ದಾವಣಗೆರೆ:ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೊನಾ ಸಂದರ್ಭದಲ್ಲಿ ಹಗರಣ, ಭ್ರಷ್ಟಾಚಾರ ನಡೆಸಿದ್ದಾರೆ ಎಂದು ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ ತಿರುಗುಬಾಣ ಆಗಲಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಜನರ ಜೀವ ಉಳಿಸುವ ಕ್ರಮ ತೆಗೆದುಕೊಂ ಡಿದ್ದಾರೆ. ಆದರೂ, ಭ್ರಷ್ಟಾಚಾರ ನಡೆದಿದೆ ಎಂದು ತನಿಖೆಗಾಗಿ ಎಸ್ಐಟಿ ರಚಿಸಿದೆ. ಮುಂದೇ ಅದೇ ರಾಜ್ಯ ಸರ್ಕಾರಕ್ಕೆ ನಿಶ್ಚಿತವಾಗಿ ತಿರುಗುಬಾಣ ಆಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿಯವರದ್ದು ಶೇ. 40 ಕಮಿಷನ್ ಸರ್ಕಾರ ಎಂಬ ಆರೋಪ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಶೇ. 100 ಕಮಿಷನ್ ಸರ್ಕಾರ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ದೂರಿದರು.
ಜಮೀರ್ ಅಹಮ್ಮದ್ ಅವರನ್ನು ನಿಯಂತ್ರಣದಲ್ಲಿಡದಿದ್ದಲ್ಲಿ ಕಾಂಗ್ರೆಸ್ ಸರ್ವ ನಾಶ ಆಗುತ್ತದೆ ಎಂಬುದಾಗಿ ಕಾಂಗ್ರೆಸ್ ಶಾಸಕರೇ ಪತ್ರ ಬರೆದಿದ್ದಾರೆ. ಅದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವ ಋಣ ಇದೆಯೋ ಗೊತ್ತಿಲ್ಲ. ಮತಾಂಧ ಜಮೀರ್ ಅಹಮ್ಮದ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ದೂರಿದರು.
ಆಹಾರ ಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡಲಾಗುತ್ತಿದೆ. ಭರವಸೆ ಈಡೇರಿಸಲು ಆಗದ 11 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ. ಹಾಗೆ ಮಾಡಲು ಬಿಟ್ಟು ಬಿಡುತ್ತೇವಾ ಎಂದರು.
ಯತ್ನಾಳ್ ನನ್ನನ್ನು ಥರ್ಡ್ ರೇಟ್ ರಾಜಕಾರಣಿ ಎಂದು ಹೇಳಿದ್ದಾರೆ. ಅವರು ರಾಜಕಾರಣದಲ್ಲಿ ದೊಡ್ಡವರು. ನಾನು ಥರ್ಡ್ ಆದರೆ, ನೀವು ಏನು. ಎಲ್ಲವೂ ಅವರೇ. ಅವರು ಟಿಆರ್ ಪಿಗಾಗಿ ಮಾತನಾಡುತ್ತಿ ದ್ದಾರೆ. ನಾನು ಅಟಲ್ ವಾಜಪೇಯಿ ಸಂಪುಟದ ಸಚಿವ ಎಂದು ಹೇಳಿಕೊಳ್ಳುವ ಮೂಲಕ ಅಟಲ್ ವಾಜಪೇಯಿ ಅವರಿಗೆ ಅವಮಾನ ಮಾಡುತ್ತಿದ್ದು ವಾಜಪೇಯಿ ಇದ್ದಿದ್ದರೆ ಅವರ ಮಾತು ಕೇಳಿ ನೋವು ಮಾಡಿಕೊಳ್ಳುತ್ತಿದ್ದರು.
ಯಡಿಯೂರಪ್ಪ ಪಾದಯಾತ್ರೆ ನಡೆಸಿದರು. ಸೈಕಲ್ ಹೊಡೆದರು. ಅವರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಯತ್ನಾಳ್ ಅವರ ಕನಸಲ್ಲೂ ಹೋಗುತ್ತಾರೆ. ಅವರ ಬಗ್ಗೆ ಮಾತನಾಡಿದಿದ್ದರೆ ಅವರಿಗೆ ಊಟ ಸೇರಲ್ಲ. ನಿದ್ರೆ ಬರೊಲ್ಲ. ಅವರು ಬಾಯಿಚಟಕ್ಕೆ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಯತ್ನಾಳ್ ಅವರ ತಂಡಕ್ಕೆ ಮಾನ್ಯತೆ ಇಲ್ಲ. ಅವರದ್ದು ಅಧಿಕೃತ ಅಲ್ಲ. ವಕ್ಫ್ ಹಗರಣದ ವಿರುದ್ಧ ಹೋರಾಟಕ್ಕೆ ರಚಿಸಿರುವ ಮೂರು ತಂಡಗಳೇ ಅಧಿಕೃತ. ಬೇರೆ ಯಾರೇ ಮಾಡಿದರೂ ಅಧಿಕೃತ ಅಲ್ಲ ಎಂದು ತಿಳಿಸಿದರು.
ವಿಜಯೇಂದ್ರ ಅವರು ಮುಖ್ಯಮಂತ್ರಿ ಯಾಕೆ ಆಗಬಾರದು. ಜನಾಶೀರ್ವಾದದಿಂದ ಮುಖ್ಯಮಂತ್ರಿ ಆಗುತ್ತಾರೆ. ಅದಕ್ಕಾಗಿಯೇ ಯತ್ನಾಳ್ ಅವರಿಗೆ ಹೊಟ್ಟೆ ಉರಿ. ಹಾದೀಲಿ ಬೀದೀಲಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ನಮಗೆ ಯಾವುದೇ ರೀತಿಯ ರಹಸ್ಯ ಸಭೆಗಳ ನಡೆಸಬಾರದು ಎಂದು ಯಡಿಯೂರಪ್ಪ, ವಿಜಯೇಂದ್ರ ಅವರು ಹೇಳಿದ್ದರಿಂದ ಮಾಡಿರಲಿಲ್ಲ. ಮಾತನಾಡಿರಲಿಲ್ಲ. ಇನ್ನು ಮುಂದೆ ನಾವೂ ಸಭೆಗಳ ಮಾಡುತ್ತೇವೆ. ದೆಹಲಿಗೂ ಹೋಗುತ್ತೇವೆ ಎಂದು ತಿಳಿಸಿದರು. ಪ್ರವೀಣ್ ಜಾಧವ್, ರಾಜು ವೀರಣ್ಣ, ಮಂಜು, ಕೆ.ಎನ್. ವೆಂಕಟೇಶ್, ಪ್ರಶಾಂತ್, ಮಂಜುನಾಥ್ ಇತರರು ಇದ್ದರು