ಬೆಂಗಳೂರು:ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಖನ್ನ ಹಾಕುತ್ತಿದ್ದ ರಾಜಸ್ಥಾನದ ನಾಲ್ವರು ಮಧ್ಯವರ್ತಿಗಳನ್ನು ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸರು, ಬಂಧಿಸಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ನ ಪವನ್ ಬಿಷ್ಣೋಯಿ(18), ಸವಾಯಿ ಸಿಂಗ್(21) ಹಾಗೂ ಜೋಧಪುರದ ಅರವಿಂದ್ ಕುಮಾರ್ (19), ಅಭಯ್ ಚರಣ್(19) ಬಂಧಿ ತರು. ಇಬ್ಬರನ್ನು ರಾಜಸ್ಥಾನ, ಮತ್ತಿಬ್ಬ ರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿ ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ.
ರಾಜಸ್ಥಾನದ ಉದಯಪುರ ದಲ್ಲಿ ಆರೋಪಿಗಳು ಬಾಡಿಗೆ ಮನೆ ಮಾಡಿ ಕೊಂಡಿದ್ದರು. ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದರು. ಆ ಮನೆಯಲ್ಲಿದ್ದ 19 ಮೊಬೈಲ್ ಫೋನ್ಗಳು, ಎರಡು ಲ್ಯಾಪ್ಟಾಪ್, 20 ಸಿಮ್ ಕಾರ್ಡ್ಗಳು, ವಿದ್ಯಾರ್ಥಿಗಳ ಮೂಲಕ ತೆರೆಸಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ 34 ಬ್ಯಾಂಕ್ ಪಾಸ್ಬುಕ್, 106 ಕ್ರೆಡಿಟ್/ಡೆಬಿಟ್ ಕಾರ್ಡ್, 39 ಬ್ಯಾಂಕ್ ಚೆಕ್ಬುಕ್, 75 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಅಕ್ಟೋಬರ್ 6ರಂದು ವ್ಯಕ್ತಿಯೊಬ್ಬ ರನ್ನು ಸಂಪರ್ಕಿಸಿದ್ದ ಮಧ್ಯವರ್ತಿಗಳು, ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದರು. ಅರೆಕಾಲಿಕ ಉದ್ಯೋಗದಲ್ಲಿ ಹೆಚ್ಚಿನ ಸಂಪಾದನೆ ಇದ್ದು, ಉದ್ಯೋಗ ಕೊಡಿಸಲು ಹಣ ನೀಡುವಂತೆಯೂ ಹೇಳಿದ್ದರು. ಮಧ್ಯ ವರ್ತಿಗಳ ಮಾತು ನಂಬಿದ್ದ ವ್ಯಕ್ತಿ, ವಿವಿಧ ಬ್ಯಾಂಕ್ ಖಾತೆಗಳಿಗೆ ? 12.43 ಲಕ್ಷ ವರ್ಗಾ ವಣೆ ಮಾಡಿದ್ದರು. ಕೆಲವು ದಿನಗಳ ಬಳಿಕ ವಂಚನೆ ನಡೆದಿರುವುದು ಗೊತ್ತಾಗಿ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ವಂಚನೆಗೆ ವಿದ್ಯಾರ್ಥಿ ಗಳಿಂದ ಬ್ಯಾಂಕ್ ಖಾತೆ ತೆರೆಸುತ್ತಿದ್ದ ಸಂಗತಿ ಬಯಲಾಯಿತು’ ಎಂದು ಮಾಹಿತಿ ನೀಡಿದರು.
‘ತನಿಖೆಯ ಆರಂಭದಲ್ಲಿ ಒಬ್ಬ ಖಾತೆದಾರರನ್ನು ಕರೆಸಿ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಆತ ವಿದ್ಯಾರ್ಥಿ ಎಂಬುದು ಗೊತ್ತಾಯಿತು. ರಾಜಸ್ಥಾನದ ವ್ಯಕ್ತಿಗಳು ಬಂದು, ಕರೆನ್ಸಿ ಬದಲಾವಣೆಗೆ ಬ್ಯಾಂಕ್ ಖಾತೆಗಳ ಅಗತ್ಯವಿದ್ದು, ಖಾತೆ ಮಾಡಿಕೊಟ್ಟರೆ ತಮಗೂ ಲಾಭಾಂಶವಿದೆ ಎಂಬುದಾಗಿ ವಿದ್ಯಾರ್ಥಿಗಳನ್ನು ನಂಬಿಸುತ್ತಿ ದ್ದರು. ಈ ರೀತಿ ಹಲವು ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ಬ್ಯಾಂಕ್ ಖಾತೆ ತೆರೆಸಿದ್ದರು’ ಎಂದು ಮಾಹಿತಿ ನೀಡಿದರು.
