ದಾವಣಗೆರೆ: ವಕ್ಫ್ ಬೋರ್ಡ್ ಹೆಸರಿನಲ್ಲಿ ರಾಜ್ಯದಲ್ಲಿನ ರೈತರ ಜಮೀನುಗಳನ್ನು ಕಬಳಿಸುತ್ತಿರುವುದನ್ನ ವಿರೋಧಿಸಿ ನಗರದಲ್ಲಿ ಭಾರತೀಯ ಜನತಾ ಪಾರ್ಟಿಯು ಪ್ರತಿಭಟನೆ ನಡೆಸಿತು.ನಗರದ ಕೆ.ಬಿ.ಬಡಾವಣೆಯ ಬಿಜೆಪಿ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಉಪ ವಿಭಾಗಾಧಿಕಾರಿ ಕಚೇರಿಗೆ ತಲುಪಿ ಎಸಿ ಮೂಲಕ ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ವಕ್ಫ್ ಸಚಿವ ಜಮೀರ್ ಅಹಮ್ಮದ್ ಅವರು ಕ್ಯಾನ್ಸರ್ನಂತೆ. ಧರ್ಮಾಂಧತೆಯ ಮೂಲಕ ಹಿಂದು ಸಮಾಜ, ಮಠ, ಮಾನ್ಯಗಳು, ದೇವಸ್ಥಾನಗಳ ಆಸ್ತಿಯನ್ನ ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಅವರು ಹೇಳಿದ್ದರಿಂದಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರನ್ನು ನಮೂದು ಮಾಡಲಿಕ್ಕೆ ಆಗುತ್ತದೆ. ಇಲ್ಲವಾದಲ್ಲಿ ಇಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸುತ್ತಿರುವುದರ ವಿರುದ್ಧ ನಮ್ಮ ಹೋರಾಟ ನಿರಂತವಾಗಿ ನಡೆಯಲಿದೆ. ಪಹಣಿ ಕಾಲಂ 11ರಲ್ಲಿ ವಕ್ಫ್ ಬೋರ್ಡ್ ಹೆಸರನ್ನು ನಮೂದಿಸುವ ಮೂಲಕ ಆಸ್ತಿಯನ್ನ ಕಬಳಿಸಲಾಗುತ್ತಿದೆ. ಯಾವುದೇ ರೈತರು, ಇತರರು ವಕ್ಫ್ ಬೋರ್ಡ್ ಹೆಸರಿನಲ್ಲಿ ಆಸ್ತಿ ಕಳೆದು ಕೊಂಡಿದ್ದಾರೆ. ಆದರೂ ಸರ್ಕಾರ ನೊಂದವರ ಸಹಾಯಕ್ಕೆ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.
ರಾಜಾದ್ಯಂತ ಆಗಿರುವ ಈ ಸಮಸ್ಯೆಗೆ ನೆರವು ನೀಡಲು ಹೋರಾಟಕ್ಕಾಗಿ ಜಿಲ್ಲಾ ಬಿಜೆಪಿ ಪಹಣಿ ಪರಿಶೀಲನಾ ಅಭಿಯಾನ ಕೈಗೊಂಡಿದೆ. ಯಾರೇ ಆಗಿರಲಿ ವಕ್ಪ್ ಬೋರ್ಡ್ ನಿಂದ ಸಮಸ್ಯೆ ಹೊಂದಿದ್ದಲ್ಲಿ 98450-95092 ನಂಬರ್ಗೆ ಕರೆ ಮಾಡಿ, ಇಲ್ಲವೇ ವಾಟ್ಸಪ್ ಮೂಲಕ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಗೆ ನೀಡಲು ಬಿಡುವುದಿಲ್ಲ. ಹೋರಾಟವನ್ನು ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗುವುದು. ಸಂಪೂರ್ಣವಾಗಿ ಕೈಬಿಡುವವರೆಗೆ ಹೋರಾಟ ನಿಲ್ಲದು. ರೈತರ ಜಮೀನುಗಳಿಗೆ ಕೈ ಹಾಕುವ ಕಾಂಗ್ರೆಸ್ ಸರ್ಕಾರ ವಿಷಯಾಂತರ ಮಾಡಲು ಏನೇನೋ ನಾಟಕ ಮಾಡುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ನೊಟೀಸ್ ನೀಡಲಾಗಿತ್ತು ಎಂಬ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಇದರ ವಿರುದ್ಧ ಹೋರಾಡೋಣ. ವಕ್ಫ್ ಹೆಸರಿನಲ್ಲಿ ಮಸೀದಿ, ಮದರಸಾಗಳಿಗೆ ನೀಡುವುದನ್ನು ತಪ್ಪಿಸೋಣ ಎಂದು ಕರೆ ನೀಡಿದರು.
ರಸ್ತೆ ತಡೆ, ಮಾತಿನ ಚಕಮಕಿ
ಪಾಲಿಕೆ ಸಮೀಪ ಬಂದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ವೇಳೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು. ಆದರೆ ಪ್ರತಿಭಟನಾಕಾರರು ಧರಣಿ ಹಿಂಪಡೆಯಲು ಒಪ್ಪಲಿಲ್ಲ. ಆಗ ಪೊಲೀಸರು ಪ್ರತಿಭಟನಾಕಾರರನ್ನು ಧರಧರನೇ ಎಳೆದು ವ್ಯಾನಿಗೆ ತುಂಬಿಕೊಂಡರು. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ, ಶ್ರೀನಿವಾಸ್ ಸೇರಿದಂತೆ ಸುಮಾರು 50 ರಿಂದ 70 ಪ್ರತಿಭಟನಾಕಾರರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋದರು. ಬಂಧಿಸಿ, ಆಬಳಿಕ ಬಿಡುಗಡೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಯಲ್ಲಿ ಗಾಯತ್ರಿ ಸಿದ್ದೇಶ್ವರ, ಎಂ.ಪಿ.ರೇಣುಕಾಚಾರ್ಯ, ಯಶವಂತ ರಾವ್ ಜಾಧವ್, ಎಂ.ಬಸವರಾಜ್ ನಾಯ್ಕ, ಜಿ.ಎಸ್.ಅನೀತ್ ಕುಮಾರ್, ಲೋಕಿಕೆರೆ ನಾಗರಾಜ್, ಹೆಚ್.ಪಿ.ರಾಜೇಶ್, ಡಾ.ಎ.ಹೆಚ್. ಶಿವಯೋಗಿ ಸ್ವಾಮಿ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ಕುಮಾರ್ ನಾಯ್ಕ, ಶಿವನಹಳ್ಳಿ ರಮೇಶ್, ಗುರುನಾಥ, ಶಿವಾನಂದ, ಐರಣಿ ಕುಮಾರ್, ಮಾಜಿ ಮೇಯರ್ ಬಿ.ಜಿ.ಅಜಯ್ ಕುಮಾರ್, ಪ್ರಸನ್ನ ಕುಮಾರ್, ಪೈಲ್ವಾನ್ ಕೆ.ಎಂ.ವೀರೇಶ್, ಇತರರು ಇದ್ದರು.