ದಾವಣಗೆರೆ; ದಿ.ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿನೆನಪಿಗಾಗಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು ನ. 27 ರಿಂದ ಡಿ. 1 ರವರೆಗೆ ಟೂರ್ನಮೆಂಟ್ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಮತ್ತು ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಕಳೆದ 16 ವರ್ಷಗಳಿಂದ ಟೂರ್ನಿ ನಡೆಸಲಾಗುತ್ತಿದೆ. ಈ ಬಾರಿ 17 ನೇ ವರ್ಷದ ಅಂಗವಾಗಿ ಐದು ದಿನಗಳ ಕಾಲ ಟೂರ್ನಿ ನಡೆಯಲಿದೆ ಎಂದು ತಿಳಿಸಿದರು.ನ. 27 ರ ಸಂಜೆ 6.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಬಸವರಾಜ್ ವಿ. ಶಿವಗಂಗಾ, ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಜೊತೆ ದಾವಣಗೆರೆ, ಬೆಂಗಳೂರು, ಶಿವಮೊಗ್ಗ, ತುಮಕೂರು, ತಮಿಳುನಾಡು, ಮಹಾರಾಷ್ಟ್ರ ಗಳ 50 ತಂಡಗಳ 750ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವರು. ಹೊರಗಡೆ ತಂಡದವರಿಗೆ ಉಚಿತವಾಗಿ ವಸತಿ, ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಟೂರ್ನಿಯ ವಿಜೇತ ತಂಡಕ್ಕೆ 5,05, 555 ರೂಪಾಯಿ ನಗದು ಹಾಗೂ ಶಾಮನೂರು ಡೈಮಂಡ್ ಕಪ್, ದ್ವಿತೀಯ ತಂಡಕ್ಕೆ 3,05, 555 ರೂಪಾಯಿ ಮತ್ತು ಶಿವಗಂಗಾ ಕಪ್, ತೃತೀಯ ತಂಡಕ್ಕೆ 1,55, 555 ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ವೈಯಕ್ತಿಕ ಉತ್ತಮ ಆಲ್ ರೌಂಡರ್ ಗೆ ಹೀರೋ ಹೋಂಡಾ ಬೈಕ್ ನೀಡ ಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಫೀಷಿಯಲ್ ಕಪ್ ಪಂದ್ಯಾವಳಿಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್, ಪತ್ರಕರ್ತರು, ವಕಿಲರು, ವರ್ತಕರ ತಂಡಗಳು ಭಾಗವಹಿಸಲಿವೆ. ಸ್ವತಃ ಕ್ರಿಕೆಟ್ ಆಟಗಾರ ರಾಗಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆಟವಾಡುವರು. ಯೂ ಟ್ಯೂಬ್ ನಲ್ಲಿ ನೇರಪ್ರಸಾರ ವ್ಯವಸ್ಥೆ ಮಾಡ ಲಾಗುವುದು ಎಂದು ತಿಳಿಸಿದರು.
ಸಂಘದ ಶ್ರೀನಿವಾಸ್ ಶಿವಗಂಗಾ, ಜಯ ಪ್ರಕಾಶ್ ಗೌಡ, ಹಾಲಪ್ಪ, ಎಚ್. ಮಹದೇವ್, ಶಿವಾನಂದ್, ರಂಗನಾಥ್, ಸುರೇಶ್ ಉಪಸ್ಥಿತರಿದ್ದರು