ಪಾಸ್ಬುಕ್, ಸಿಮ್ ವಶಕ್ಕೆ
ಬ್ಯಾಂಕ್ ಖಾತೆ ತೆರೆಸಿದ ನಂತರ, ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಯ ಪಾಸ್ಬುಕ್, ಚೆಕ್ಬುಕ್, ಎಟಿಎಂ ಕಾರ್ಡ್ ಹಾಗೂ ಖಾತೆ ತೆರೆಯಲು ಬಳಸಿದ್ದ ಸಿಮ್ ಕಾರ್ಡ್ಗಳನ್ನು ಆರೋಪಿಗಳು ಪಡೆದುಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಕ್ರಿಪ್ಟೊ ಕರೆನ್ಸಿ ಖರೀದಿ
ವಿದ್ಯಾರ್ಥಿಗಳ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳನ್ನು ಆರೋಪಿಗಳು ವಂಚನೆಗೆ ಬಳಕೆ ಮಾಡುತ್ತಿದ್ದರು. ಖಾತೆಗೆ ಬಂದ ಹಣವನ್ನು ತಕ್ಷಣವೇ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಆ ಖಾತೆಗಳಿಂದ ‘ಬಿನಾನ್ಸ್ ಪ್ಲಾಟ್ಫಾರಂ’ ಮೂಲಕ ಯುಎಸ್ಡಿಟಿ (ಕ್ರಿಪ್ಟೊ ಕರೆನ್ಸಿ) ಖರೀದಿಸಿ, ಯುಎಸ್ಡಿಟಿ ಅನ್ನು ಡಿಜಿಟಲ್ ವಾಲೆಟ್ಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಈ ರೀತಿಯ ವರ್ಗಾವಣೆಯಿಂದ ಆರೋಪಿಗಳು ಹೆಚ್ಚಿನ ಲಾಭಾಂಶ ಪಡೆದುಕೊಳ್ಳುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳ ಸ್ನೇಹ:
ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಬಳಿಗೆ ತೆರಳುತ್ತಿದ್ದ ಆರೋಪಿಗಳು, ವಿದ್ಯಾರ್ಥಿಗಳ ಸ್ನೇಹ ಸಂಪಾದಿಸುತ್ತಿದ್ದರು. ನಂತರ, ಬ್ಯಾಂಕ್ ಖಾತೆ ತೆರೆದುಕೊಡುವಂತೆ ಮನವೊಲಿಸುತ್ತಿದ್ದರು ಎಂಬುದು ಗೊತ್ತಾಗಿದೆ.
ಬ್ಯಾಂಕ್ ಅಧಿಕಾರಿಗಳ ವಿರುದ್ಧವೂ ಕ್ರಮ
‘ಖಾತೆ ತೆರೆಯುವ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳು, ಗ್ರಾಹಕರ ಪೂರ್ವಾಪರ ತಿಳಿದಿರಬೇಕು. ಗ್ರಾಹಕರ ಪೂರ್ವಾಪರ ವಿಚಾರಿಸದೇ ಚಾಲ್ತಿ ಖಾತೆ ತೆರೆಯಲಾಗಿದೆ. ಚಾಲ್ತಿ ಖಾತೆ ತೆರೆಯಲು ಕೆಲವು ಮಾನದಂಡಗಳಿವೆ. ಅದನ್ನು ಅನುಸರಿಸದೇ ಇದ್ದರೆ ಬ್ಯಾಂಕ್ ಅಧಿಕಾರಿಗಳನ್ನೂ ಹೊಣೆ ಮಾಡಿ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು. ಈ ಪ್ರಕರಣದಲ್ಲಿ ವಿದ್ಯಾರ್ಥಿಗಳನ್ನು ಸಾಕ್ಷಿದಾರರನ್ನಾಗಿ ಮಾಡಲಾಗಿದೆ’ ಎಂದು ದಯಾನಂದ ಹೇಳಿದರು