧೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅವರಿಂದ ₹ 65,000 ಮೌಲ್ಯದ 10.7 ಗ್ರಾಂನ ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ನಡೆದ 24 ಗಂಟೆಯೊಳಗೆ ಪ್ರಕರಣ ಭೇದಿಸಲಾಗಿದೆ. ನಗರದ 77 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಭಾನುವಾರ ಸಂಜೆ ತಮ್ಮ ಮನೆಯ ಮುಂದಿನ ಗೇಟ್ ಬಳಿ ನಿಂತಿದ್ದಾಗ ನಾಲ್ವರು ಅಪರಿಚಿತರು ನೀರು ಕೇಳಿದ್ದಾರೆ.
ಅವರು ನೀರು ಕೊಟ್ಟಾಗ ಅದನ್ನು ಕುಡಿದು ಏಕಾಏಕಿ ವೃದ್ಧೆಯನ್ನು ಮನೆಯೊಳಗೆ ತಳ್ಳಿ ಗಟ್ಟಿಯಾಗಿ ಬಾಯಿ ಹಿಡಿದು, ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ವೃದ್ಧೆ ನೀಡಿದ ದೂರಿನ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿನೋಬನಗರ ಠಾಣೆ ಇನ್ಸ್ಪೆಕ್ಟರ್ ಸಿದ್ದೇಗೌಡ ನೇತೃತ್ವದ ತಂಡ ತನಿಖೆ ನಡೆಸಿದೆ.